ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ನಿಡಘಟ್ಟ ಗಡಿಭಾಗದಿಂದ ನಿಡಘಟ್ಟ, ಕೋಡಿಹಳ್ಳಿ ರಸ್ತೆ, ಮದ್ದೂರು ಪಟ್ಟಣದ ಕೊಲ್ಲಿ ಸರ್ಕಲ್, ಸಾರಿಗೆ ಬಸ್ ನಿಲ್ದಾಣ ಹಾಗೂ ಪ್ರವಾಸಿ ಮಂದಿರ ವೃತ್ತದ ವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ವಾಬಲೆ ಮತ್ತು ಎಂಜಿನಿಯರ್ ಅರುಣ್, ಸಿಬ್ಬಂದಿಯೊಂದಿಗೆ ಶಾಸಕರು ಪರಿವೀಕ್ಷಣೆ ಮಾಡಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಮುರಿದು ಬಿದ್ದ ಉಕ್ಕಿನ ಬೇಲಿ, ಕುಸಿದು ಬಿದ್ದ ಸೇತುವೆಗಳು, ಚರಂಡಿ ಹಾಗೂ ಸರ್ವೀಸ್ ರಸ್ತೆಯ ಅಕ್ರಮ ಒತ್ತುವರಿಯನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಿ ಇವುಗಳ ದುರಸ್ತಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.ನಿಡಘಟ್ಟ ಗ್ರಾಮದ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಹಂಗಾಮಿಯವಾಗಿ ಅಂಗಡಿ, ಮನೆಗಳು, ಹೋಟೆಲ್ ನಾಮಫಲಕ ತೆರವುಗೊಳಿಸಬೇಕು. ಮಳೆ ನೀರು ಸರಾಗವಾಗಿ ಹರಿಯುವಂತೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.
ಹೆದ್ದಾರಿ ಉದ್ಘಾಟನೆಯಾಗಿ ಮೂರು ವರ್ಷಗಳಾಗುತ್ತಿದೆ. ಆದರೆ, ಅಪೂರ್ಣಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳು ನಿರ್ಲಕ್ಷ್ಯತನ ತೋರುತ್ತಿದ್ದಾರೆ. ಈಗಾಗಲೇ ಕಾಮಗಾರಿ ಸಂಬಂಧ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಯೋಜನಾ ಪ್ರಾಧಿಕಾರದ ಅಧಿಕಾರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿತ್ತು ಎಂದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಡಿಬಿಎಲ್ ಕಂಪನಿಗೆ ನೀಡಲಾಗಿತ್ತು. ಈಗ ಆ ಕಾಮಗಾರಿಗಳನ್ನು ಮಾಡಲು ಅವರ ಅವಧಿ ಮುಗಿದಿದೆ. ಹೀಗಾಗಿ ಸ್ಥಳೀಯ ಗುತ್ತಿಗೆದಾರರ ಮೂಲಕ ಕಾಮಗಾರಿ ನಡೆಸಲು ಸಚಿವರ ಸಭೆಯಲ್ಲಿ ತೀರ್ಮಾನಿಸಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿಗಳಿಗೆ ಅನುದಾನ ನೀಡಲಿದ್ದಾರೆ. ಎರಡು ಮೂರು ತಿಂಗಳಲ್ಲಿ ಕಾಮಗಾರಿಗಳನ್ನು ಮುಗಿಸಲು ಸೂಚನೆ ನೀಡಲಾಗಿದೆ ಎಂದರು.
ಈ ವೇಳೆ ತಾಪಂ ಮಾಜಿ ಸದಸ್ಯ ಚಲುವರಾಜು, ಮುಖಂಡರಾದ ಸತೀಶ್, ವಿಜಯ್ ಕುಮಾರ್, ಲೋಕೇಶ್, ಮಹೇಶ್, ಯತೀಶ್, ಪುಟ್ಟಪ್ಪ, ರಾಜು, ಅಪ್ಪೇಗೌಡ, ಬೊಮ್ಮಯ್ಯ, ಸತೀಶ್, ಶ್ರೀನಿವಾಸ್ ಮತ್ತಿತರರು ಇದ್ದರು.ಕೇಂದ್ರ ಸಚಿವರಿಗೆ ಕಾಳಜಿ ಇಲ್ಲ
ರಾಷ್ಟ್ರೀಯ ಹೆದ್ದಾರಿಯ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಾಳಜಿ ಇಲ್ಲ ಎಂದು ಶಾಸಕ ಕೆ.ಎಂ.ಉದಯ್ ಕಿಡಿಕಾರಿದರು.
ನಾಲ್ಕು ತಿಂಗಳಿಗೊಮ್ಮೆ ನಡೆಯುವ ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ಕೊಟ್ಟರೆ ಸಾಲದು. ರಸ್ತೆ ಗುಂಡಿ ಬಿದ್ದು ಚರಂಡಿ ಕಾಮಗಾರಿ, ಸರ್ವಿಸ್ ರಸ್ತೆಗಳಿಂದ ಜನರಿಗೆ ತೊಂದರೆಯಾಗಿರುವ ಬಗ್ಗೆ ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು. ಅದು ಬಿಟ್ಟು ಕಾಟಾಚಾರದ ಸಭೆ ನಡೆಸಿ ಸೂಚನೆ ಕೊಟ್ಟು ಹೋದರೆ ಪ್ರಯೋಜನವಾಗಲ್ಲ. ನಾವು ನಮ್ಮ ಕ್ಷೇತ್ರದ ವ್ಯಾಪ್ತಿ ಆಗಿರುವ ಲೋಪದೋಷಗಳನ್ನು ರಾಜ್ಯ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಕೇಂದ್ರ ಸಚಿವರನ್ನು ಕುಟುಕಿದರು.