ನರೇಂದ್ರ ಮೋದಿ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ: ಕಾಗೇರಿ

KannadaprabhaNewsNetwork | Published : Mar 31, 2024 2:02 AM

ಸಾರಾಂಶ

ಕಾಂಗ್ರೆಸ್‌ನ ಇಂಡಿಯಾ ಘಟಬಂಧನ ಬಗ್ಗೆ ಒಮ್ಮೆ ಯೋಚಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೇಶದ ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ಮಾಡಿ ಅಲ್ಪಸಂಖ್ಯಾತರ ಮತ ಬ್ಯಾಂಕ್‌ಗಾಗಿ ತುಷ್ಟೀಕರಣ ಮಾಡುವ ಅವರ ಚಟುವಟಿಕೆ ಗಮನಿಸಿದರೆ ನಮಗೆ ಆತಂಕವಾಗುತ್ತದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಮುಂಡಗೋಡ: ಜಗತ್ತಿನ ಸರ್ವ ಶ್ರೇಷ್ಠ ರಾಷ್ಟ್ರದ ನಾಯಕರು ಕೂಡ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂದು ಹಂಬಲಿಸುತ್ತಿದ್ದಾರೆ. ಈ ಮೂಲಕ ನರೇಂದ್ರ ಮೋದಿ ಅವರು ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಉತ್ತರ ಕನ್ನಡ ಲೋಕಸಭಾ ಕೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಮುಂಡಗೋಡದಲ್ಲಿ ಅವರು ಲೋಕಸಭಾ ಚುನಾವಣಾ ಪೂರ್ವಸಿದ್ಧತೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಅವರಿಗಿರುವ ಪ್ರಭಾವ ದೇಶದ ಗೌರವವನ್ನು ಹೆಚ್ಚಿಸಿದೆ. ಕಿತ್ತೂರು, ಖಾನಾಪುರ ಒಳಗೊಂಡಂತ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಹಲವು ದಶಕಗಳಿಂದ ಬಿಜೆಪಿ ಕ್ಷೇತ್ರವಾಗಿದ್ದು, ಕಳೆದ ಬಾರಿಯ ಗೆಲುವಿನ ಅಂತರ ದೇಶದ ಚಿತ್ತ ಇತ್ತ ನೆಡುವಂತೆ ಮಾಡಿತ್ತು. ಈ ಬಾರಿಯೂ ಕೂಡ ಅದು ಮರುಕಳಿಸಲಿದೆ ಎಂದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಕಾಂಗ್ರೆಸ್‌ನ ಇಂಡಿಯಾ ಘಟಬಂಧನ ಬಗ್ಗೆ ಒಮ್ಮೆ ಯೋಚಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೇಶದ ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ಮಾಡಿ ಅಲ್ಪಸಂಖ್ಯಾತರ ಮತ ಬ್ಯಾಂಕ್‌ಗಾಗಿ ತುಷ್ಟೀಕರಣ ಮಾಡುವ ಅವರ ಚಟುವಟಿಕೆ ಗಮನಿಸಿದರೆ ನಮಗೆ ಆತಂಕವಾಗುತ್ತದೆ. ವಿಧಾನಸೌದದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವ ಮಟ್ಟಿಗೆ ಹೋಗಿರುವುದು ನೋಡಿದರೆ ಅಪರಾಧ ಮನೋಭಾವನೆಯವರಿಗೆ, ದೇಶದ್ರೋಹಿಗಳಿಗೆ ನಮ್ಮ ಸರ್ಕಾರ ಬಂದಿದೆ ಎಂಬ ಭಾವನೆ ಬಂದಂತೆ ಭಾಸವಾಗುತ್ತಿದೆ. ಹುಬ್ಬಳ್ಳಿ ಮತ್ತು ಕೆ.ಜೆ. ಹಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರ ಹಾಗೂ ಶಿವಮೊಗ್ಗದಲ್ಲಿ ಗಲಭೆಗೆ ಕಾರಣೀಕರ್ತರಾದವರ ಮೇಲಿನ ಪ್ರಕರಣವನ್ನು ಹಿಂಪಡೆಯುವಂತೆ ಸ್ವತಃ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೇ ಗೃಹಮಂತ್ರಿ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದಿರುವುದನ್ನು ನಾವು ನೋಡುತ್ತಿದ್ದೇವೆ. ದೇಶದ ಏಕತೆ, ಅಖಂಡತೆ, ಸಂಸ್ಕೃತಿ ಉಳಿವಿಗಾಗಿ ಬಿಜೆಪಿಯೇ ಅಧಿಕಾರಕ್ಕೆ ಬರಬೇಕು ಹಾಗೂ ನರೇಂದ್ರ ಮೋದಿ ಅಯವರೇ ದೇಶದ ಪ್ರಧಾನಿಯಾಗಬೇಕಿದೆ ಎಂದರು.

ರಾಜ್ಯದ ಅಭಿವೃದ್ದಿ ಶೂನ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಶೂನ್ಯವಾಗಿದ್ದು, ಜನರ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ರಾಜ್ಯ ಸರ್ಕಾರ ಬಂದು ಒಂದು ವರ್ಷ ಕಳೆದಿದ್ದು, ಈ ವರೆಗೆ ಎಷ್ಟು ಅಭಿವೃದ್ಧಿ ಮಾಡಿದೆ ಹಾಗೂ ಎಷ್ಟು ಹಣ ಬಿಡುಗಡೆ ಮಾಡಿದೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದ ಅವರು, ಕಾಂಗ್ರೆಸ್ ಆಡಳಿತದಿಂದ ಜನರಿಗೆ ಭ್ರಮನಿರಸನವಾಗಿದೆ ಎಂದು ಆರೋಪಿಸಿದರು.

ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಬಸವರಾಜ ಓಶಿಮಠ ಮುಂತಾದವರು ಉಪಸ್ಥಿತರಿದ್ದರು.

Share this article