- ಸೀತಾ ಸಮೇತ ಶ್ರೀ ರಾಮ ದೇವರ ಉತ್ಸವ ಮೂರ್ತಿ ಮೆರವಣಿಗೆ
- ಸೋಮೇಶ್ವರನಾಥ ಶ್ರೀ, ಶಾಸಕ ಡಿ. ರವಿಶಂಕರ್ ಚಾಲನೆ- ಹರಕೆ ತೀರಿಸಿ ಭಕ್ತಿಯ ಪರಾಕಾಷ್ಠೆ ಮೆರೆದ ಭಕ್ತರು.
----ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ದೇವರ ಬ್ರಹ್ಮ ರಥೋತ್ಸವ ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.ಬೆಳಗ್ಗೆ 11.10 ರಿಂದ 11.20ರ ಸಮಯದಲ್ಲಿ ನಡೆದ ರಥೋತ್ಸವಕ್ಕೆ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಶ್ರೀಗಳು ಮತ್ತು ಶಾಸಕ ಡಿ. ರವಿಶಂಕರ್ ಚಾಲನೆ ನೀಡಿದರು.
ಇವರೊಂದಿಗೆ ಗಾವಡಗೆರೆ ಗುರುಲಿಂಗ ಜಂಗಮಠದ ನಟರಾಜ ಶ್ರೀಗಳು, ಬೆಟ್ಟದಪುರ ಸಲಿಲಾಖ್ಯ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮತ್ತು ಹಾಡ್ಯ ಮಠದ ಈಶಾನ್ನೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.ದೇವಾಲಯದ ಆವರಣದಲ್ಲಿ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೀತಾ ಸಮೇತ ಶ್ರೀ ರಾಮ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಕರೆ ತಂದ ಅರ್ಚಕರು ಮತ್ತು ಭಕ್ತಾದಿಗಳು ದೇವರನ್ನು ಕೂರಿಸಿ ಪುಷ್ಪವೃಷ್ಟಿ ಗೈದರು. ಆನಂತರ ನೆರೆದಿದ್ದ ಸಹಸ್ರಾರು ಭಕ್ತರು ಸೀತಾ ಸಮೇತ ಶ್ರೀ ರಾಮನಿಗೆ ಜಯಕಾರದ ಘೋಷಣೆ ಮೊಳಗಿಸಿ ದೇವಾಲಯದ ಸುತ್ತ ಒಂದು ಸುತ್ತು ರಥವನ್ನು ಎಳೆದು ತಮ್ಮ ಹರಕೆ ತೀರಿಸಿ ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆದರು.
ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ಶ್ರೀ ರಾಮನಿಗೆ ಪೂಜಿಸಿ ಮತ್ತು ನಮಿಸಿ ಜಾತ್ರೆಯ ಸಂಭ್ರಮದಲ್ಲಿ ಮಿಂದೆದ್ದರು. ರಥೋತ್ಸವದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಡಿ. ರವಿಶಂಕರ್ ಮಾತನಾಡಿ, ಮುಂದಿನ ದಿನಗಳಲ್ಲಿ ಜಾತ್ರೆಯನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇನೆ, ಇದಕ್ಕೆ ಸರ್ವರು ಕೈಜೋಡಿಸಬೇಕೆಂದು ಕೋರಿದರು.ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಮಾಜಿ ಸದಸ್ಯ ಚಿಕ್ಕೇಗೌಡ, ಸಣ್ಣಪ್ಪ, ಕುಪ್ಪೆ ಗ್ರಾ.ಪಂ. ಅಧ್ಯಕ್ಷೆ ಗೀತಾ ದಿನೇಶ್, ಉಪಾಧ್ಯಕ್ಷೆ ಗೀತಾ ಕಾಂತರಾಜು, ಸಿ.ಎಸ್. ಪೂರ್ಣಿಮಾ ಇದ್ದರು.