ನ್ಯಾಷನಲ್‌ ಹೆರಾಲ್ಡ್‌ ಕೇಸಲ್ಲಿ ಕೇಂದ್ರದಿಂದದ್ವೇಷ ರಾಜಕಾರಣ: ಕಾಂಗ್ರೆಸ್ ಆಕ್ರೋಶ

KannadaprabhaNewsNetwork |  
Published : Dec 18, 2025, 12:45 AM IST
ಕಾಂಗ್ರೆಸ್‌ ಪ್ರತಿಭಟನೆ. | Kannada Prabha

ಸಾರಾಂಶ

‘ಬಿಜೆಪಿಯ ದ್ವೇಷದ ರಾಜಕಾರಣದ ವಿರುದ್ಧ ಸದನದ ಒಳಗೆ, ಹೊರಗೆ ಹಾಗೂ ರಾಜ್ಯದ ಉದ್ದಗಲಕ್ಕೂ ಹೋರಾಟ ಮುಂದುವರೆಸುತ್ತೇವೆ. ಕಾಂಗ್ರೆಸ್‌ನವರು ಕೈ ಕಟ್ಟಿ ಕೂರುವವರಲ್ಲ ಎಂಬುದನ್ನು ತೋರಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸೌಧ

‘ಬಿಜೆಪಿಯ ದ್ವೇಷದ ರಾಜಕಾರಣದ ವಿರುದ್ಧ ಸದನದ ಒಳಗೆ, ಹೊರಗೆ ಹಾಗೂ ರಾಜ್ಯದ ಉದ್ದಗಲಕ್ಕೂ ಹೋರಾಟ ಮುಂದುವರೆಸುತ್ತೇವೆ. ಕಾಂಗ್ರೆಸ್‌ನವರು ಕೈ ಕಟ್ಟಿ ಕೂರುವವರಲ್ಲ ಎಂಬುದನ್ನು ತೋರಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ ವಿರುದ್ಧದ ಪ್ರಕರಣ ರದ್ದುಪಡಿಸಿದ ಹಿನ್ನೆಲೆಯಲ್ಲಿ ಬುಧ‍ವಾರ ಸುವರ್ಣಸೌಧದ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್‌ ನಾಯಕರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಮೋದಿ ಸರ್ಕಾರ ನ್ಯಾಷನಲ್‌ ಹೆರಾಲ್ಡ್‌ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರ ವಿರುದ್ಧ ಮಾಡಿದ ದ್ವೇಷ ರಾಜಕಾರಣಕ್ಕೆ ನ್ಯಾಯಾಲಯ ತಕ್ಕ ಪಾಠ ಕಲಿಸಿದೆ ಎಂದರು.

ಕೇಂದ್ರ ಸರ್ಕಾರ ಮತ್ತು ಬಿಜೆಪಿ ದ್ವೇಷದಲ್ಲಿ ನಿರತವಾಗಿದೆ. ಕಾಂಗ್ರೆಸ್ ಮುಖಂಡರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕುತಂತ್ರದ ಕೆಲಸ ಮಾಡುತ್ತಿದೆ. ಆದರೆ ಇದರ ವಿರುದ್ಧ ಕಾಂಗ್ರೆಸ್ ಪಕ್ಷ ರಾಜ್ಯ ಮಾತ್ರವಲ್ಲ, ದೇಶದೆಲ್ಲೆಡೆ ಹೋರಾಟ ನಡೆಸಲಿದೆ. ದೇಶದ ತುಂಬಾ ಭ್ರಷ್ಟಾಚಾರ ತಾಂಡವಾಡುತ್ತಿದೆ. ಹಣದುಬ್ಬರ, ನಿರುದ್ಯೋಗ ಹೆಚ್ಚಾಗಿದ್ದು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಬೇರೆ ಬೇರೆ ವಿಚಾರಗಳನ್ನು ತೆಗೆಯುತ್ತಿದೆ. ಸುಳ್ಳು ಅಪಪ್ರಚಾರದಲ್ಲಿ ನಿರತವಾಗಿದೆ. ಇದರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಲಿದೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿ, ನ್ಯಾಷನಲ್ ಹೆರಾಲ್ಡ್ ಈ ದೇಶದ ಆಸ್ತಿ. ದ್ವೇಷ ರಾಜಕಾರಣ ಬಿಜೆಪಿ ಆಸ್ತಿ. ಸತ್ಯಕ್ಕೆ ಸಾವಿಲ್ಲ, ಸುಳ್ಳು ಕೇಸ್‌ಗಳಿಗೆ ಆಯುಷ್ಯವಿಲ್ಲ ಎಂಬುದಕ್ಕೆ ಮಂಗಳವಾರ ಬಂದ ನ್ಯಾಯಾಲಯದ ಆದೇಶವೇ ಸಾಕ್ಷಿ. ನಮ್ಮನ್ನು ಪಿತೂರಿಯಿಂದ ಸೋಲಿಸಲು ಸಾಧ್ಯವಿಲ್ಲ, ದ್ವೇಷದಿಂದ ಕುಗ್ಗಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದರು.

