ಕೊಪ್ಪಳ:
ಪ್ರತಿ ಕುಟುಂಬವು ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ 100 ದಿನ ಕೂಲಿ ಕೆಲಸ ನಿರ್ವಹಿಸಬೇಕೆಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಹೇಳಿದರು.ತಾಲೂಕಿನ ಲೇಬಗೇರಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ಪರಿಶೀಲಿಸಿ ಮಾತನಾಡಿದ ಅವರು, ₹ 370 ಕೂಲಿ ಬರುವಂತೆ ಕೂಲಿ ಕೆಲಸ ನಿರ್ವಹಿಸಿ. ಬೇಸಿಗೆ ಇರುವುದರಿಂದ ಕೆಲಸದ ಪ್ರಮಾಣದಲ್ಲಿ ಶೇ. 30ರಷ್ಟು ವಿನಾಯಿತಿ ನೀಡಲಾಗಿದೆ. ಕಳೆದ ಸಾಲಿನಲ್ಲಿ ₹349 ಇದ್ದ ಕೂಲಿಯನ್ನು ಪ್ರಸ್ತುತ ₹ 370ಕ್ಕೆ ಹೆಚ್ಚಿಸಿದ್ದು, ನಿಮಗೆ ನೀಡಿರುವ ಅಳತೆಗನುಗುಣವಾಗಿ ಕೆಲಸ ನಿರ್ವಹಿಸಬೇಕು. ಬಿಸಿಲು ಹೆಚ್ಚಳವಿದ್ದು ಪಾಲಕರು 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಕಾಮಗಾರಿ ಸ್ಥಳಕ್ಕೆ ಕರೆದುಕೊಂಡು ಬರದೇ ಗ್ರಾಮದಲ್ಲಿರುವ ಕೂಸಿನ ಮನೆಗೆ ಸೇರಿಸಬೇಕು. 6 ಪೂಟ್ ಉದ್ದ, 6 ಅಗಲ, 1 ಪೂಟ್ ಆಳ ಕೆಲಸ ನಿರ್ವಹಿಸಿದರೆ ₹ 370 ಕೂಲಿ ಬರುತ್ತದೆ ಎಂದರು.
ಸಂವಾದ:ಮಹಿಳಾ ಕೂಲಿಕಾರರೊಂದಿಗೆ ಸಂವಾದ ನಡೆಸಿದ ಜಿಪಂ ಸಿಇಒ, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಕೆಲಸಕ್ಕೆ ಹಾಜರಾಗುವಂತೆ ತಿಳಿಸಿದರು. ಕೆರೆ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿರುವ ಕುರಿತು ಎನ್‌ಎಂಆರ್ ಪರಿಶೀಲಿಸಿದರು.
ಕೂಸಿನ ಮನೆ ವೀಕ್ಷಣೆ:ಗ್ರಾಮದಲ್ಲಿರುವ ಕೂಸಿನ ಮನೆಗೆ ಭೇಟಿ ನೀಡಿ ಮಕ್ಕಳು ದಾಖಲಾಗಿರುವ ಕುರಿತು ಕೆರ್ ಟೆಕರ್ಸ್‌ಗಳಿಂದ ಮಾಹಿತಿ ಪಡೆದರು. ಪ್ರಸ್ತುತ 12 ಮಕ್ಕಳು ನಿತ್ಯ ಬರುತ್ತಿದ್ದು ಬೆಳಗ್ಗೆ ಹಾಲು, ದಾಲ್ ಖಿಚಡಿ, ಮೊಟ್ಟೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಅಲ್ಲಿರುವ ಮಕ್ಕಳ ಆರೋಗ್ಯ ತಪಾಸಣೆ ನಡೆಸಬೇಕೆಂದು ಸಿಇಒ, ಕೂಸಿನ ಮನೆ ಮಕ್ಕಳ ದಾಖಲಾತಿ ವಹಿ, ಆಹಾರ ದಾಸ್ತಾನು ವಿತರಣೆ ವಹಿಗಳನ್ನು ಪರಿಶೀಲಿಸಿದರು.
ನರೇಗಾ ದತ್ತು ಗ್ರಾಮ ಕಾಮನೂರಿಗೆ ಭೇಟಿ:ಸಂಸದರ ನರೇಗಾ ದತ್ತು ಗ್ರಾಮ ಕಾಮನೂರು ಗ್ರಾಮಕ್ಕೆ ಭೇಟಿ ನೀಡಿ ನರೇಗಾ ಯೋಜನೆಯ ಸಂಜೀವಿನಿ ಸಂಘದ ಶೆಡ್ ಕಾಮಗಾರಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ ಅನುಷ್ಠಾನಿಸುತ್ತಿರುವ ಪ್ರಗತಿಯಲ್ಲಿರುವ ಸಿಸಿ ರಸ್ತೆ ಕಾಮಗಾರಿ ವೀಕ್ಷಿಸಿ ಕಾಮಗಾರಿ ಗುಣಮಟ್ಟದಿಂದ ಅನುಷ್ಠಾನವಾಗಬೇಕೆಂದು ಕಿರಿಯ ಅಭಿಯಂತರರಿಗೆ ಸೂಚಿಸಿದರು.
ಲೇಬಗೇರಿ ಹಾಗೂ ಕಾಮನೂರು ಗ್ರಾಮದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದು ಫಲಾನುಭವಿಗಳೊಂದಿಗೆ ಚರ್ಚಿಸಿದರು. ನಂತರ ಕಾಮನೂರು ಕೆರೆ ಸ್ಥಳಕ್ಕೆ ಭೇಟಿ ನೀಡಿ ಕೆರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಗ್ರಾಮಸ್ಥರಿಗೆ ತಿಳಿಸಿದರು.ಈ ವೇಳೆ ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ್, ತಾಪಂ ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಪಿಡಿಒ ಸಂಗಮೇಶ ತೇರಿನ, ಜಿಪಂ ಎಡಿಪಿಸಿ ಮಹಾಂತಸ್ವಾಮಿ, ಜಿಲ್ಲಾ ಎಂಐಸ್ ಸಂಯೋಜಕ ಮೈನುದ್ದಿನ್, ತೋಟಗಾರಿಕೆ ಇಲಾಖೆ ಹೋಬಳಿ ಅಧಿಕಾರಿ ವಿಜಯ ಮಹಾಂತೇಶ ಹೊಟ್ಟಿನ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕರಾದ ಯಮನೂರ, ಕವಿತಾ, ಗ್ರಾಪಂ ಸದಸ್ಯರಾದ ನಾಗಪ್ಪ ದೊಡ್ಡಮನಿ, ಫಕೀರಗೌಡ ಗೊಲ್ಲರ, ಮಲ್ಲಪ್ಪ ಟುಬಾಕಿ, ಮಹಾದೇವಪ್ಪ ಭೀಮನೂರು, ಬಸವರಾಜ ಯತ್ನಟ್ಟಿ, ತಾಂತ್ರಿಕ ಸಹಾಯಕ ಮಂಜುನಾಥ ಮಾದಾಪುರ, ಬಿಎಪ್‌ಟಿ ರವಿಶಂಕರ, ಡಿಇಒ ಬಸವರಾಜ, ಕರವಸೂಲಿಗಾರ ರಾಜು ಬಂಗಾರಿ, ಗ್ರಾಮ ಕಾಯಕ ಮಿತ್ರ ಅಂಬಮ್ಮ ಇದ್ದರು.