ನರೇಗಾದಡಿ ದಾಳಿಂಬೆ ಬೆಳೆದ ರೈತನಿಗೆ ಭರ್ಜರಿ ಲಾಭ

KannadaprabhaNewsNetwork |  
Published : Oct 04, 2024, 01:01 AM IST
೦೩ಕೆಎಲ್‌ಆರ್-೧೧-೧ಮಾಲೂರು ತಾಲ್ಲೂಕಿನ ಹುಳದೇನಹಳ್ಳಿ ರೈತ ಚಂದ್ರಶೇಖರ್ ತೋಟದಲ್ಲಿ ದಾಳಿಂಬೆ ಗಿಡಗಳಲ್ಲಿ ದಾಳಿಂಬೆ ಹಣ್ಣುಗಳ ಬಿಟ್ಟಿರುವ ಚಿತ್ರ. | Kannada Prabha

ಸಾರಾಂಶ

ಸದ್ಯ ಈಗ ದಾಳಿಂಬೆ ಮೊದಲ ಫಸಲು ಬಂದಿದೆ. ದಾಳಿಂಬೆಗೆ ಮಾರುಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಉತ್ತಮ ಗುಣಮಟ್ಟದ ಹಣ್ಣು, ಕೆಜಿಗೆ ೩೦೦ ರುಪಾಯಿವರೆಗೂ ಮಾರಾಟವಾಗುತ್ತಿದೆ. ಪ್ರತಿ ಸಸಿಯಲ್ಲೂ ೫೦ ರಿಂದ ೮೦ ಹಣ್ಣುಗಳಿದ್ದು, ಈ ವರ್ಷ ಸುಮಾರು ೧೫ ಟನ್ ದಾಳಿಂಬೆ ದೊರೆಯಲಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ನರೇಗಾದಡಿಯಲ್ಲಿ ದಾಳಿಂಬೆ ಬೆಳೆದ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಳದೇನಹಳ್ಳಿ ರೈತ ಚಂದ್ರಶೇಖರ್, ಈಗ ಬಂಪರ್ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಹಿಂದಿನಿಂದಲೂ ಸಾಂಪ್ರದಾಯಿಕ ತರಕಾರಿ ಬೆಳೆಗಳನ್ನು ಬೆಳೆದು ಕೇವಲ ನಷ್ಟವನ್ನೇ ಅನುಭವಿಸುತ್ತಿದ್ದ ಚಂದ್ರಶೇಖರ್‌ರವರಿಗೆ ದಾಳಿಂಬೆ ಬೆಳೆ ಕೈಹಿಡಿದಿದ್ದು, ಮೊದಲ ಫಸಲಿನಲ್ಲೇ ಭರ್ಜರಿ ಲಾಭದ ಭರವಸೆ ಮೂಡಿಸಿದೆ.

ಚಂದ್ರಶೇಖರ್ ತಮ್ಮ ಜಮೀನಿನಲ್ಲಿ ಟೊಮೆಟೋ, ಬೀನ್ಸ್ ಸೇರಿದಂತೆ ವಿವಿಧ ತರಕಾರಿ ಬೆಳೆಯುತ್ತಿದ್ದರು. ಆದರೆ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿರಲಿಲ್ಲ. ಒಮ್ಮೆ ತರಕಾರಿಗೆ ಬೆಲೆ ಇದ್ದರೆ, ಮತ್ತೊಮ್ಮೆ ಬೆಲೆ ಕುಸಿತದಿಂದ ನಷ್ಟಕ್ಕೆ ಗುರಿಯಾಗುತ್ತಿದ್ದರು. ಇದರಿಂದ ಬೇಸತ್ತಿದ್ದ ರೈತ ಚಂದ್ರಶೇಖರ್, ಲಾಭ ಗಳಿಸುವ ಉದ್ದೇಶದಿಂದ ಪರ್ಯಾಯ ಬೆಳೆ ಬೆಳೆಯಬೇಕೆಂಬ ನಿರ್ಧಾರ ಮಾಡಿದ್ದರು.