ದೇಶ ದಿವಾಳಿ ಮಾಡಿದ್ದಾರೆ:

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ದೇಶವನ್ನು ಸಾಲಗಾರರನ್ನಾಗಿ ಮಾಡಿದ್ದಾರೆ. ಸುಮಾರು 200 ಲಕ್ಷ ಕೋಟಿ ಸಾಲ ಮಾಡಿ ದಿವಾಳಿ ಎಬ್ಬಿಸಿದ್ದಾರೆ. 11 ವರ್ಷಗಳ ಅವಧಿಯಲ್ಲಿ 148 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದನ್ನು ಮುಚ್ಚಿಹಾಕಲು ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಎಂದರು.

ಅಲ್ಲದೆ ದೇಶದಲ್ಲಿ ಡೀಸೆಲ್‌, ಪೆಟ್ರೋಲ್ ದರ ಹೆಚ್ಚಳವಾಗಿದೆ. ಬಂಗಾರದ ಬೆಲೆ ಗಗನಕ್ಕೇರಿದೆ. ಇದನ್ನು ನಿಯಂತ್ರಣ ಮಾಡದೆ ಕೇವಲ ವಿರೋಧ ಪಕ್ಷಗಳ ನಾಯಕರ ಮೇಲೆ ಕೇಸ್ ಮೇಲೆ ಕೇಸ್ ಹಾಕುತ್ತಿದ್ದಾರೆ. ಇಡೀ ದೇಶದ ಗಮನ ಬೇರೆಡೆ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಹದಗೆಡಿಸಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ಕೋರ್ಟ್ ಸತ್ಯ ಎತ್ತಿಹಿಡಿದಿದೆ:

ನ್ಯಾಷನಲ್ ಹೆರಾಲ್ಡ್ ಪ್ರತಿಕ್ರೆ ವಿಚಾರದಲ್ಲಿ ಕೋರ್ಟ್ ಸತ್ಯ ಎತ್ತಿ ಹಿಡಿದಿದೆ. ಸುಬ್ರಮಣ್ಯ ಸ್ವಾಮಿ ದೂರಿನಂತೆ ಸಲ್ಲಿಸಿದ್ದ ಹಾಕಿದ್ದ ಚಾರ್ಜ್ ಸೀಟ್ ರದ್ದುಪಡಿಸಿದೆ. ಮಾಜಿ ಪ್ರಧಾನಿ ನೆಹರು ಅವರು ಸ್ವಾತಂತ್ರ್ಯ ಹೋರಾಟ ವೇಳೆ ದೇಶದ ಜನರಿಗೆ ಸ್ವಾತಂತ್ರ್ಯದ ಬಗ್ಗೆ ಗೊತ್ತಗಾಲಿ ಎಂಬ ಉದ್ದೇಶದಿಂದ ಪತ್ರಿಕೆ ಹೊರತಂದಿದ್ದರು. ಟ್ರಸ್ಟ್ ಮೂಲಕ ಅದು ನಡೆಯುತ್ತಿತ್ತು. ಆದರೆ ಅಂಥ ಪತ್ರಿಕೆ ಮೇಲೆ ಬಿಜೆಪಿ ದ್ವೇಷ ಸಾಧಿಸುವ ಕೆಲಸಕ್ಕೆ ಮುಂದಾಯಿತು. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮೇಲೆ ಸೇಡಿನ ರಾಜಕೀಯ ಮಾಡಲು ಹೊರಟಿತ್ತು. ಆದರೆ ಈಗ ಸತ್ಯಕ್ಕೆ ನ್ಯಾಯ ಸಿಕ್ಕಿದೆ ಎಂದು ಸಿದ್ದರಾಮಯ್ಯ ಹೇಳಿದರು.ದ್ವೇಷ ರಾಜಕಾರಣ ಬಿಜೆಪಿ ಅಸ್ತ್ರ. ಈ ಹಿನ್ನೆಲೆಯಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಮೂಲಕ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾಗಾಂಧಿ ಅವರನ್ನು ಜೈಲಿಗೆ ಕಳುಹಿಸಲು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಹುನ್ನಾರ ಮಾಡಿದ್ದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಲವರ ಮೇಲೆ ಕೇಸ್ ಮಾಡಲಾಗಿತ್ತು. ನನಗೂ, ನನ್ನ ತಮ್ಮನಿಗೂ ದೆಹಲಿ ಪೊಲೀಸರು ನೋಟಿಸ್ ನೀಡಿದ್ದರು. ಕಾಂಗ್ರೆಸ್‌ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಸೇರಿ ರಾಜ್ಯದ ಹಲವು ನಾಯಕರಿಗೆ ನೋಟಿಸ್ ನೀಡಲಾಗಿತ್ತು. ಈಗ ಸುಳ್ಳು ಪ್ರಕರಣ ಎಂದು ನ್ಯಾಯಾಲಯವೇ ಛೀಮಾರಿ ಹಾಕಿದೆ ಎಂದು ಹೇಳಿದರು

