ಎರೆಹುಳು ಗೊಬ್ಬರದ ಮೂಲಕ ಸಾವಯವ ಕೃಷಿಗೆ ಸಾಥ್ ನೀಡಿದ ನರೇಗಾ

KannadaprabhaNewsNetwork | Published : Jul 18, 2024 1:33 AM

ಸಾರಾಂಶ

ಗ್ರಾಪಂದಿಂದ ಎರೆಹುಳು ತೊಟ್ಟಿ ನಿರ್ಮಾಣದ ಕುರಿತು ಮಾಹಿತಿ ಪಡೆದು ತಮ್ಮ ಜಮೀನಿನಲ್ಲಿ ₹೨೭,೦೦೦/-ಗಳ ಎರೆಹುಳು ತೊಟ್ಟಿಯನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿಕೊಂಡಿದ್ದಾರೆ

ಎಸ್.ಎಂ.ಸೈಯದ್ ಗಜೇಂದ್ರಗಡ

ಸಮಯಕ್ಕೆ ಸರಿಯಾಗಿ ಮಳೆಯಿಲ್ಲ, ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲ ಎಂದು ಗೊಣಗುತ್ತಾ ಕೃಷಿಯಿಂದ ದೂರ ಸರಿಯುವವರ ನಡುವೆಯೂ ನೆಲ್ಲೂರು ಗ್ರಾಮದ ರೈತ ಕೂಡ್ಲೆಪ್ಪ ಗುಡಿಮನಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಎರೆಹುಳು ತೊಟ್ಟಿ ನಿರ್ಮಿಸಿಕೊಂಡು ಸಾವಯವ ಗೊಬ್ಬರ ತಯಾರಿಸಿ ಬೆಳೆಗಳಿಗೆ ಹಾಕಿ ಉತ್ತಮ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ಮುಶಿಗೇರಿ ಗ್ರಾಮದ ರೈತ ಕೂಡ್ಲೆಪ್ಪ ಗುಡಿಮನಿ ತಮ್ಮ ೪ ಎಕರೆ ಜಮೀನಿನಲ್ಲಿ ಬೆಳೆಗಳನ್ನು ಬೆಳೆಯಲು ಅಗತ್ಯವಾದ ಗೊಬ್ಬರ ಬಳಕೆಗಾಗಿ ೨೦೨೨-೨೩ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಎರೆಹುಳು ತೊಟ್ಟಿ ನಿರ್ಮಿಸಿಕೊಂಡು ರಾಸಾಯನಿಕ ಗೊಬ್ಬರಕ್ಕೆ ಇತಿಶ್ರೀ ಹಾಡಿದ್ದಾರೆ.

ಕೂಡ್ಲೆಪ್ಪ ಗುಡಿಮನಿ ಮಿಶ್ರ ಬೇಸಾಯ ಅಳವಡಿಸಿಕೊಂಡು ಒಂದಲ್ಲ ಒಂದು ಉತ್ಪನ್ನದಿಂದ ಆದಾಯ ಬರುವಂತೆ ಕೃಷಿ ಕೈಗೊಂಡಿದ್ದಾರೆ. ಇದರ ಜತೆಗೆ ಮೆಣಸಿನಕಾಯಿ, ಉಳಾಗಡ್ಡಿ, ಶೆಂಗಾ, ಲಿಂಬು, ಹೆಬ್ಬೇವು, ನುಗ್ಗಿ, ಗೋವಿನಜೋಳ ಹೀಗೆ ಸಮಗ್ರ ಕೃಷಿ ಅಳವಡಿಸಿಕೊಂಡಿರುವ ಈ ರೈತ ಆಧುನಿಕ ರೀತಿಯಲ್ಲಿ ಕೃಷಿ ಮಾಡಬೇಕು ಎನ್ನುವವರಿಗೆ ಮಾದರಿಯಾಗಿದ್ದಾರೆ. ಎಲ್ಲ ಸಸಿಗಳಿಗೂ ಎರೆಹುಳ ಗೊಬ್ಬರ ಬಳಕೆ ಮಾಡಿಕೊಂಡಿದ್ದಾರೆ. ಇವರ ಅನುಭವಕ್ಕೆ ಬಂದಂತೆ ಎರೆಹುಳು ಗೊಬ್ಬರ ಬಳಕೆಯಿಂದ ಬೆಳೆಗಳಿಗೆ ರೋಗ ರುಜಿನಗಳು ತಗಲುವುದು ವಿರಳ ಅಲ್ಲದೇ ಮನುಷ್ಯ ಆರೋಗ್ಯಕರನಾಗಿರುತ್ತಾನೆ. ರೈತ ಸ್ವಾವಂಬಿ ಬದುಕು ಕಟ್ಟಿಕೊಳ್ಳುತ್ತಾನೆ.

