ಕನ್ನಡಪ್ರಭ ವಾರ್ತೆ ಮಣಿಪಾಲಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಪ್ರತಿಷ್ಠಿತ ನೇಚರ್ ರಿಸರ್ಚ್ ಗ್ರೂಪ್ ವತಿಯಿಂದ ಇಲ್ಲಿನ ಮಣಿಪಾಲ್ ಅಕಾಡೆಮಿ ಆಫ್ ಎಜ್ಯುಕೇಶನ್ (ಮಾಹೆ)ನಲ್ಲಿ ಒಂದು ವಾರ ಕಾಲ ನ್ಯಾನೋ ವಿಜ್ಞಾನ ಮತ್ತು ನ್ಯಾನೋ ತಂತ್ರಜ್ಞಾನದ ಬಗ್ಗೆ ಅಂತಾರಾಷ್ಟ್ರೀಯ ಸಮ್ಮೇಳನ ಫೆ.26ರಿಂದ ಮಾ.1ರ ವರೆಗೆ ನಡೆಯಲಿದೆ.ಈ ಬಗ್ಗೆ ಮಾಹೆಯ ಉಪಕುಲಪತಿ ಡಾ.ಎಂ.ಡಿ.ವೆಂಕಟೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನೇಚರ್ ರಿಸರ್ಚ್ ಗ್ರೂಪ್‌ನಿಂದ ಈ ಹಿಂದೆ ಚೀನಾ, ಕೊರಿಯಾ, ಜಪಾನ್ ಮುಂತಾದ ದೇಶಗಳಲ್ಲಿ ಇಂತಹ ಸಮ್ಮೇಳನಗಳು ನಡೆದಿದ್ದರೂ, ಭಾರತದಲ್ಲಿ ಇದೇ ಪ್ರಥಮ ಬಾರಿಗೆ, ಅದೂ ಮಾಹೆಯ ಆಶ್ರಯದಲ್ಲಿ ನಡೆಯುತ್ತಿದೆ. ಇದರಲ್ಲಿ 200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮಟ್ಟದ ತಜ್ಞರು ನ್ಯಾನೋ ತಂತ್ರಜ್ಞಾನದಲ್ಲಿ ಆಗಿರುವ ಅತ್ಯಾಧುನಿಕ ಪ್ರಗತಿಗಳ ಬಗ್ಗ ಚರ್ಚೆ ನಡೆಸಲಿದ್ದಾರೆ.ಫೆ.26 ಮತ್ತು 27ರಂದು ನಡೆಯುವ ನೇಚರ್ ಕಾನ್ಫರೆನ್ಸ್‌ನಲ್ಲಿ ಕಳೆದೊಂದು ದಶಕದಲ್ಲಿ ನ್ಯಾನೋ ಮೆಟಿರಿಯಲ್ ಅಪ್ಲಿಕೇಶನ್‌ನಲ್ಲಿ ಗಮನಾರ್ಹ ಕೊಡುಗೆ ನೀಡಿದ 60 ಮಂದಿ ಸಂಶೋಧಕರು ನ್ಯಾನೋ ತಂತ್ರಜ್ಞಾನ ಮತ್ತು ಬಯೋ ಮೆಡಿಕಲ್ ಕ್ಷೇತ್ರಕ್ಕೆ ಅದರ ಕೊಡುಗೆಗಳ ಬಗ್ಗೆ ಪ್ರಬಂಧಗಳನ್ನು ಮಂಡಿಸಲಿದ್ದಾರೆ.ಫೆ.28ರಂದು ನೇಚರ್ ಮಾಸ್ಟರ್ ಕ್ಲಾಸ್‌ನಲ್ಲಿ ನೇಚರ್ ಪೋರ್ಟ್ ಪೋಲಿಯಾದ ಸಂಪಾದಕೀಯ ವ್ಯವಸ್ಥಾಪಕ ಡಾ.ಹ್ಯಾರಿ ಶೆರ್ಲಿ ನೇತೃತ್ವದಲ್ಲಿ ಪರಿಣಾಮಕಾರಿ ಪ್ರಕಾಶನ ಮತ್ತು ಸಂವಹನ ತಂತ್ರ ಕಾರ್ಯಾಗಾರ ನಡೆಯಲಿದೆ.ಫೆ.29ರಿಂದ ಮಾ.1ರ ವರೆಗೆ ನ್ಯಾನೋ ವಿಜ್ಞಾನ ಮತ್ತು ನ್ಯಾನೋ ತಂತ್ರಜ್ಞಾನ ಸಮ್ಮೇಳನದಲ್ಲಿ ಈ ಕ್ಷೇತ್ರದ ಹೊಸ ಸಂಶೋಧಕರು, ವೈದ್ಯರು ಮತ್ತು ಶಿಕ್ಷಣತಜ್ಞರು ವಿಚಾರ ವಿನಿಮಯ ಮಾಡಲಿದ್ದಾರೆ ಎಂದರು.ನ್ಯಾನೋ ತಂತ್ರಜ್ಞಾನ ಬಹುಶಿಸ್ತೀಯ ಕ್ಷೇತ್ರವಾಗಿದ್ದು, ಸಿವಿಲ್, ವೈದ್ಯಕೀಯ, ಆರೋಗ್ಯ ಕ್ಷೇತ್ರಗಳಲ್ಲಿಯೂ ಬಳಕೆಗೆ ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ ಮಾಹೆಯ ವಿವಿಧ ಸಂಸ್ಥೆಯಡಿ 30ಕ್ಕೂ ಹೆಚ್ಚು ಮಂದಿ ವಿಜ್ಞಾನಿಗಳು ನ್ಯಾನೋ ತಂತ್ರಜ್ಞಾನದಲ್ಲಿ ಸಂಶೋಧನೆಗಳನ್ನು ಮಾಡುತ್ತಿದ್ದಾರೆ ಎಂದವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾಹೆಯ ಸಹಕುಲಾಧಿಪತಿಗಳಾದ ಡಾ.ಶರತ್ ರಾವ್ ಕೆ., ಡಾ. ನಾರಾಯಣ್ ಸಭಾಹಿತ್, ಡಾ.ಎನ್.ಎನ್.ಶರ್ಮ ಮುಂತಾದವರಿದ್ದರು.