ಔಷಧಿ ಅಂಗಡಿಗಳ ತಪಾಸಣೆ ನಡೆಸಲು ಜಿಲ್ಲಾ ಔಷಧ ನಿಯಂತ್ರಕರಿಗೆ ಡಿಸಿ ಆದೇಶ
ಗಾಂಜಾ, ಅಫೀಮು, ಬ್ರೌನ್ ಶುಬರ್ ಸೇರಿದಂತೆ ಮಾದಕ ದ್ರವ್ಯ, ವಸ್ತುಗಳ ಮಾರಾಟ ಕಾನೂನುಬಾಹಿರ ಕೃತ್ಯವಾಗಿದ್ದು, ಮಾನವ ಕುಲಕ್ಕೆ ವಿನಾಶಕಾರಿಯಾದ ಮಾದಕ ವಸ್ತುಗಳ ಕಳ್ಳಸಾಗಾಣೆ ಮತ್ತು ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಾದಕ ದ್ರವ್ಯಗಳ ತಡೆ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾದಕ ವಸ್ತುಗಳು, ದ್ರವ್ಯಗಳನ್ನು ಯುವ ಜನರಿಗ ನೀಡುವ ಮೂಲಕ ಅದರ ದಾಸರಾಗಿ ಮಾಡುತ್ತಿರುವುದರ ವಿರುದ್ಧವೂ ಕಠಿಣ ಕ್ರಮ ನಿಶ್ಚಿತ ಎಂದರು.ಕಾಲೇಜು ವಿದ್ಯಾರ್ಥಿಗಳು, ಯುವ ಜನರನ್ನು ಗುರಿಯಾಗಿಸಿ, ಮಾರಾಟ ಮಾಡುತ್ತಿರುವುದನ್ನು ಕಾಣಬಹುದು. ಇಂತಹ ಮಾದಕ ದ್ರವ್ಯಗಳಿಗೆ ಬಲಿಯಾದಲ್ಲಿ ಅದರಿಂದ ಹೊರ ಬರುವುದು ಕಷ್ಟಕರ ಸಂಗತಿ. ಮಾದಕ ವಸ್ತುಗಳ ಮಾರಾಟ, ಸಾಗಾರ, ಬಳಕೆ ತಡೆಯಬೇಕಾದ್ದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಬಿಹಾರ, ಒಡಿಶಾ, ಉತ್ತರ ಪ್ರದೇಶದ ಕಡೆಯಿಂದ ದಾವಣಗೆರೆ ಕಡೆಗೆ ಮಾದಕ ವಸ್ತುಗಳ ಸಾಗಾಣಿಕೆಯಾಗುತ್ತಿರುವ ಬಗ್ಗೆ ಮಾಹಿತಿ ಇದೆ. ರೈಲ್ವೆ ನಿಲ್ದಾಣಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆಯನ್ನು ಕಡ್ಡಾಯವಾಗಿ ಮಾಡಬೇಕು. ಈ ಬಗ್ಗೆ ರೈಲ್ವೆ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಗಮನ ಹರಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದು ಸೂಚಿಸಿದರು.
ಔಷಧಿ ಅಂಗಡಿಗಳಲ್ಲಿ ನಿಯಮಾನುಸಾರ ಔಷಧಗಳನ್ನು ಮಾರಾಟ ಮಾಡಬೇಕು. ಆದರೆ, ಯಾವುದೇ ರೀತಿಯಲ್ಲೂ ವೈದ್ಯರ ಸಲಹೆ ಇಲ್ಲದೇ, ಸ್ಟಿರಾಯ್ಡ್ ಇರುವ ಔಷಧಗಳನ್ನು ವಿತರಣೆ ಮಾಡಬಾರದು. ಈ ಬಗ್ಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವ ಕೆಲಸ ಜಿಲ್ಲಾ ಔಷಧ ನಿಯಂತ್ರಕ ಅಧಿಕಾರಿಗಳಿಂದ ಆಗಬೇಕು. ಕ್ರಮ ಕೈಗೊಂಡ ಬಗ್ಗೆ ಸಾರ್ವಜನಿಕರಿಗೆ ತಿಳಿಯುವಂತೆ ಪ್ರಕಟಣೆ ನೀಡಬೇಕು ಎಂದು ಆದೇಶಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ್, ಜಿ.ಮಂಜುನಾಥ, ಉಪ ವಿಭಾಗಾಧಿಕಾರಿ ಸಂತೋಷ ಪಾಟೀಲ್, ಡಿಎಸ್ಪಿಗಳಾದ ಬಿ.ಎಸ್.ಬಸವರಾಜ, ಶರಣ ಬಸವೇಶ್ವರ, ಪಿ.ಬಿ.ಪ್ರಕಾಶ ಸೇರಿದಂತೆ ಅಧಿಕಾರಿ, ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.