ಇಂದಿನ ಯುವಜನರು ಕೆಂಪೇಗೌಡರನ್ನು ಜಾತ್ಯತೀತ ವ್ಯಕ್ತಿಯಾಗಿ ನೋಡುವ ಮೂಲಕ ಆತನ ಆದರ್ಶಗಳನ್ನು ಅನುಸರಿಸಬೇಕು.
ಹೊಸಪೇಟೆ: ನಾಡಪ್ರಭು ಕೆಂಪೇಗೌಡರು ಜನರ ಒಳಿತಿಗಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ತರುವುದರ ಮೂಲಕ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ವಿಜಯನಗರ ಸಾಮ್ರಾಜ್ಯದ ಸಾಮಂತ ಅರಸನಾಗಿದ್ದ ಕೆಂಪೇಗೌಡರು ತಮ್ಮ ಆಡಳಿತಾವಧಿಯಲ್ಲಿ ನೆಲಮೂಲ ಸಂಸ್ಕೃತಿಯನ್ನು ಅಳವಡಿಸಿಕೊಂಡು ಹಲವಾರು ಕೆರೆಗಳು, ದೇವಾಲಯಗಳು, ಪೇಟೆಗಳನ್ನು ನಿರ್ಮಿಸುವುದರ ಮೂಲಕ ಪ್ರಜಾಕಲ್ಯಾಣಕ್ಕೆ ಒತ್ತು ನೀಡಿದ್ದರು. ಈಗ ವಿಶ್ವ ಮನ್ನಣೆ ಪಡೆದಿರುವ ಬೆಂಗಳೂರು ನಗರದ ನಿರ್ಮಾತೃ ಆಗಿದ್ದಾರೆ. ಕೆಂಪೇಗೌಡರ ದೂರದೃಷ್ಟಿ ಮತ್ತು ಆಡಳಿತ ನೀತಿಗಳು ಮಾದರಿಯಾಗಿವೆ. ಇಂದಿನ ಯುವಜನರು ಕೆಂಪೇಗೌಡರನ್ನು ಜಾತ್ಯತೀತ ವ್ಯಕ್ತಿಯಾಗಿ ನೋಡುವ ಮೂಲಕ ಆತನ ಆದರ್ಶಗಳನ್ನು ಅನುಸರಿಸಬೇಕು. ವಿಕೃತ ಕೆಲಸಗಳನ್ನು ಮಾಡದೇ ಸುಕೃತ ಕೆಲಸಗಳ ಕಡೆಗೆ ಮುಖ ಮಾಡಬೇಕು ಎಂದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಂಪೇಗೌಡರು ಜನಾನುರಾಗಿ ಆಡಳಿತಗಾರರಾಗಿದ್ದರು. ಇವರು ಮಧ್ಯಕಾಲೀನ ಯುಗದಲ್ಲಿ ನಗರೀಕರಣಕ್ಕೆ ಆದ್ಯತೆ ನೀಡುವ ಮೂಲಕ ಆದಾಯದ ಮೂಲಗಳನ್ನು ಹೆಚ್ಚಿಸುವ ಕೆಲಸಕ್ಕೆ ಮುಂದಾದರು. ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಬೆಂಗಳೂರು ವಿಶ್ವ ಮನ್ನಣೆ ಪಡೆದಿರುವುದು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನೇ ನಾಮನಿರ್ದೇಶನ ಮಾಡಲಾಗಿದೆ ಎಂದರು.
ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿಜಯ್ ಪೂಣಚ್ಛ ತಂಬಂಡ, ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ.ಚಿನ್ನಸ್ವಾಮಿ ಸೋಸಲೆ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.