ನರೇಗಾ ಪಾರದರ್ಶಕತೆಗೆ ಬಲತುಂಬಲು ಆನ್‌ಲೈನ್‌

KannadaprabhaNewsNetwork | Published : Oct 23, 2024 1:56 AM

ಸಾರಾಂಶ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಪಾರದರ್ಶಕತೆ ಹೊಂದಿದ್ದು, ಅದಕ್ಕೆ ಬಲ ತುಂಬಲು ಕ್ರಿಯಾ ಯೋಜನೆಯ ಪ್ರಕ್ರಿಯೆಯನ್ನು ಆನ್‌ಲೈನ್‌ಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಸಿಇಒ ಶಶೀದರ ಕುರೇರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಪಾರದರ್ಶಕತೆ ಹೊಂದಿದ್ದು, ಅದಕ್ಕೆ ಬಲ ತುಂಬಲು ಕ್ರಿಯಾ ಯೋಜನೆಯ ಪ್ರಕ್ರಿಯೆಯನ್ನು ಆನ್‌ಲೈನ್‌ಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಸಿಇಒ ಶಶೀದರ ಕುರೇರ್ ಹೇಳಿದರು.

ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ 2025-26ನೇ ಸಾಲಿನ ನರೇಗಾ ಯೋಜನೆಯ ಕ್ರಿಯಾ ಯೋಜನೆಯ ತಯಾರಿಕೆ ಕುರಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ನಿರ್ದೇಶನದಂತೆ ನಿಗದಿತ ವೇಳಾಪಟ್ಟಿ ಅನ್ವಯ ಕ್ರಿಯಾ ಯೋಜನೆಗೆ ಸಿದ್ಧಮಾಡಿಕೊಳ್ಳಲಾಗಿದೆ. ಈ ಬಾರಿಯ ಕ್ರಿಯಾ ಯೋಜನೆಯ ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್‌ದಿಂದ ಕೂಡಿರುತ್ತದೆ. ಗ್ರಾಮೀಣ ಜನರು ತಮಗಿಷ್ಟವಾದ ಕಾಮಗಾರಿಯನ್ನು ಕ್ಯೂಆರ್ ಕೋಡ್‌ ಸ್ಕ್ಯಾನ್ ಮಾಡುವುದರ ಮೂಲಕ ಕಾಮಗಾರಿ ಹೊಂದಲು ಅವಕಾಶವಿದೆ ಎಂದರು.

ಆಫಲೈನ್‌ ಮೂಲಕವೂ ಕಾಮಗಾರಿ ಬೇಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಸ್ವೀಕೃತವಾದ ಬೇಡಿಕೆಗಳನ್ನು ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪೂರ್ವ ಅಳತೆಗೈದು ಅನುಮೋದನೆ ನೀಡುತ್ತಾರೆ. ಅಧಿಕಾರಿಗಳು ಕಾಮಗಾರಿ ಬೇಡಿಕೆ ಅರ್ಜಿಗಳನ್ನು ಪರಿಶೀಲಿಸಿ ಆನ್‌ಲೈನ್‌ ಕಾಮಗಾರಿ ಬೇಡಿಕೆಯನ್ನು ಹೊಂದುವ ಬಗೆಗೆ ಕುರಿತು ಮಾಹಿತಿ, ಶಿಕ್ಷಣ, ಸಂವಹನ ಚಟುವಟಿಕೆಗಳ ಮೂಲಕ ಇನ್ನಷ್ಟು ವ್ಯಾಪಕ ಪ್ರಚಾರವನ್ನು ಕೈಗೊಳ್ಳಲು ಬ್ಯಾನರ್‌ ಅಳವಡಿಸಲಾಗಿದೆ ಎಂದರು.ಗ್ರಾಮ ಪಂಚಾಯತಿ ಸಿಬ್ಬಂದಿ ಕರ ಪತ್ರಗಳ ಮೂಲಕ ಮನೆ ಮನೆಗೆ ತೆರಳಿ ಈ ಬಗೆಗೆ ಇನ್ನಷ್ಟು ಪರಿಣಾಮವಾಗಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು. ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ ಮಾತನಾಡಿ, ಸರ್ಕಾರ ನೀಡಿದ ವೇಳಪಟ್ಟಿ ಅನ್ವಯ ವಾರ್ಡ್‌ ಸಭೆ, ಗ್ರಾಮ ಸಭೆಗಳನ್ನು ಕೈಗೊಳ್ಳಬೇಕು. ಗ್ರಾಮ ಸಭೆಯ ವಿವರಗಳನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕು. ಕ್ರಿಯಾಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಿಬ್ಬಂದಿ ಶ್ರಮಿಸಬೇಕು ಎಂದರು.ಕ್ರಿಯಾ ಯೋಜನೆಯಲ್ಲಿ ಮಾಹಿತಿ, ಶಿಕ್ಷಣ, ಸಂವಹನದ ಮಹತ್ವವನ್ನು ಡಿಐಇಸಿ ಅಜೇಯ ಸೂಳಿಕೇರಿ ತಿಳಿಸಿದರು.

ಕ್ರಿಯಾ ಯೋಜನೆಯ ತಯಾರಿಕೆ ವಿವಿಧ ಹಂತಗಳ ಬಗ್ಗೆ ಎಡಿಪಿಸಿ ರಾಜೇಶ್ವರಿ ಗಡೇದ ಮಾಹಿತಿ ನೀಡಿದರು. ಆನ್‌ಲೈನ್‌ ಮೂಲಕ ಕಾಮಗಾರಿ ಬೇಡಿಕೆಯನ್ನು ಸಲ್ಲಿಸುವ ಕುರಿತು ಡಿಎಂಐಎಸ್ ಉಜ್ವಲ ಪ್ರಾತಕ್ಷಿತೆ ನೀಡಿದರು. ತಾಂತ್ರಿಕ ವಿಷಯಗಳ ಕುರಿತು ಬಾಹುಬಲಿ ಹಾಗೂ ಸಿದ್ದಯ್ಯ ಹಿರೇಮಠ ವಿಷಯ ಮಂಡಿಸಿದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ನರೇಗಾ ಸಿಬ್ಬಂದಿ ಹಾಜರಿದ್ದರು.

Share this article