ನರೇಂದ್ರ ಮೋದಿ ಕೈ ಬಲಪಡಿಸಬೇಕು: ಯಡಿಯೂರಪ್ಪ

KannadaprabhaNewsNetwork | Published : Apr 12, 2024 1:00 AM

ಸಾರಾಂಶ

ಕೇಂದ್ರದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಸಲುವಾಗಿ ಅವರ ಕೈ ಬಲಪಡಿಸುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಕೇಂದ್ರದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಸಲುವಾಗಿ ಅವರ ಕೈ ಬಲಪಡಿಸುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.ಅವರು ತುಮಕೂರು ತಾಲೂಕು ಕೆಸ್ತೂರಿನಲ್ಲಿ ನಡೆದ ಬಿಜೆಪಿ-ಜೆಡಿಎಸ್ ಪಕ್ಷಗಳ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಾತನಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡರ ನಡುವೆ ಆತ್ಮೀಯತೆ ಇದೆ. ಈ ಹಾಲಿ ಹಾಗೂ ಮಾಜಿ ಪ್ರಧಾನಿಗಳ ಆಶೀರ್ವಾದ ಸೋಮಣ್ಣರಿಗೆ ಸಿಕ್ಕಿದೆ, ಎರಡೂ ಪಕ್ಷಗಳ ಕಾರ್ಯಕರ್ತರ ಬೆಂಬಲ ದೊರಕಿದೆ ಎಂದು ಹೇಳಿದರು.

ತಾವು ಮುಖ್ಯಮಂತ್ರಿಯಾಗಿದ್ದಾಗ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ನೀಡುತ್ತಿದ್ದೆ, ಹೈನುಗಾರಿಕೆ ಮಾಡುವವರಿಗೆ ಪ್ರೋತ್ಸಾಹಧನ ಕೊಡುತ್ತಿ ದ್ದೆವು, ಪ್ರಧಾನ ಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯ ಆರು ಸಾವಿರ ರು. ಜೊತೆಗೆ ರಾಜ್ಯ ಸರ್ಕಾರದಿಂದ ನಾಲ್ಕು ಸಾವಿರ ರು. ಕೊಡುತ್ತಿದ್ದೆವು. ಈಗಿನ ಕಾಂಗ್ರೆಸ್ ಸರ್ಕಾರ ಈ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸಿ ಜನರಿಗೆ ಅನ್ಯಾಯ ಮಾಡಿದೆ. ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಕರ್ಮಭೂಮಿಯಾದ ತುಮಕೂರಿನ ಜನ ಪ್ರಬುದ್ಧರು. ಅವರು ಪ್ರಬುದ್ಧ ಅಭ್ಯರ್ಥಿಯಾದ ಸೋಮಣ್ಣನವರನ್ನೇ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದರು.

ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ಕ್ಷೇತ್ರದ ಎಲ್ಲೆಡೆ ಪ್ರಧಾನಿ ನರೇಂದ್ರ ಮೋದಿಯವರ ಗಾಳಿ ಇದೆ. ಆ ಗಾಳಿ ದಿನದಿನಕ್ಕೂ ಬಿರುಗಾಳಿಯಾಗಿ ಬೀಸುತ್ತಿದೆ. ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ. ಮೋದಿಯವರಿಗೆ ಶಕ್ತಿ ತುಂಬಲು ಚುನಾವಣೆಯಲ್ಲಿ ತಮ್ಮನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು. ಏಪ್ರಿಲ್ 26 ರ ನಂತರ ಅಭಿವೃದ್ಧಿಯ ಹೊಸ ಶಕೆ ಆರಂಭವಾಗುತ್ತದೆ. ಅಂತಹ ಅಭಿವೃದ್ಧಿ ಬದಲಾವಣೆಗೆ ತಾವು ಬದ್ಧರಾಗಿರುವುದಾಗಿ ಸೋಮಣ್ಣ ಹೇಳಿದರು.

ಶಾಸಕ ಸುರೇಶ್‌ಗೌಡ ಮಾತನಾಡಿ, ಸೋಮಣ್ಣನವರ ಗೆಲುವಿಗೆ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮುಖಂಡರು ಕಾರ್ಯಕರ್ತರು ಹಾಲು, ಜೇನಿನಂತೆ ಒಂದಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.ಮಾಜಿ ಶಾಸಕ ಸುಧಾಕರ ಲಾಲ್ ಮಾತನಾಡಿ, ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರೊಂದಿಗೆ ಅಣ್ಣತಮ್ಮಂದಿರಂತೆ ಸೇರಿ ಸೋಮಣ್ಣ ಅವರ ಗೆಲುವಿಗೆ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಮಗೆ ಸೂಚನೆ ನೀಡಿದ್ದಾರೆ. ಅವರ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸಿ ಸೋಮಣ್ಣರನ್ನು ಗೆಲ್ಲಿಸುತ್ತೇವೆ ಎಂದರು.

ಭೈರತಿ ಬಸವರಾಜು ಮಾತನಾಡಿ ದೇವೇಗೌಡರು, ಯಡಿಯೂರಪ್ಪ ಸೇರಿ ಸೋಮಣ್ಣ ಅವರನ್ನು ತುಮಕೂರಿಗೆ ಅಭ್ಯರ್ಥಿ ಮಾಡಿದ್ದಾರೆ. ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರ ಕೈ ಬಲಪಡಿಸುವಂತೆ ಮನವಿ ಮಾಡಿದರು.ಸಂಸದ ಜಿ.ಎಸ್.ಬಸವರಾಜು, ಶಾಸಕ ಬಿ.ಜಿ.ಜ್ಯೋತಿಗಣೇಶ್, ಮಾಜಿ ಸಚಿವ ಭೈರತಿ ಬಸವರಾಜು, ವಿಧಾನ ಪರಿಷತ್ ಸದಸ್ಯ ಚಿದಾನಂದ ಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜನಪ್ಪ, ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ, ಬಿಜೆಪಿ ಮುಖಂಡ ಅನಿಲ್‌ಕುಮಾರ್ ಮೊದಲಾದವರು ಭಾಗವಹಿಸಿದ್ದರು.----------------------ಮುಖಂಡರ ಕಡೆಗಣನೆ; ಗೊಲ್ಲ ಸಮುದಾಯ ಆಕ್ರೊಶಕೆಸ್ತೂರಿನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ತಮ್ಮ ಮುಖಂಡರನ್ನು ವೇದಿಕೆ ಮೇಲೆ ಕೂರಿಸದೇ ಇದ್ದದ್ದಕ್ಕೆ ಗೊಲ್ಲ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಎಲ್ಲಾ ಸಮಾಜದವರು ಇದ್ದಾರೆ ಯಾದವ ಸಮುದಾಯದವರು ಎಲ್ಲಿ ಎಂದು ಪ್ರಶ್ನೆ ಮಾಡಿದಾಗ ಮೈತ್ರಿ ಅಭ್ಯರ್ಥಿ ಸೋಮಣ್ಣ ಮಾತನಾಡಿ ನಾನು ಹೊಸಬನಿದ್ದೇನೆ. ಇನ್ನು ಮೂರು ತಿಂಗಳು ಕಳೆಯಲಿ ಎಷ್ಟು ಶಿಸ್ತುಬದ್ಧವಾಗಿ ಕಾರ್ಯಕ್ರಮ ಮಾಡ್ತೀನಿ ಅಂತಾ ನೀವೇ ನೋಡಿ ಎಂದರು. ದಯವಿಟ್ಟು ನಿಮ್ಮ ಕಾಲುಗಳಿಗೆ ಬಿದ್ದು ಕ್ಷಮೆ ಕೇಳುತ್ತೇನೆ. ಈಗಲೂ ಏನೂ ಆಗಿಲ್ಲ, ಯಾರಾದರೂ ಮುಖಂಡರು ಇಲ್ಲಿದ್ದರೆ ಬನ್ನಿ. ನನ್ನ ಕುರ್ಚಿಯಲ್ಲಿಯೇ ಕುಳಿತುಕೊಳ್ಳಿ, ನಾನೇ ನಿಂತುಕೊಳ್ಳುತ್ತೇನೆ ಎಂದು ಸೋಮಣ್ಣ ತಿಳಿಸಿದರು.

Share this article