ಮುಂಗಾರು ಪೂರ್ವ ಮಳೆಗೆ ನಾರಿಹಳ್ಳ ಜಲಾಶಯ ಭರ್ತಿ

KannadaprabhaNewsNetwork | Published : May 22, 2025 1:02 AM
ತಾಲೂಕಿನ ಜೀವನಾಡಿಯಾಗಿರುವ ನಾರಿಹಳ್ಳ ಜಲಾಶಯವು ಮುಂಗಾರು ಪೂರ್ವ ಮಳೆಯಿಂದಾಗಿ ತುಂಬುವ ಹಂತಕ್ಕೆ ಬಂದಿದೆ. ಜಲಾಶಯ ಭರ್ತಿಯಾಗಲು ಒಂದಡಿ ಮಾತ್ರ ಬಾಕಿ ಇದೆ.
Follow Us

ನೀರಿನ ಒಳಹರಿವು ೩೭೪ ಕ್ಯುಸೆಕ್/ ಸ್ವಲ್ಪ ಪ್ರಮಾಣದ ನೀರು ಹೊರಕ್ಕೆ / ಜಲಾಶಯದ ಕೆಳಗಿನ ಗ್ರಾಮಗಳಲ್ಲಿ ಜಾಗೃತಿ

ವಿ.ಎಂ. ನಾಗಭೂಷಣ

ಕನ್ನಡಪ್ರಭ ವಾರ್ತೆ ಸಂಡೂರುತಾಲೂಕಿನ ಜೀವನಾಡಿಯಾಗಿರುವ ನಾರಿಹಳ್ಳ ಜಲಾಶಯವು ಮುಂಗಾರು ಪೂರ್ವ ಮಳೆಯಿಂದಾಗಿ ತುಂಬುವ ಹಂತಕ್ಕೆ ಬಂದಿದೆ. ಜಲಾಶಯ ಭರ್ತಿಯಾಗಲು ಒಂದಡಿ ಮಾತ್ರ ಬಾಕಿ ಇದೆ.ಹಿಂದಿನ ವರ್ಷವೂ ಉತ್ತಮ ಮಳೆಯಾದ ಕಾರಣ, ಜಲಾಶಯದಲ್ಲಿ ಸಾಕಷ್ಟು ನೀರಿತ್ತು. ಕೆಲ ದಿನಗಳಿಂದ ನಾರಿಹಳ್ಳದ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನಾರಿಹಳ್ಳ ಜಲಾಶಯ ಮುಂಗಾರು ಆರಂಭಕ್ಕೂ ಮುನ್ನವೇ ತುಂಬುವ ಹಂತದಲ್ಲಿದೆ.

ನಾರಿಹಳ್ಳ ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ ೦.೮೧ ಟಿಎಂಸಿ ಬುಧವಾರ ಜಲಾಶಯದಲ್ಲಿ ೦.೭೬೨ ಟಿಎಂಸಿ ನೀರು ಸಂಗ್ರಹವಾಗಿತ್ತು. ನೀರಿನ ಒಳಹರಿವು ೩೭೪ ಕ್ಯುಸೆಕ್ ಇದೆ. ನಾರಿಹಳ್ಳದ ಪಾತ್ರದಲ್ಲಿ ಮಳೆಯಾಗುತ್ತಿರುವುದು ಮತ್ತು ನಾರಿಹಳ್ಳ ಜಲಾಶಯ ತುಂಬುವ ಹಂತದಲ್ಲಿರುವ ಕಾರಣ, ಜಲಾಶಯದಿಂದ ಬುಧವಾರ ರಾತ್ರಿ ಸ್ವಲ್ಪ ಪ್ರಮಾಣದ ನೀರನ್ನು ಹೊರ ಬಿಡಲಾಗುವುದು ಎಂದು ನಾರಿಹಳ್ಳ ಜಲಾಶಯದ ಕೆಳಗಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗಿದೆ.

ತಾಲೂಕಿನ ತಾರಾನಗರದ ಬಳಿಯಲ್ಲಿ ನಾರಿಹಳ್ಳಕ್ಕೆ ಅಡ್ಡಲಾಗಿ ನಾರಿಹಳ್ಳ ಜಲಾಶಯ ನಿರ್ಮಿಸಲಾಗಿದೆ. ಸಂಡೂರಿನ ಘೋರ್ಪಡೆ ರಾಜ ವಂಶಸ್ಥರಾದ ಎಂ.ವೈ. ಘೋರ್ಪಡೆಯವರು ಹಣಕಾಸು ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಈ ಜಲಾಶಯದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು.

