ಭಾಷೆಯಿಂದ ಜನಾಂಗದ ಅಭಿವೃದ್ಧಿ ಸಾಧ್ಯ: ಕಳ್ಳಿಚಂಡ ವಿಷ್ಣು ಕಾರ್ಯಪ್ಪ

KannadaprabhaNewsNetwork | Published : Dec 29, 2024 1:21 AM

ಸಾರಾಂಶ

ಭಾಷೆ ಅಳಿದರೆ ಸಂಸ್ಕೃತಿ ನಾಶವಾಗುತ್ತದೆ. ಭಾಷೆ ಉಳಿದರಷ್ಟೇ ಜನಾಂಗದ ಅಭಿವೃದ್ಧಿ ಸಾಧ್ಯ ಎಂದು ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಭಾಷೆ ಅಳಿದರೆ ಸಂಸ್ಕೃತಿ ನಾಶವಾಗುತ್ತದೆ. ಭಾಷೆ ಉಳಿದರಷ್ಟೇ ಜನಾಂಗದ ಅಭಿವೃದ್ಧಿ ಸಾಧ್ಯ ಎಂದು ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹೇಳಿದರು.

ನಾಪೋಕ್ಲು ಕೊಡವ ಸಮಾಜದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕೊಡವ ಸಮಾಜದ ಬೆಳ್ಳಿಹಬ್ಬ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಡವ ಸಂಸ್ಕೃತಿ ಉಳಿಯಲು ಮೊದಲು ಭಾಷೆ ಕಲಿಸುವ ಕೆಲಸ ಆಗಬೇಕು. ಭಾಷೆಯ ಅಭಿವೃದ್ಧಿಯಿಂದಷ್ಟೇ ಕೊಡವ ಸಂಸ್ಕೃತಿ ಮೂಲೆ ಮೂಲೆಯಲ್ಲಿ ಉಳಿಯಬಲ್ಲದು ಎಂದರು.

ಕೊಡವರು ಆಸ್ತಿಯನ್ನು ಮಾರಬಾರದು ಹಿರಿಯರು ಮಾಡಿಟ್ಟ ಆಸ್ತಿಯನ್ನು ಜತನದಿಂದ ಕಾಪಾಡಬೇಕು ಎಂದ ಅವರು ಮಕ್ಕಳಿಗೆ ನಮ್ಮ ಸಂಸ್ಕೃತಿ ಪದ್ಧತಿ ಪರಂಪರೆಯ ಜೊತೆಗೆ ಉತ್ತಮ ಶಿಕ್ಷಣವನ್ನು ಕೊಟ್ಟು ವಿದ್ಯಾವಂತರನ್ನಾಗಿ ಮಾಡಬೇಕು ಎಂದ ಅವರು ಕೊಡವ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಕೊಡವ ಜನಾಂಗ ನಿರ್ವಹಿಸಬೇಕು ಎಂದು ಇತ್ತೀಚಿನ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೆರಪ್ಪ ಮಾತನಾಡಿ, ಒಂದು ಜನಾಂಗದ ಜನಸಂಖ್ಯೆ ಇಳಿಮುಖವಾದ ಸಮಸ್ಯೆಗಳು ಉದ್ಭವಿಸುತ್ತವೆ. ಜನಾಂಗದ ಶಕ್ತಿ ಕುಂದಿದಾಗ ಇತರ ಜನಾಂಗದವರು ಸವಾರಿ ಮಾಡುತ್ತಾರೆ ಎಂದ ಅವರು ಕೊಡವರ ವಿಶಿಷ್ಟ ಸಂಸ್ಕೃತಿಯನ್ನು ಉಳಿಸುವಲ್ಲಿ ಎಚ್ಚರದಿಂದ ಇರಬೇಕು. ಪ್ರತಿ ಕೊಡವ ಸಮಾಜದವರು ಒಗ್ಗೂಡಬೇಕು. ಈ ನಿಟ್ಟಿನಲ್ಲಿ ಕೊಡವ ಯುವ ಜನಾಂಗದ ಏಳಿಗೆಗೆ ಇದೇ ಸಮಾಜದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಮುನ್ನುಡಿಯಾಗಲಿದೆ. ಇದಕ್ಕೆ ಜನಾಂಗಬಾಂಧವರು ಸ ಹಕರಿಸಬೇಕು ಎಂದರು.

ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾಪೋಕ್ಲು ಕೊಡವ ಸಮಾಜದ ಹಿಂದಿನ ಅಧ್ಯಕ್ಷರು ಉತ್ತಮ ಕಾರ್ಯ ನಿರ್ವಹಣೆಯಿಂದ ಸಮಾಜ ಅಭಿವೃದ್ಧಿ ಕಂಡಿದೆ. ಕೊಡವರಲ್ಲಿ ಶಿಸ್ತು, ಒಗ್ಗಟ್ಟು ಇರಬೇಕು. ಕೊಡವ ಸಮಾಜಗಳು ಅಭಿವೃದ್ಧಿಯಾಗಬೇಕು ಎಂದರು. ನಾಪೋಕ್ಲು ಕೊಡವ ಸಮಾಜ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಗಳನ್ನು ನಿರ್ವಹಿಸುತ್ತಿದೆ. ವೀರ ಸೇನಾನಿಗಳಿಂದ ಜಿಲ್ಲೆಯ ಖ್ಯಾತಿ ದೇಶ ವಿದೇಶಗಳಲ್ಲಿ ಪಸರಿಸಿದೆ. ಅಂತಹ ಸೇನಾನಿಗಳನ್ನು ಅವಮಾನಿಸುವ ಕೆಲಸ ಆಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದರು.

ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಣವಟ್ಟಿರ ಬಿ.ಮಾಚಯ್ಯ, ಕೊಡವ ಸಮಾಜದ ಹಿನ್ನೆಲೆ ಹಾಗೂ ನಡೆದ ಬಂದ ದಾರಿಯ ಬಗ್ಗೆ ಬೆಳಕು ಚೆಲ್ಲಿ ಸಮಾಜದ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರನ್ನು ನೆನಪು ಮಾಡಿಕೊಂಡರು.

ಅತಿಥಿಗಳಾಗಿ ಪಾಲ್ಗೊಂಡ ಬ್ಲೂ ಡಾರ್ಟ್ ಈ ಕಾಮರ್ಸ್ ಗುಂಪಿನ ದಕ್ಷಿಣ ಭಾರತದ ಪ್ರಾದೇಶಿಕ ನಿವೃತ್ತ ಮುಖ್ಯಸ್ಥ ಬಾಳೆಯಡ ಕರುಣ್ ಕಾಳಪ್ಪ ಮಾತನಾಡಿ, ಕೊಡವ ಜನಾಂಗ ಎಂದರೆ ಎಲ್ಲಾ ಒಂದೇ ಆಗಿದೆ. ಆದರೆ ಇತರ ಜನಾಂಗಗಳಲ್ಲಿ ಹಲವಾರು ಉಪಜಾತಿಗಳಿದೆ ಎಂದ ಅವರು ನಮ್ಮತನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ ಎಂದರು. ನಮ್ಮ ಸಂಸ್ಕೃತಿ ಆಚಾರ ವಿಚಾರ ಸಂಸ್ಕೃತಿ ಉಳಿಯಬೇಕಾದರೆ ನಮ್ಮ ಉದ್ಯೋಗದ ಜೊತೆ ಆಸ್ತಿಯನ್ನು ಉಳಿಸಿಕೊಳ್ಳುವುದು ಅಷ್ಟೇ ಮುಖ್ಯ ಎಂದರು.

ಕೊಡವ ಜನಪದ ತಜ್ಞ ಬೊಟ್ಟೋಳಂಡ ಕಾಶಿ ಅಚ್ಚಯ್ಯ ಮಾತನಾಡಿ, ಕೊಡವರ ಹಿನ್ನೆಲೆ ಹಾಗೂ ಕೊಡವರ ದೈವ ದೇವರುಗಳ ಚರಿತ್ರೆಯನ್ನು ವಿಸ್ತಾರವಾಗಿ ಮನವರಿಕೆ ಮಾಡಿಕೊಟ್ಟರು.

