ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ರೈತರು ಹರಳು ರೂಪದ ರಸಗೊಬ್ಬರಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿ ನ್ಯಾನೋ ರಸಗೊಬ್ಬರ ಬಳಸುವುದರಿಂದ ಭೂಮಿಯು ಫಲವತ್ತತೆ ಕಳೆದುಕೊಳ್ಳುವುದಿಲ್ಲ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಕೃಷಿ ಇಲಾಖೆ ಹಾಗೂ ಕೋರಮಂಡಲ ಇಂಟರ್‌ನ್ಯಾಷನಲ್ ಲಿಮಿಟೆಡ್ ಸಂಸ್ಥೆ ಸಹಭಾಗಿತ್ವದಲ್ಲಿ ತಾಲೂಕಿನ ಕಸಬಾ ಹೋಬಳಿಯ ಡಿ.ಸಾತೇನಹಳ್ಳಿಯ ರೈತ ಪುಟ್ಟಸ್ವಾಮಿ ಅವರ ಜಮೀನಿನಲ್ಲಿ ಶನಿವಾರ ಕಬ್ಬಿನ ಬೆಳೆಗೆ ನ್ಯಾನೋ ರಸಗೊಬ್ಬರವನ್ನು ಆತ್ಮ ಯೋಜನೆಯಲ್ಲಿ ಡ್ರೋಣ್ ಮೂಲಕ ಸಿಂಪಡಣೆ ಪ್ರಾತ್ಯಕ್ಷಿಕೆ ವೀಕ್ಷಿಸಿ ಅವರು ಮಾತನಾಡಿದರು.
ಕೃಷಿಗೆ ಬಳಸುವ ಹರಳು ರೂಪದ ರಸಗೊಬ್ಬರದಲ್ಲಿ ಶೇ.೩೦ರಿಂದ ೫೦ರಷ್ಟು ಮಾತ್ರ ಬೆಳೆಗಳಿಗೆ ಬಳಕೆಯಾಗುತ್ತದೆ. ಉಳಿದಂತೆ, ಪರಿಸರದ ಇತರೆ ಮೂಲಗಳಲ್ಲಿ ಶೇಖರಣೆ ಯಾಗುತ್ತದೆ. ಈ ಗೊಬ್ಬರ ಬೆಳೆಗಳಿಗೆ ಸಾರಜನಕ ರೂಪದಲ್ಲಿ ಅತ್ಯಂತ ಉಪಯುಕ್ತ ಪೋಷಕಾಂಶ ಮೂಲವಾಗಿದ್ದರೂ ಅತಿಯಾದ ಯೂರಿಯಾ ಬಳಕೆ ಮಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಕೃಷಿ ತಜ್ಞರು ಹೇಳುತ್ತಾರೆ. ನ್ಯಾನೋ ಗೊಬ್ಬರ ದ್ರಾವಣ ರೂಪದ ಗೊಬ್ಬರವಾಗಿದೆ. ಕೃಷಿಯಲ್ಲಿ ಸಸಿಗಳ ಪೋಷಣೆಗೆ ಅವಶ್ಯಕವಾದ ಪೋಷಕಾಂಶ ತಲುಪಿಸಲು ದೇಶದ ನಾನಾ ಸಂಸ್ಥೆಗಳು ದ್ರವರೂಪದ ನ್ಯಾನೋ ರಸಗೊಬ್ಬರವನ್ನು ಸ್ವತಂತ್ರ ಪೇಟೆಂಟ್ ಅಡಿ ಸಿದ್ಧಪಡಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಇದು ರೈತನ ಭೂಮಿಯ ಫಲವತ್ತತೆಯನ್ನು