ನಾರಿಹಳ್ಳ ಜಲಾಶಯದಿಂದಲೇ ಸಂಡೂರು ಪಟ್ಟಣ ಹಾಗೂ ದೋಣಿಮಲೈನ ಟೌನ್‌ಶಿಪ್‌ಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಬಂಡ್ರಿ, ಅಂಕಮನಾಳ್, ಸೋಮಲಾಪುರ, ಯಶವಂತನಗರ, ಸುಶೀಲಾನಗರ, ಕೃಷ್ಣಾನಗರ, ಸಂಡೂರು, ದೋಣಿಮಲೈ, ಭುಜಂಗನಗರ ಮುಂತಾದೆಡೆಗಳಿಂದ ಸಣ್ಣ ತೊರೆಗಳಾಗಿ ಹರಿದು ಬರುವ ಮಳೆ ನೀರು ನಾರಿಹಳ್ಳ ಜಲಾಶಯಕ್ಕೆ ಬಂದು ಸೇರುತ್ತದೆ. ತಾಲೂಕಿನ ಕುರೆಕುಪ್ಪದ ಬಳಿಯಲ್ಲಿ ಹಾದು ಹೋಗುವ ತುಂಗಭದ್ರಾ ಬಲದಂಡೆ ಕಾಲುವೆಯಲ್ಲಿ ನೀರಿದ್ದಾಗ ಮಾತ್ರ, ಅಲ್ಲಿಂದ ನಾರಿಹಳ್ಳ ಜಲಾಶಯಕ್ಕೆ ಪ್ರತಿದಿನ ೯ ಕ್ಯುಸೆಕ್ ನೀರನ್ನು ಪೂರೈಸಲಾಗುತ್ತದೆ. ಜಲಾಶಯಕ್ಕೆ ಸುತ್ತಲಿನ ಗುಡ್ಡಬೆಟ್ಟಗಳು ಹಾಗೂ ಗ್ರಾಮಗಳಲ್ಲಿನ ಸಣ್ಣ ತೊರೆಗಳ ನೀರೆ ಪ್ರಮುಖ ನೀರಿನ ಮೂಲಗಳಾಗಿವೆ.

ನಾರಿಹಳ್ಳ ಜಲಾಶಯ ಹಸಿರುಟ್ಟ ಗುಡ್ಡಬೆಟ್ಟಗಳಿಂದ ಆವೃತವಾಗಿರುವುದರಿಂದ ಈ ಜಲಾಶಯ ನೋಡುಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ. ಇದರ ಅಂದವನ್ನು ಸವಿಯಲು ಪ್ರಕೃತಿ ಆರಾಧಕರು ಭೀಮತೀರ್ಥದ ಬಳಿಯ ವ್ಯೂ ಪಾಯಿಂಟ್‌ಗೆ ತೆರಳುತ್ತಾರೆ. ವ್ಯೂಪಾಯಿಂಟಿಂದ ನಾರಿಹಳ್ಳದ ಜಲಾಶಯದ ವಿಹಂಗಮ ನೋಟ ಕಾಣಬಹುದಾಗಿದೆ. ಈಗಾಗಲೇ ನಾರಿಹಳ್ಳ ಜಲಾಶಯ ಮತ್ತು ಅದರ ಸುತ್ತಲಿನ ಮಂಜು ಮುಸುಕಿನ ಗುಡ್ಡಬೆಟ್ಟಗಳ ಸುಂದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮುಂಗಾರು ಪೂರ್ವದಲ್ಲಿಯೇ ನಾರಿಹಳ್ಳ ಜಲಾಶಯ ಭರ್ತಿಯಾಗುತ್ತಿರುವುದು ಜಲಾಶಯದ ಮೇಲೆ ಅವಲಂಬಿತರಾಗಿರುವವರಿಗೆ ಹಾಗೂ ಪ್ರಕೃತಿ ಆರಾಧಕರಿಗೆ ತುಂಬಾ ಸಂತೋಷವನ್ನುಂಟು ಮಾಡಿದೆ.