ಚಂದ್ರಶೇಖರ್‌ರವರ ನಿರ್ಧಾರಕ್ಕೆ ನೀರೆರೆದಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ನರೇಗಾದಡಿ ತೋಟಗಾರಿಕಾ ಬೆಳೆ ದಾಳಿಂಬೆಗೆ ಸಹಾಯಧನ ದೊರೆಯುತ್ತದೆ ಎಂಬ ಮಾಹಿತಿ ತಿಳಿದು, ತಕ್ಷಣ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಕಾಮಗಾರಿಯನ್ನು ಕ್ರಿಯಾ ಯೋಜನೆಗೆ ಸೇರಿಸುತ್ತಾರೆ.

ಎರಡೂವರೆ ಎಕರೆ ಜಮೀನಿನಲ್ಲಿ ೧೦ ಅಡಿ ಅಂತರದಲ್ಲಿ ಸಾಲು ಮಾಡಿ, ಕೊಟ್ಟಿಗೆ ಗೊಬ್ಬರ ಹಾಕಿ ಭೂಮಿಯನ್ನು ಹದ ಮಾಡಿಕೊಳ್ಳುತ್ತಾರೆ, ಬೆಂಗಳೂರಿನಿಂದ ಒಂದಕ್ಕೆ ೫೦ ರು. ಕೊಟ್ಟು ೧೦೦೦ ಸಸಿಗಳನ್ನು ತಂದು ನಾಟಿ ಮಾಡುತ್ತಾರೆ. ದಾಳಿಂಬೆ ತೋಟಕ್ಕೆ ಹನಿ ನೀರಾವರಿ ವ್ಯವಸ್ಥೆ ಕೂಡ ಮಾಡುತ್ತಾರೆ. ಒಂದೂವರೆ ವರ್ಷ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆ, ಸೂಚನೆ ಪಡೆದು, ದಾಳಿಂಬೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕಾಗಿ ನರೇಗಾದಡಿ ೯೦ ಸಾವಿರ ರು. ಸಹಾಯಧನ ಪಡೆದಿದ್ದಾರೆ.

ಸದ್ಯ ಈಗ ದಾಳಿಂಬೆ ಮೊದಲ ಫಸಲು ಬಂದಿದೆ. ದಾಳಿಂಬೆಗೆ ಮಾರುಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಉತ್ತಮ ಗುಣಮಟ್ಟದ ಹಣ್ಣು, ಕೆಜಿಗೆ ೩೦೦ ರುಪಾಯಿವರೆಗೂ ಮಾರಾಟವಾಗುತ್ತಿದೆ. ಪ್ರತಿ ಸಸಿಯಲ್ಲೂ ೫೦ ರಿಂದ ೮೦ ಹಣ್ಣುಗಳಿದ್ದು, ಈ ವರ್ಷ ಸುಮಾರು ೧೫ ಟನ್ ದಾಳಿಂಬೆ ದೊರೆಯಲಿದೆ. ಮಾರುಕಟ್ಟೆಯಲ್ಲಿ ಹಣ್ಣಿನ ಗುಣಮಟ್ಟದ ಮೇಲೆ ಬೆಲೆ ನಿಗದಿಯಾಗುತ್ತಿದ್ದು, ಇವರ ಹಣ್ಣಿಗೆ ಕೆಜಿಗೆ ೨೦೦ ರುಪಾಯಿ ಬೆಲೆ ಸಿಗುವ ಸಾಧ್ಯತೆ ಇದ್ದು, ಒಟ್ಟು ೩ ಲಕ್ಷ ರು. ಆದಾಯದ ನಿರೀಕ್ಷೆಯಲ್ಲಿದ್ದಾರೆ.

‘ತರಕಾರಿ ಬೆಳೆಗಳಿಗೆ ಸಾಕಷ್ಟು ಕೂಲಿಕಾರರ ಅವಶ್ಯಕತೆ ಇದೆ. ಆದರೆ ಈ ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಕೂಲಿಕಾರರ ಅವಶ್ಯಕತೆ ಇಲ್ಲ. ಮೊದಲಬಾರಿಗೆ ನರೇಗಾ ಸಹಾಯ ಪಡೆದು, ಕಟ್ಟಪಟ್ಟು ದಾಳಿಂಬೆ ಬೆಳೆದಿದ್ದೇನೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದೇನೆ.’

ಚಂದ್ರಶೇಖರ್, ರೈತ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