ಎಸ್.ಜಿ. ತೆಗ್ಗಿನಮನಿ
ನರಗುಂದ: ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣೆಯಲ್ಲಿ ನರಗುಂದ ಪುರಸಭೆ ಈ ಬಾರಿ ಗಮನ ಸೆಳೆದಿದ್ದು, ನರಗುಂದ ಪಟ್ಟಣವು ರಾಜ್ಯದಲ್ಲಿ 8ನೇ ಸ್ಥಾನ ಪಡೆದಿದ್ದು, ಸ್ಥಳೀಯರಲ್ಲಿ ಹರ್ಷ ತಂದಿದೆ. ಕಳೆದ ಕೆಲವು ವರ್ಷಗಳಿಂದ ಪಟ್ಟಣದಲ್ಲಿ ಸ್ವಚ್ಛತೆ ಕಾರ್ಯ ಚುರುಕಾಗಿ ನಡೆಯುತ್ತಿದೆ. 2023ನೇ ಸಾಲಿನಲ್ಲಿ ರಾಜ್ಯದ 292 ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ನರಗುಂದ ಪುರಸಭೆ 8ನೇ ಸ್ಥಾನ ಪಡೆದಿರುವುದು ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಸ್ವಚ್ಛತೆ ಕಾರ್ಯ ನಡೆಸಲು ಸ್ಫೂರ್ತಿ ಬಂದಂತಾಗಿದೆ. ಶುದ್ಧ ನೀರು: ಈ ಬಾರಿಯ ಸರ್ವೇಕ್ಷಣೆಯಲ್ಲಿ ಪುರಸಭೆ ಶುದ್ಧ ಕುಡಿಯುವ ನೀರಿನ ಪೂರೈಕೆ ವಿಷಯದಲ್ಲಿ ಶೇ. 67ರಷ್ಟು ಅಂಕ ಪಡೆದಿದೆ. ಅದೇ ರೀತಿ ಮನೆ ಮನೆ ಕಸ ಸಂಗ್ರಹಣೆ ಶೇ. 82, ವಸತಿ ಪ್ರದೇಶಗಳಲ್ಲಿ ಸ್ವಚ್ಛತೆ ಶೇ. 92, ಮಾರುಕಟ್ಟೆ ಪ್ರದೇಶದಲ್ಲಿ ಸ್ವಚ್ಛತೆ ಶೇ. 93 ಸಾಧನೆ ಮಾಡಿದೆ. ಆದರೆ, ಸಾರ್ವಜನಿಕ ಶೌಚಾಲಯ ನಿರ್ವಹಣೆಯಲ್ಲಿ ಕೇವಲ ಶೇ. 67, ತ್ಯಾಜ್ಯ ಮರುಬಳಕೆಯಲ್ಲಿ ಶೇ. 64 ಹಾಗೂ ಕಸ ವಿಂಗಡಣೆಯಲ್ಲಿ ಶೇ. 7ರಷ್ಟು ಕಳಪೆ ಸಾಧನೆ ದಾಖಲಿಸಿದೆ.ನರಗುಂದ ಪುರಸಭೆ ಉತ್ತಮ: ಜಿಲ್ಲೆಯಲ್ಲಿ ನರಗುಂದ ಬಿಟ್ಟರೆ ಮುಂಡರಗಿ, ಗದಗ -ಬೆಟಗೇರಿ ನಗರಸಭೆ ಉತ್ತಮ ಸಾಧನೆ ಮಾಡಿವೆ. ಮುಂಡರಗಿ 13, ಗದಗ-ಬೆಟಗೇರಿ ನಗರಸಭೆ 16ನೇ ಸ್ಥಾನ ಪಡೆದಿದೆ. ಉಳಿದ ಸ್ಥಳೀಯ ಸಂಸ್ಥೆಗಳಲ್ಲಿ ಕಳಪೆ ಸಾಧನೆಯಾಗಿದೆ. ಗಜೇಂದ್ರಗಡ ಪುರಸಭೆ 119, ಲಕ್ಷ್ಮೇಶ್ವರ 139, ರೋಣ 142, ಮುಳಗುಂದ ಪಪಂ 38, ನರೇಗಲ್ ಪಪಂ 62 ಹಾಗೂ ಶಿರಹಟ್ಟಿ ಪಪಂ 59ನೇ ಸ್ಥಾನದಲ್ಲಿವೆ.ನರಗುಂದ ಪುರಸಭೆ ವಸತಿ ಪ್ರದೇಶ ಮತ್ತು ಮಾರುಕಟ್ಟೆ ವ್ಯಾಪ್ತಿಯಿಂದ ಕಸ ಸಂಗ್ರಹಣೆಯನ್ನು ಪರಿಣಾಮಕಾರಿಯಾಗಿ ಮಾಡುತ್ತಿದೆ. ಆದರೆ, ಕಸ ವಿಲೇವಾರಿ, ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಉತ್ತಮ ಸಾಧನೆಯಾಗಬೇಕಿದೆ.
ಸಿಬ್ಬಂದಿ ಕೊರತೆ: ಪಟ್ಟಣದ ಪುರಸಭೆಯಲ್ಲಿ ಒಟ್ಟು 56 ಪೌರ ಕಾರ್ಮಿಕರಲ್ಲಿ ಕೇವಲ 32 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆ ನಡುವೆಯೂ ಈ ಸಾಧನೆ ಮಾಡಿರುವುದು ಸಂತಸ ತಂದಿದೆ. ಹಿರಿಯ ಆರೋಗ್ಯ ನಿರೀಕ್ಷಕರಾದ ಸಂಗಮೇಶ ಬ್ಯಾಳಿ, ಕಿರಿಯ ಆರೋಗ್ಯ ನಿರೀಕ್ಷಕಿ ಪ್ರೀತಿ ಗವಿಮಠ ಮತ್ತು ಪೌರ ಕಾರ್ಮಿಕರು, ಪುರಸಭೆ ಆಡಳಿತ ಮಂಡಳಿಯವರು ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ.ನರಗುಂದ ಪುರಸಭೆ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಪೌರ ಕಾರ್ಮಿಕರು ಮತ್ತು ಸಿಬ್ಬಂದಿ ವರ್ಗದವರ ಸ್ವಚ್ಛತೆ ಕಾರ್ಯದಲ್ಲಿ ಸತತ ಪ್ರಯತ್ನದಿಂದ 8ನೇ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.ಪಟ್ಟಣದಲ್ಲಿ ನಾನು ಅಧಿಕಾರ ವಹಿಸಿಕೊಂಡ ಆನಂತರ ಸ್ವಚ್ಛತೆಗೆ, ತ್ಯಾಜ್ಯ ವಸ್ತುಗಳ ಮರು ಬಳಕೆ, ಶುದ್ಧ ಕುಡಿಯುವ ನೀರು ಪೂರೈಕೆ, ಕರ ವಸೂಲಿ ಸೇರಿದಂತೆ ಎಲ್ಲಾ ಕಾರ್ಯಗಳನ್ನು ಪುರಸಭೆ ಎಲ್ಲ ಸಿಬ್ಬಂದಿ ತಂಡ ಮಾಡಿಕೊಂಡು ಈ ಕಾರ್ಯ ಮಾಡಿದ್ದರಿಂದ ನಮ್ಮ ಪುರಸಭೆ ಸ್ವಚ್ಛತೆಯಲ್ಲಿ 8ನೇ ಸ್ಥಾನ ಪಡೆದಿರವುದು ಹರ್ಷ ತಂದಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಅಮಿತ್ ತಾರದಾಳ ಹೇಳಿದರು.