ವಿವಿಧ ಕಲಾವಿದರಿಂದ ನೃತ್ಯ ಪ್ರದರ್ಶನ, ಸಮೂಹ ಚರ್ಚೆ
ಕನ್ನಡಪ್ರಭ ವಾರ್ತೆ ಉಡುಪಿಬೆಂಗಳೂರಿನ ನೃತ್ಯ ಕಲಾವಿದೆ ಹಾಗೂ ವಿಜ್ಞಾನಿ ಡಾ.ಶುಭಾರಾಣಿ ಬೋಳಾರ್ ಅವರ ಭರತ ನೃತ್ಯ ಸಂಗೀತಾ ಅಕಾಡೆಮಿ ಮತ್ತು ಮೈಸೂರಿನ ನಾಟ್ಯಾಚಾರ್ಯ ಪ್ರೊ.ಕೆ. ರಾಮಮೂರ್ತಿ ರಾವ್ ಅವರ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್, ಡಿ.14 ಮತ್ತು 15ರಂದು ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನೃತ್ಯ ಮತ್ತು ಪ್ರದರ್ಶನ ಕಲೆಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ.ಈ ಬಗ್ಗೆ ನೂಪುರ ಕಲಾವಿದರು ಟ್ರಸ್ಟ್ ಅಧ್ಯಕ್ಷ ಪ್ರೊ.ಕೆ.ರಾಮಮೂರ್ತಿ ರಾವ್ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.14ರಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ಸಂಗೀತಾ ನೃತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೋ. ಲಕ್ಷ್ಮೀನಾರಾಯಣ ಕಾರಂತರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ತಿನ ಅಧ್ಯಕ್ಷ ವಿದ್ವಾನ್ ಪ್ರವೀಣ್ ಯು.ಕೆ. ಆಗಮಿಸಲಿದ್ದಾರೆ.ಉದ್ಘಾಟನಾ ಸಮಾರಂಭದ ನಂತರ ವಿದ್ವಾನ್ ಅನೂರು ಅನಂತ ಕೃಷ್ಣ ಶರ್ಮ, ‘ಸಂಗೀತ ಮತ್ತು ನೃತ್ಯದಲ್ಲಿ ಮೃದಂಗದ ಪಾತ್ರ’ ಹಾಗೂ ಪ್ರೊ.ಕೆ. ರಾಮಮೂರ್ತಿ ರಾವ್ ಅವರು ‘ಕಲಾವಿಮರ್ಶೆ’ ಹಾಗೂ ಡಾ.ಪದ್ಮನಿ ಶ್ರೀಧರ್ ಅವರು ‘ಸೂಳಾಧಿಗಳು ಹಾಗೂ ದಾಮೋದರ ಪಂಡಿತನ ಸಂಗೀತ ದರ್ಪಣದ’ ಬಗ್ಗೆ ಪ್ರಧಾನ ಭಾಷಣ ಮಾಡಲಿದ್ದಾರೆ.ಸಮ್ಮೇಳನದಲ್ಲಿ ಬೆಂಗಳೂರಿನ ಡಾ.ರಶ್ಮಿ ಪ್ರಸಾದ್, ಉಡುಪಿಯ ವಿದ್ವಾನ್ ರಾಮಕೃಷ್ಣ ಕೂಡಚ, ಬೆಂಗಳೂರಿನ ಕೌಸಲ್ಯ ನಿವಾಸ್, ದಾಳಿ ನಂದನ ಕೃಷ್ಣ ಕುಮಾರ್, ಮಣಿಪಾಲದ ಡಾ.