ಕಾಪಾಡುತ್ತದೆ. ಪರಿಸರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನ್ಯಾನೋ ಯೂರಿಯಾ ಬಳಕೆಯು ಆರೋಗ್ಯಕರ ಪರಿಸರ, ಜಾಗತಿಕ ತಾಪಮಾನ, ಉತ್ತಮ ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟದ ದೃಷ್ಟಿಯಿಂದ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಯೂರಿಯಾದಂತೆ ಇದು ಮಣ್ಣಿನಲ್ಲಿ ಉಳಿಯದೆ ಸಂಪೂರ್ಣವಾಗಿ ಬಳಕೆಯಾಗಿ ಗಿಡಕ್ಕೆ ಒದಗುತ್ತದೆ. ಇದರಿಂದಾಗಿ ಅಂತರ್ಜಲ ಕಲುಷಿತವಾಗುವುದಿಲ್ಲ. ಖರ್ಚು ಕಮ್ಮಿ, ಹೆಚ್ಚು ವಿಸ್ತೀರ್ಣದ ಭೂಮಿಯಲ್ಲಿ ಬಳಕೆ ಮಾಡಬಹುದು.ವಿವಿಧ ಕಂಪನಿಯ ೫೦೦ ಮಿ. ಲೀ. ಸಾಮರ್ಥ್ಯದ ದ್ರವ ರೂಪದ ನ್ಯಾನೋ ಯೂರಿಯಾ ಬೆಲೆ ೨೨೫ ಇದೆ. ಒಂದು ಎಕರೆಗೆ ಒಂದು ಬಾಟಲು ಸಾಕಾಗುತ್ತದೆ. ನ್ಯಾನೋ ಡಿಎಪಿ ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಲ್ಲಿ ೮ ಪ್ರತಿಶತ ಸಾರಜನಕ ಹಾಗೂ ೧೬ ಪ್ರತಿಶತ ರಂಜಕ ಇದೆ. ಇದರ ೫೦೦ಗೆ ೬೦೦ ರು. ಇದೆ. ಹರಳು ರೂಪದ ಡಿಎಪಿಗೆ ೧೩೦೦ ಇದೆ. ಎಕರೆ ಬೆಳೆಗೆ ನ್ಯಾನೋ ದ್ರಾವಣ ಸಿಂಪಡಣೆಗೆ ಕಂಪನಿಯವರು ಡ್ರೋಣ್ ಪೂರೈ ಸಲು ೪೦೦ರಿಂದ ೪೫೦ ದರ ನಿಗದಿಪಡಿಸಿದ್ದಾರೆ. ಒಟ್ಟಾರೆ ೬೫೦ರಿಂದ ೭೦೦ ವೆಚ್ಚದಲ್ಲಿ ಒಂದು ಎಕರೆ ಬೆಳೆಗೆ ಯೂರಿಯಾ ದ್ರಾವಣ ಸಿಂಪಡಣೆ ಕಾರ್ಯ ಪೂರ್ಣಗೊಳ್ಳುತ್ತದೆ.
ನ್ಯಾನೋ ಗೊಬ್ಬರ ರೈತರಿಗೆ ವರದಾನವಾಗಿದ್ದು ೪೫ ಕೆ.ಜಿ. ತೂಕದ ಹರಳು ರೂಪದ ಯೂರಿಯಾ ಚೀಲದ ದರ ೨೬೮ ಇದೆ. ಕೊರತೆ ಸಂದರ್ಭ ಈ ದರ ಮಾರಾಟಗಾರ ರಿಂದಲೇ ದ್ವಿಗುಣಗೊಳ್ಳುವ ಸಾಧ್ಯತೆಯೂ ಇದೆ ಮತ್ತು ಸಾಗಣೆ ವೆಚ್ಚವೂ ಪ್ರತ್ಯೇಕ. ಬೆಳೆಗಳಿಗೆ ಗೊಬ್ಬರ ಇಡಲು ೪೦೦ರಿಂದ ೫೦೦ರಂತೆ ಇಬ್ಬರಿಗಾದರೂ ಕೂಲಿ ನೀಡಬೇಕು. ಇದರ ಒಟ್ಟಾರೆ ಖರ್ಚು ೧,೦೦೦ಕ್ಕೂ ಅಧಿಕ. ಹೀಗಾಗಿ ನ್ಯಾನೋ ಯೂರಿಯಾ ಸಿಂಪಡಣೆಯು ರೈತರಿಗೆ ಆರ್ಥಿಕವಾಗಿ ವರದಾನವಾಗಿದೆ. ಡ್ರೋಣ್ ಮೂಲಕ ಕಾರ್ಯ ನಿರ್ವಹಿಸುವುದರಿಂದ ಸಮಯವೂ ಉಳಿತಾಯವಾಗುತ್ತದೆ. ಮಣ್ಣಿನ ಆರೋಗ್ಯವೂ ಹೆಚ್ಚುತ್ತದೆ. ರೈತರು ತಮ್ಮ ಖರ್ಚನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ನ್ಯಾನೋ ರಸಗೊಬ್ಬರ ಬಳಸುವುದರಿಂದ ಉತ್ತಮ ಫಸಲು ಪಡೆಯಬಹುದು. ಆದರೆ, ಇದರ ಬಳಕೆ ಬಗ್ಗೆ ಇನ್ನಷ್ಟು ರೈತರಿಗೆ ಅರಿವು ಮೂಡಿಸಬೇಕಿದೆ. ಇಷ್ಟೆಲ್ಲ ಉಪಯುಕ್ತ ಇರುವ ನ್ಯಾನೋ ಯೂರಿಯಾ ಬಳಕೆ ಬಗ್ಗೆ ಕೃಷಿ ಇಲಾಖೆಯು ರೈತ ಸಮುದಾಯಕ್ಕೆ ಇನ್ನೂ ಹೆಚ್ಚಿನ ಮಾಹಿತಿ ನೀಡಬೇಕಿದೆ ಎಂದು ತಿಳಿಸಿದರು.ಸಹಾಯಕ ಕೃಷಿ ನಿರ್ದೇಶಕ ಕೆ.ಮೋಹನ್ ಕುಮಾರ್ ಮಾತನಾಡಿ, ಹರಳುರೂಪದ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು ನಿರೀಕ್ಷಿತ ಪ್ರಮಾಣದಷ್ಟು ಲಭ್ಯತೆ ಇಲ್ಲದ ಕಾರಣಕ್ಕೆ ರಾಜ್ಯ ಕೃಷಿ ಇಲಾಖೆ ಹರಳು ರೂಪದ ಯೂರಿಯಾಕ್ಕೆ ಪರ್ಯಾಯವಾಗಿ ದ್ರವ ರೂಪದ ನ್ಯಾನೋ ಯೂರಿಯಾ ಗೊಬ್ಬರಕ್ಕೆ ಪ್ರೋತ್ಸಾಹ ನೀಡಲಾರಂಭಿಸಿದೆ. ಇದರ ಜತೆಗೆ ನ್ಯಾನೋ ನ್ಯಾನೋ ಡಿಎಪಿ ಬಂದಿದೆ. ನ್ಯಾನೋ ಯೂರಿಯಾ ನೈಟ್ರೋಜನ್ ನ್ಯಾನೋ ರೂಪದಲ್ಲಿರುತ್ತದೆ. ೨೦-೫೦ ಮೈಕ್ರಾನ್ಸ್‌ನಲ್ಲಿರುತ್ತದೆ ಇರುವುದರಿಂದ ಸಸಿಗಳ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಇದೇ ವೇಳೆ ಡ್ರೋಣ್‌ಗೆ ಸಂಪರ್ಕಿಸಲ್ಪಟ್ಟ ಕ್ಯಾನ್‌ನಲ್ಲಿ ೯ ಲೀ. ನೀರು ಮತ್ತು ಅರ್ಧ ಲೀಟರ್ ನ್ಯಾನೋ ಯೂರಿಯಾ ಮತ್ತು ಅರ್ಧ ಲೀಟರ್ ನ್ಯಾನೋ ಡಿಎಪಿ ಗೊಬ್ಬರ ಹಾಕಿ ಕಬ್ಬಿನ ಬೆಳೆಗೆ ಸಿಂಪಡಿಸಲಾಯಿತು.