- ಸಚಿವ ಮಧು ಬಂಗಾರಪ್ಪ ವಿರುದ್ಧ ಬಹಿರಂಗ ಆಕ್ರೋಶ ಹೊರಹಾಕಿದ ಸ್ವಾಮೀಜಿ- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಧುಗೆ ಈಡಿಗ ಸಮಾಜದಿಂದ ಪಾಠ
ಕನ್ನಡಪ್ರಭ ವಾರ್ತೆ ದಾವಣಗೆರೆ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಸಮಾರಂಭವನ್ನು ರಾಜ್ಯ ಸರ್ಕಾರದಿಂದ ಆ.28ರಂದು ಸಂಜೆ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದು, ಸಮಾರಂಭದ ಆಹ್ವಾನ ಪತ್ರಿಕೆಯಿಂದ ಶ್ರೀ ಪ್ರಣವಾನಂದ ಸ್ವಾಮಿಗಳ ಹೆಸರನ್ನೇ ಕೈಬಿಟ್ಟಿರುವುದಕ್ಕೆ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಆಚರಿಸುವ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವಕ್ಕೆ ಈಡಿಗ ಸಮುದಾಯದ ಎಲ್ಲ ಏಳೂ ಜನ ಸ್ವಾಮೀಜಿಗಳನ್ನು ಆಹ್ವಾನಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ, ಹೆಸರು ಕೈಬಿಟ್ಟಿರುವ ಬಗ್ಗೆ ಸಚಿವ ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.ಸರ್ಕಾರ, ವಿಪಕ್ಷ ನಾಯಕರಾದ ಸುನಿಲಕುಮಾರ, ಕೋಟ ಶ್ರೀನಿವಾಸ ಪೂಜಾರಿ ಮಧ್ಯಸ್ಥಿಕೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವ ಶಿವರಾಜ ತಂಗಡಗಿ ಜೊತೆಗೆ ಚರ್ಚಿಸಿದ್ದರು. ಅನಂತರ ಈಡಿಗ ಸಮುದಾಯದ ಎಲ್ಲಾ ಏಳೂ ಸ್ವಾಮೀಜಿಗಳನ್ನೂ ಆಹ್ವಾನಿಸಲು ಸರ್ಕಾರ ಒಪ್ಪಿತ್ತು. ಅದರಂತೆ ಮೂರು ದಿನಗಳ ಹಿಂದೆ ಏಳೂ ಸ್ವಾಮೀಜಿಗಳ ಹೆಸರನ್ನು ಒಳಗೊಂಡಿದ್ದ ಆಹ್ವಾನ ಪತ್ರಿಕೆಯನ್ನೂ ಸಿದ್ಧಪಡಿಸಲಾಗಿತ್ತು ಎಂದು ಅವರು ಹೇಳಿದರು.
ಶಿವಮೊಗ್ಗದಲ್ಲಿ ಜಿಲ್ಲಾಡಳಿತದಿಂದ ನಡೆಯುವ ಶ್ರೀ ನಾರಾಯಣ ಗುರೂಜಿ ಜಯಂತಿಯಲ್ಲೂ ಈಡಿಗ ಸಮುದಾಯದ ಸಂಘಟನೆಗಳನ್ನೇ ಕಡೆಗಣಿಸಲಾಗಿದೆ. ಬೇಳೂರು ಗೋಪಾಲಕೃಷ್ಣಗೆ ಸಮುದಾಯ ನಾಯಕತ್ವ ನೀಡಬೇಕೆಂಬ ಕಾರಣಕ್ಕೆ ಶಿವಮೊಗ್ಗ ಈಡಿಗ ಸಂಘವನ್ನೇ ಕಾರ್ಯಕ್ರಮದಿಂದ ದೂರವಿಡಲಾಗಿದೆ. ಸಚಿವ ಮಧು ಬಂಗಾರಪ್ಪ 3 ವರ್ಷದಿಂದ ಸಮುದಾಯದ ಕೋಟಾದಲ್ಲಿ ಸಚಿವರಾಗಿದ್ದರೂ ಈಗ ಸಮುದಾಯದ ಅಭಿವೃದ್ಧಿಗೆ ನಿರೀಕ್ಷಿತ ಕೊಡುಗೆ ನೀಡಿಲ್ಲ. ಸಮಾಜದ ಅಭ್ಯುದಯಕ್ಕೆ ಶ್ರಮಿಸುವ ಬದಲಿಗೆ, ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಚಿವ ಸ್ಥಾನಕ್ಕೆ ತಕ್ಷಣವೇ ಮಧು ಬಂಗಾರಪ್ಪ ರಾಜೀನಾಮೆ ನೀಡಲಿ. ಸಿಎಂ ಹಾಗೂ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಕ್ರಮಕ್ಕೆ ಮುಂದಾಗಲಿ. ನಾರಾಯಣ ಗುರು ಶಕ್ತಿಪೀಠ ಹಾಗೂ ಸ್ವಾಮೀಜಿಗಳಿಗೆ ಸಚಿವರು ಅವಮಾನಿಸಿದ್ದಾರೆ. ಮಧು ಬಂಗಾರಪ್ಪನವರ ಇಂತಹ ನಡೆ ಹಾಗೂ ದ್ವೇಷ ರಾಜಕಾರಣವನ್ನು ಸಮುದಾಯ ಎಂದಿಗೂ ಸಹಿಸುವುದಿಲ್ಲ. ಸಚಿವರ ವಿರುದ್ಧ ಈಗಾಗಲೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ಆದೇಶಕ್ಕಾಗಿ ಕಾಯಲಾಗುತ್ತಿದೆ. ಅಲ್ಲದೇ. ಆ.28ರಿಂದ ರಾಜ್ಯಾದ್ಯಂತ ಈಡಿಗಸಮುದಾಯದವರಿಗೆ ಕಪ್ಪು ಪಟ್ಟಿ ಧರಿಸಿ, ಪ್ರತಿಭಟಿಸಲು ಕರೆ ನೀಡಲಾಗಿದೆ ಎಂದು ಅವರು ತಿಳಿಸಿದರು.
- - -
- ಶ್ರೀ ಪ್ರಣವಾನಂದ ಸ್ವಾಮೀಜಿ, ಶ್ರೀ ನಾರಾಯಣ ಗುರು ಶಕ್ತಿ ಪೀಠ.
-27ಕೆಡಿವಿಜಿ4: ದಾವಣಗೆರೆಯಲ್ಲಿ ಗುರುವಾರ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.