ಅನ್ನಪೂರ್ಣ ಆಚಾರ್ ಹಾಗೂ ಮಂಗಳೂರಿನ ವಿದುಷಿ ಶಾರದಮಣಿ ಶೇಖರ್ ಅವರು ವಿವಿಧ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕ ನೀಡಲಿದ್ದು, ಸಂಜೆ ನೃತ್ಯಾನಿಕೇತನ ಕೊಡವೂರಿನ ವಿದ್ವಾನ್ ಸುಧೀರ್ ಕೊಡವೂರು ಹಾಗೂ ಮಾನಸಿ ಸುಧೀರ್ ನೇತೃತ್ವದಲ್ಲಿ ನೃತ್ಯ ಪ್ರದರ್ಶನ ನಡೆಯಲಿದೆ.15ರಂದು ಬೆಳಗ್ಗೆ ಯಕ್ಷಗಾನ ಮತ್ತು ಭರತ ನಾಟ್ಯದ ಸಾಮ್ಯತೆ ಹಾಗೂ ವೈಷಮ್ಯದ ಬಗ್ಗೆ ವಿದುಷಿ ಸುಮಂಗಲ ರತ್ನಕರ ರಾವ್ ಪ್ರಧಾನ ಭಾಷಣ ಮಾಡಲಿದ್ದಾರೆ. ನಂತರ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲೆಗಳನ್ನು ಹೆಚ್ಚು ಜನಪ್ರಿಯತೆ ಗಳಿಸುವ ಬಗ್ಗೆ ವಿದುಷಿ ಸುಮಂಗಲ ರತ್ನಕರ ರಾವ್ ನೇತೃತ್ವದಲ್ಲಿ ಸಮೂಹ ಚರ್ಚೆ ನಡೆಯಲಿದ್ದು, ನೃತ್ಯ ಗುರುಗಳಾದ ಚಂದ್ರಶೇಖರ್ ನಾವಡ, ವಿದ್ಯಾಶ್ರೀ ರಾಧಕೃಷ್ಣ, ದೀಪಕ್ ಕುಮಾರ್, ಸುಧೀರ್ ಕೊಡವೂರು ಭಾಗವಹಿಸಲಿದ್ದಾರೆ. ಇದೇ ದಿನ ವಿದ್ವಾನ್ ಶ್ರೀರಾಮ್ ಭಟ್, ವಿದುಷಿ ವೀಣಾ ಸಾಮಗ, ಡಾ. ಶುಭಾರಾಣಿ ಬೋಳಾರ್, ಖುಷ್ಟು ಜಾದವ್ ಮತ್ತು ಪ್ರೊ.ಕೆ. ರಾಮಮೂರ್ತಿ ರಾವ್ ವಿವಿಧ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.ಸಂಜೆ 5 ಗಂಟೆಗೆ ಬೆಂಗಳೂರು ನಗರ ವಿವಿ ಮಾಜಿ ಕುಲಸಚಿವ ಪ್ರೊ.ಶಿವರಾಮ್ ಅಧ್ಯಕ್ಷತೆಯಲ್ಲಿ, ಉಡುಪಿಯ ರಂಜಿನಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಪ್ರೊ.ಅರವಿಂದ ಹೆಬ್ಬಾರ್ ಸಮಾರೋಪ ಭಾಷಣ ಮಾಡಲಿದ್ದು, ವೈಕುಂಠ ಬಾಳಿಗ ಕಾಲೇಜಿನ ನಿರ್ದೇಶಿಕಿ ಡಾ.ಕೆ. ನಿರ್ಮಲಾ ಕುಮಾರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭದ ನಂತರ ಬೆಂಗಳೂರಿನ ಕೌಸಲ್ಯ ನಿವಾಸ್ ತಂಡದವರಿಂದ ‘ಹನುಮಾನ್ ಚಾಲೀಸ್’ ಮತ್ತು ಡಾ. ಶುಭಾರಾಣಿ ಬೋಳಾರ್ ಅವರ ಶಿಷ್ಯರಿಂದ ‘ಮೋಕ್ಷ’ ನೃತ್ಯ ರೂಪಕದ ಪ್ರದರ್ಶನವಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಎನ್.ಸಿ.ಪಿ.ಎ. ಅಧ್ಯಕ್ಷೆ ಡಾ.ಶುಭಾರಾಣಿ ಬೋಳಾರ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ್, ವಿಬಿಸಿಎಲ್ ಕಾಲೇಜಿನ ನಿರ್ದೇಶಕಿ ಡಾ.ಕೆ.ನಿರ್ಮಲಾ ಕುಮಾರಿ, ರಾಧಕೃಷ್ಣ ನೃತ್ಯನಿಕೇತನದ ನಿರ್ದೇಶಕಿ ವೀಣಾ ಸಾಮಗ ಉಪಸ್ಥಿತರಿದ್ದರು.