ಇದಕ್ಕೂ ಮುನ್ನ ಕೊಡವ ಸಮಾಜದ ವಾರ್ಷಿಕ ಮಹಾಸಭೆ ನಡೆಯಿತು. ಬಳಿಕ ಅತಿಥಿಗಳನ್ನು ತಳಿಯಕ್ ಬೊಳಕ್ ನೊಂದಿಗೆ ಸ್ವಾಗತಿಸಲಾಯಿತು. ಬೆಳ್ಳಿ ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಉಪಾಧ್ಯಕ್ಷ ಕರವಂಡ ಪಿ.ನಾಣಯ್ಯ, ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಸಹಕಾರ್ಯದರ್ಶಿ ಮಾಚೆಟ್ಟಿರ ಕುಶಾಲಪ್ಪ, ಬಾಳೆಯಡ ನಿಶಾ ಮೇದಪ್ಪ, ನಿರ್ದೇಶಕರು ಮಾಜಿ ಅಧ್ಯಕ್ಷರು ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಬಿದ್ದಾತಂಡ ರಮೇಶ್ ಚಂಗಪ್ಪ, ನಿರ್ದೇಶಕರು, ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಕುಲ್ಲೇಟಿರ ಅಜಿತ್ ನಾಣಯ್ಯ ಸ್ವಾಗತಿಸಿದರು. ಬಾಳೆಯಡ ದಿವ್ಯಮಂದಪ್ಪ ಹಾಗೂ ಬೊಟ್ಟೋಳಂಡ ವಿನಿತ ಮಾದಪ್ಪ ಕಾರ್ಯಕ್ರಮ ನಿರೂಪಿಸಿ ಮಾಚೆಟ್ಟಿರ ಕುಶು ಕುಶಾಲಪ್ಪ ವಂದಿಸಿದರು.

ಬಳಿಕ ಬೆಳ್ಳಿ ಮಹೋತ್ಸವದ ಅಂಗವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.

--------------------

ಇಂದಿನ ಕಾರ್ಯಕ್ರಮಗಳು: ಬೆಳ್ಳಿ ಹಬ್ಬದ ಅಂಗವಾಗಿ ನಾಪೋಕ್ಲು ಮಾರುಕಟ್ಟೆ ಆವರಣದಿಂದ ಕೊಡವ ಸಮಾಜದವರೆಗೆ ಭಾನುವಾರ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಮೆರವಣಿಗೆಯ ಉದ್ಘಾಟನೆಯನ್ನು ಮೈಸೂರು ಕೊಡವ ಸಮಾಜದ ಅಧ್ಯಕ್ಷ ಪೊಂಜಾಂಡ ಎ. ಗಣಪತಿ ನೆರವೇರಿಸುವರು. ಬೆಳಗ್ಗೆ 10 ಗಂಟೆಯಿಂದ ಸಮಾಜ ಬಾಂಧವರಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಉಮ್ಮತ್ತಾಟ್ ಸ್ಪರ್ಧೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಬೊಪ್ಪಂಡ ಬೊಳ್ಲಮ್ಮ ನಾಣಯ್ಯ, ಬೊಳಕಾಟ್ ಸ್ಪರ್ಧೆಯನ್ನು ಕೊಡವ ಸಮಾಜದ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕೋಲಾಟ ಸ್ಪರ್ಧೆಯನ್ನು ನಾಪೋಕ್ಲು ಕೊಡವ ಸಮಾಜದ ಮಾಜಿ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚೆಂಗಪ್ಪ, ಕತ್ತಿಯಾಟ್ ಹಾಗೂ ಪರೆಯಕಳಿ ಸ್ಪರ್ಧೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ , ವಾಲಗತಾಟ್ ಮತ್ತು ಕಪ್ಪೆ ಯಾಟ್ ಸ್ಪರ್ಧೆಯನ್ನು ಬಲಂಬೇರಿಯ ಸಮಾಜ ಸೇವಕ ಬೊಳ್ಳಚೆಟ್ಟೀರ ಎಂ. ಸುರೇಶ್ ಉದ್ಘಾಟಿಸುವರು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಪಾಲೂರಿನ ಸಮಾಜ ಸೇವಕ ಬೊಳ್ಳಿಯಂಡ ಪಿ. ಹರೀಶ್ ಕಾರ್ಯಪ್ಪ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆಯನ್ನು ಪೇರೂರಿನ ಕೊಡವ ಜಾನಪದ ತಜ್ಞ ಬೊಟ್ಟೋಳಂಡ ಕಾಶಿ ಅಚ್ಚಯ್ಯ ಉದ್ಘಾಟಿಸುವರು.

ಮಧ್ಯಾಹ್ನ 3 ಗಂಟೆಗೆ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭ ನಡೆಯಲಿದೆ. ಕೊಡವಸಮಾಜದ ಅಧ್ಯಕ್ಷ ಮುಂಡಂಡ ಸಿ ನಾಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಅಜ್ಜಿಕುಟ್ಟೀರ ಪೊನ್ನಣ್ಣ, ಸಂಸದ ಕೃಷ್ಣರಾಜ ಯದುವೀರ್ ಒಡೆಯರ್, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ, ಉದ್ಯಮಿ ಬಾಚಂಗಂಡ ಎಸ್. ಮೊಣ್ಣಪ್ಪ ಪಾಲ್ಗೊಳ್ಳುವರು.

Share this article