ಸವಾಲುಗಳು: ರಾಸಾಯನಿಕ ಗೊಬ್ಬರ ಬಳಕೆ ಮಾಡಿದ್ದರಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುವುದರ ಬಗ್ಗೆ ಸಾಕಷ್ಟು ಕಡೆ ಕೇಳಿ ತಿಳಿದುಕೊಂಡೆ, ಜತೆಗೆ ಪುಸ್ತಕ ಓದಿ ಅರಿತುಕೊಂಡು ರಾಸಾಯನಿಕ ಗೊಬ್ಬರ ಬಳಕೆ ಮಾಡಬಾರದೆಂದು ತಿರ್ಮಾನಿಸಿದೆ. ಎರೆಹುಳು ತೊಟ್ಟಿ ಕಟ್ಟಿಕೊಂಡು ಕಳೆದ ೩ ವರ್ಷಗಳಿಂದ ಸಾವಯವ ಗೊಬ್ಬರ ಬಳಕೆ ಮಾಡಿ ಉತ್ತಮ ಬೆಳೆ ಬೆಳೆಯುವುದರ ಜತೆಗೆ ಇಳುವರಿ ಪಡೆದುಕೊಳ್ಳುತ್ತಿದ್ದೇನೆ. ಖರ್ಚು ಕಡಿಮೆಯಾಗಿದೆ. ಆದಾಯ ಹೆಚ್ಚಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಭೂಮಿ ಕಾಪಾಡಿಕೊಳ್ಳುತ್ತೇನೆ ಎನ್ನುತ್ತಾರೆ ರೈತ ಕೂಡ್ಲೆಪ್ಪ ಗುಡಿಮನಿ.

ವರವಾದ ಎರೆಹುಳು ತೊಟ್ಟಿ: ಗ್ರಾಪಂದಿಂದ ಎರೆಹುಳು ತೊಟ್ಟಿ ನಿರ್ಮಾಣದ ಕುರಿತು ಮಾಹಿತಿ ಪಡೆದು ತಮ್ಮ ಜಮೀನಿನಲ್ಲಿ ₹೨೭,೦೦೦/-ಗಳ ಎರೆಹುಳು ತೊಟ್ಟಿಯನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿಕೊಂಡಿದ್ದಾರೆ. ಈಗಾಗಲೇ ₹೧೨೧೩೮ ತಮ್ಮ ಬ್ಯಾಂಕ್ ಖಾತೆಗೆ ಕೂಲಿ ಹಣ ಜಮೆಯಾಗಿದೆ. ಸಾವಯವ ಗೊಬ್ಬರಕ್ಕೆ ಮೋರೆ ಹೋಗಿ ರಾಸಾಯನಿಕ ಗೊಬ್ಬರಕ್ಕೆ ಅಂತ್ಯ ಹಾಡಿದ್ದಾರೆ.

೪೫ ದಿನದಲ್ಲಿ ಗೊಬ್ಬರ: ಎರೆಹುಳು ತೊಟ್ಟಿಗೆ ಕಸ, ಕಡ್ಡಿ, ಮೇವಿನ ದಂಟು, ಕಟ್ಟಿಗೆ ಹಾಕಿ ಮೇಲೆ ನೀರನ್ನು ಹಾಯಿಸಿದ ನಂತರ ಪ್ರತಿ ದಿನ ದನಕರುಗಳ ಸಗಣಿಯನ್ನು ಅದರ ಮೇಲೆ ಹಾಕುವದರಿಂದ ತೇವಾಂಶ ಕಾಯ್ದುಕೊಳ್ಳಲು ಮತ್ತು ಎರೆಹುಳುಗಳಿಗೆ ಬೇಗ ಗೊಬ್ಬರ ತಯಾರಿಸಲು ಸಹಕಾರಿಯಾಗುತ್ತದೆ. ಎರೆಹುಳು ತೊಟ್ಟಿಯಲ್ಲಿ ಮೊದಲ ಸಲ ಗೊಬ್ಬರ ೨ ತಿಂಗಳಿಗೆ ಬರುತ್ತದೆ. ನಂತರ ೪೫ ದಿನಗಳಲ್ಲಿ ಎರೆಹುಳು ಗೊಬ್ಬರ ತಯಾರಿಯಾಗುತ್ತದೆ. ಮೊದಲ ಬಾರಿ ಎರೆಹುಳು ಕಡಿಮೆ ಇರುತ್ತವೆ. ಎರಡನೇ ಬಾರಿ ದುಪ್ಪಟ್ಟಾಗಿ ಬೆಳೆದಿರುವುದರಿಂದ 45 ದಿನಕ್ಕೆ ಗೊಬ್ಬರ ಸಿದ್ಧವಾಗುತ್ತದೆ.