ಈ ಹಿಂದೆ ನನ್ನ ಮೇಲೆ ಸುಳ್ಳು ಕೇಸು ಮಾಡಿ ಜೈಲಿಗೆ ಕಳುಹಿಸಿದರು. ಆದರೆ ಆ ಕೇಸ್ ಏನಾಯಿತು? ಕೋರ್ಟಿನಲ್ಲಿ ನಿಲ್ಲಲಿಲ್ಲ. ಆದರೆ ಅದನ್ನು ನಾವು ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳಲಿಲ್ಲ. ದ್ವೇಷದಿಂದ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ. ಸೋನಿಯಾಗಾಂಧಿ, ರಾಜೀವ್ ಗಾಂಧಿ, ಇಂದಿರಾಗಾಂಧಿ ಈ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಅಂಥವರ ವಿರುದ್ಧ ದ್ವೇಷದ ರಾಜಕೀಯ ಮಾಡಲಾಗುತ್ತಿದೆ. ನಮ್ಮ ಮೇಲೆ ಇನ್ನೂ ಕೇಸ್ ಹಾಕುತ್ತಾರೆ ಎಂಬ ಅರಿವಿದೆ. ಆದರೆ ಇದಕ್ಕೆ ನಾವು ಎದೆಗುಂದುವುದಿಲ್ಲ. ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ತಿಳಿಸಿದರು.

ಸನದದ ಮೂಲಕವೂ ಸಂದೇಶ:

ಭಾರತೀಯ ಜನತಾಪಕ್ಷ ಅಂದರೆ ಬುರುಡೆ ಪಕ್ಷ. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಅಸತ್ಯದ ಬಗ್ಗೆ ಸದನದ ಮೂಲಕವೂ ಸಂದೇಶ ಕಳುಹಿಸುತ್ತೇವೆ. ರಾಜ್ಯವ್ಯಾಪಿ ಹೋರಾಟ ನಡೆಸುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಲಕ್ಮೀ ಹೆಬ್ಬಾಳ್ಕರ್, ಮಧು ಬಂಗಾರಪ್ಪ, ಚಲುವರಾಯಸ್ವಾಮಿ, ವಿಧಾನಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್‌, ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್‌ ಸೇರಿ 80ಕ್ಕೂ ಹೆಚ್ಚು ಮಂದಿ ಶಾಸಕರು, ಪರಿಷತ್‌ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತ ಉದ್ದಿಮೆದಾರರ ಬೇಡಿಕೆಗೆ ಸಂಘಟಿತ ಹೋರಾಟ
ಬೆಂಗ್ಳೂರಲ್ಲಿ ರಾಜ್ಯದ ಮೊದಲ ಜೆನ್‌-ಝಿ ಅಂಚೇ ಕಚೇರಿ!