ಕನ್ನಡಪ್ರಭ ವಾರ್ತೆ ಕುಶಾಲನಗರ
ಇಂದಿರಾ ಬಡಾವಣೆಯಲ್ಲಿರುವ ಕೇರಳ ಸಮಾಜ ಕಟ್ಟಡದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ ಉದ್ಘಾಟಿಸಿದರು.
ಮೀನು ವಿಜ್ಞಾನಿ ಹೀರಾಲಾಲ್ ಚೌಧರಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿ ನಮಿಸಿದರು. ಮೀನು ತೊಟ್ಟಿಗೆ ಅಲಂಕಾರಿಕ ಮೀನುಗಳನ್ನು ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಅತಿಥಿಯಾಗಿ ಪಾಲ್ಗೊಂಡಿದ್ದ ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿದರು. ಬದುಕನ್ನು ಕಟ್ಟಿಕೊಡುವ ಉದ್ಯಮವಾಗಿ ಮೀನು ಕೃಷಿ ಕ್ಷೇತ್ರ ಬೃಹದಾಕಾರವಾಗಿ ಬೆಳೆದುನಿಂತಿದೆ. ಬದಕನ್ನು ಹಸನಗೊಳಿಸುವುದರೊಂದಿಗೆ ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಯಲ್ಲಿ ಕೂಡ ತನ್ನದೇ ಆದ ಕೊಡುಗೆ ನೀಡುತ್ತಿದೆ. ಮನೆಯಂಗಳ, ಕೃಷಿ ಭೂಮಿಯಲ್ಲಿ ಮೀನು ಉತ್ಪಾದನೆ ಉದ್ದಿಮೆ ಸಾಹಸದೊಂದಿಗೆ ಲಾಭದಾಯಕ ಕೂಡ ಎಂದ ಅವರು, ಮೀನು ಕೃಷಿಯಲ್ಲಿ ತೊಡಗುವವರೊಂದಿಗೆ ಇಲಾಖೆ ಹಾಗೂ ಸರಕಾರ ಒತ್ತಾಸೆಯಾಗಿ ಸದಾ ಇರಬೇಕಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಮೀನು ಕೃಷಿಕ ತೇಜಸ್ ನಾಣಯ್ಯ ಅವರು ಮೀನು ಕೃಷಿಯ ಬಗ್ಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್, ಇಲಾಖೆಯ ಸಹಾಯಕ ನಿರ್ದೇಶಕರಾದ ಮಿಲನ್ ಭರತ್, ಸಚಿನ್, ಸಂಘದ ನಿರ್ದೇಶಕರುಗಳು, ಸದಸ್ಯರು ಸೇರಿದಂತೆ ಕುಶಾಲನಗರ, ಸೋಮವಾರಪೇಟೆ ತಾಲೂಕಿನ ಮೀನು ಕೃಷಿಕರು ಇದ್ದರು.