ಎರೆಜಲ ಉತ್ಪಾದನೆ:

ಪ್ರತಿ ದಿನ ಜಾನುವಾರಗಳಿಂದ ಬಂದಿರುವ ಸಗಣಿ ಹಾಗು ಇತರೇ ಪದಾರ್ಥ ಒಟ್ಟುಗೂಡಿಸಿ ನೀರಿನ ಡ್ರಮ್ ನಲ್ಲಿ ಮಿಶ್ರಣ ಮಾಡಿ ಪ್ರತಿ ದಿನ ಕಟ್ಟಿಗೆಯಿಂದ ಮೇಲೆ ಕೆಳಗೆ ಮಾಡಿ ಅದನ್ನು ಎರೆಹುಳು ತೊಟ್ಟಿಯಲ್ಲಿ ಸಿಂಪಡಿಸಲು ನೀರಿನ ಪೈಪ್ ಮೂಲಕ ತೊಟ್ಟಿಗೆ ಬಿಡುತ್ತಾರೆ. ಇದರಿಂದ ಎರೆಹುಳುಗಳಿಗೆ ಗೊಬ್ಬರ ತಯಾರಿಸಲು ಇನ್ನಷ್ಟು ಪುಷ್ಠಿ ನೀಡಿದಂತಾಗುತ್ತದೆ.

ಭೂಮಿಯ ಫಲವತ್ತೆ ಕಾಯಲು ಹಾಗೂ ರೈತರು ಸ್ವಾವಲಂಬಿಯಾಗಬೇಕು ಅಂದರೆ ಸ್ವತಃ ಉತ್ಪಾದನೆಗೆ ಮುಂದಾಗಬೇಕು. ಎರೆಹುಳು ತೊಟ್ಟಿ ನಿರ್ಮಾಣದಿಂದ ಖರ್ಚು ಕಡಿಮೆಯಾಗುತ್ತದೆ. ಭೂಮಿ ಫಲವತ್ತತೆ ಉಳಿಯುತ್ತಿದೆ. ಸಾವಯವ ಗೊಬ್ಬರದಿಂದ ಕೃಷಿ ಭೂಮಿ ಉಳಿಸಿಕೊಳ್ಳುವುದರ ಜತೆಗೆ ಸಾಲದಿಂದ ಮುಕ್ತಿ ಹೊಂದಲು ಸಾಧ್ಯವಿದೆ ಎಂದು ಪ್ರಗತಿಪರ ರೈತ ಕೂಡ್ಲೆಪ್ಪ ಗುಡಿಮನಿ ಹೇಳಿದ್ದಾರೆ.

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ನೆಲ್ಲೂರು ಗ್ರಾಮದ ರೈತ ಕೂಡ್ಲೆಪ್ಪ ಗುಡಿಮನಿ ತಮ್ಮ ಜಮೀನಿನಲ್ಲಿ ಎರೆಹುಳು ತೊಟ್ಟಿ ನಿರ್ಮಿಸಿಕೊಂಡು ಸಾವಯವ ಗೊಬ್ಬರ ತಯಾರಿಸಿ ಹೊಲಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಸಂತಸ ತಂದಿದೆ. ಎರೆಹುಳು ತೊಟ್ಟಿ ನಿರ್ಮಾಣಕ್ಕೆ ರೈತರು ನರೇಗಾ ಯೋಜನೆ ಸದ್ಭಳಿಕೆ ಮಾಡಿಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಬಡಿಗೇರ ತಿಳಿಸಿದ್ದಾರೆ.

Share this article