34 ಕೋಟಿ ರುಪಾಯಿ ವೆಚ್ಚದ ಸೇತುವೆ ಕಾಮಗಾರಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕು ಕೇಂದ್ರದಿಂದ ಹೊನ್ನೆಕೂಡಿಗೆ ಮತ್ತಿತರ ಗ್ರಾಮಗಳಿಗೆ ಹೋಗಲು ಹಳೇ ಹೆಬ್ಬೆ ರಸ್ತೆಯ ಭದ್ರಾ ಹಿನ್ನೀರಿನಲ್ಲಿ ನಿರ್ಮಿಸುತ್ತಿರುವ ಅಂದಾಜು 34 ಕೋಟಿ ರು. ವೆಚ್ಚದ ಸೇತುವೆ ಕಾಮಗಾರಿ 2024ರ ಏಪ್ರಿಲ್ ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ಶ್ರೀನಿವಾಸ್ ಹೇಳಿದರು.
ಸಂಪರ್ಕ ಸೇತುವೆ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಭದ್ರಾ ಅಣೆಕಟ್ಟು ನಿರ್ಮಾಣ ಮಾಡುವ ಮುಂಚೆ ಹೊನ್ನೇಕೊಡಿಗೆ ಗ್ರಾಮಸ್ಥರು ನರಸಿಂಹರಾಜಪುರ ಪಟ್ಟಣಕ್ಕೆ ಬರ ಬೇಕಾದರೆ ಕೇವಲ 8 ಕಿ.ಮೀ. ಮಾತ್ರ ದೂರವಿತ್ತು. ಆದರೆ, ಭದ್ರಾ ಆಣೆಕಟ್ಟು ಕಟ್ಟಿದ ನಂತರ ಭದ್ರಾ ಹಿನ್ನೀರು ನಿಂತ ಪರಿಣಾಮ ಹೊನ್ನೇ ಕೊಡಿಗೆ ಮತ್ತಿತರ ಗ್ರಾಮದ ಜನರು ನರಸಿಂಹರಾಜಪುರ ಪಟ್ಟಣಕ್ಕೆ ಬರಬೇಕಾದರೆ 20 ಕಿ.ಮೀ.ಸುತ್ತು ಬಳಸಿ ಬರಬೇಕಾಗಿತ್ತು. ಈ ಸಮಸ್ಯೆ ಬಗ್ಗೆ ಗ್ರಾಮಸ್ಥರು ನನಗೆ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ನರಸಿಂಹರಾಜಪುರಕ್ಕೆ ಬಂದಾಗ ಮನವಿ ಸಲ್ಲಿಸಿದ್ದರು.ನಾನು ಈ ಸೇತುವೆ ನಿರ್ಮಾಣದ ಬಗ್ಗೆ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆ. ನನ್ನ ಮನವಿಗೆ ಸ್ಪಂದಿಸಿ ಸಿದ್ದರಾಮಯ್ಯ ಅವರು ಸೇತುವೆ ನಿರ್ಮಾಣಕ್ಕೆ ಮೊದಲು 20 ಕೋಟಿ ರು. ಮಂಜೂರು ಮಾಡಿಸಿ ಶಂಕು ಸ್ಥಾಪನೆ ನೆರವೇರಿಸಿದ್ದರು. ಈಗಾಗಲೇ ಇದರ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆ ಯಾಗಬೇಕಾಗಿತ್ತು. ಆದರೆ, ಸ್ವಲ್ಪ ವಿಳಂಬವಾಗಿದೆ. ಸೇತುವೆ ಕಾಮಗಾರಿಗೆ ಸಿದ್ದರಾಮಯ್ಯ ಅತಿ ಹೆಚ್ಚು ಅನುದಾನ ನೀಡಿದ್ದು, ನರಸಿಂಹರಾಜಪುರದಲ್ಲಿ ದೊಡ್ಡ ಸೇತುವೆ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಅವರಿಗೆ ಅಭಿನಂದಿಸುತ್ತೇನೆ. ಸೇತುವೆ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಐವರು ಸಚಿವರು ಆಗಮಿಸಲಿದ್ದು ಶೀಘ್ರದಲ್ಲೇ ಉದ್ಘಾಟನೆ ದಿನಾಂಕ ನಿಗದಿ ಗೊಳಿಸಲಾಗುವುದು. ಸ್ಥಳೀಯ ಶಾಸಕರು ಸೇತುವೆ ಕಾಮಗಾರಿ ಬೇಗ ಮುಗಿಸಲು ಗಮನ ಹರಿಸಬೇಕು ಎಂದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್.ಸದಾಶಿವ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸುನೀಲ್ ಕುಮಾರ್, ಕಾಫಿ ಬೆಳೆಗಾರ ನಾರಾಯಣಮೂರ್ತಿ ಇದ್ದರು.