ಕನ್ನಡಪ್ರಭ ವಾರ್ತೆ ನಾಪೋಕ್ಲು
ಕುಂಜಿಲ, ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಂದೋಡ ಗ್ರಾಮದ ನೀಡುಮಂಡ ಹರೀಶ್ ಎಂಬವರಿಗೆ ಸೇರಿದ ಕೆರೆ ತಟ್ಟು ಎಂಬಲ್ಲಿಯ ಕಾಫಿ ತೋಟದಲ್ಲಿ ಗುರುವಾರ ಕಾಡಾನೆ ಸಂಚರಿಸಿದೆ. ಇದರಿಂದಾಗಿ ಫಸಲು ಬರಿತ ಕಾಫಿ ಗಿಡಗಳು ಮುರಿದು ನಷ್ಟ ಸಂಭವಿಸಿದೆ. ಈ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಉಪಟಳದಿಂದಾಗಿ ಕಾಫಿ, ಅಡಕೆ, ಬಾಲೆ, ತೆಂಗು ಸೇರಿದಂತೆ ಮತ್ತಿತರ ಗಿಡಗಳನ್ನು ತಿಂದು, ತುಳಿದು ಧ್ವಂಸಗೊಳಿಸುತ್ತಿವೆ. ಇದೀಗ ಕಾಫಿ ಫಸಲು ಕೊಯ್ಲಿನ ಸಮಯವಾಗಿರುವುದರಿಂದ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದು, ಬೆಳಗಾರರಿಗೆ ಸಮಸ್ಯೆಯಾಗಿದೆ.
ಕೂಡಲೇ ಕಾಡಾನೆಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ನಷ್ಟಕ್ಕೆ ಒಳಗಾದ ಬೆಳೆಗಾರರಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.