ಕೀರ್ತನಕನ್ನಡಪ್ರಭ ವಾರ್ತೆ ಕುಶಾಲನಗರ
ಹಾಕಿಯ ತವರೂರಾದ ಕೊಡಗು ಜಿಲ್ಲೆಯಲ್ಲಿ ಜ.3ರಿಂದ 67ನೇ ರಾಷ್ಟ್ರಮಟ್ಟದ 17 ವರ್ಷದೊಳಗಿನ ಬಾಲಕಿಯರ ಹಾಕಿ ಪಂದ್ಯಾವಳಿ ನಡೆಯಲಿದ್ದು, ಸಕಲ ಸಿದ್ಧತೆಗಳು ನಡೆದಿವೆ.ಒಂದು ವಾರ ಕ್ರೀಡಾಕೂಟ ನಡೆಯುತ್ತಿದ್ದು, ಈ ಪ್ರತಿಷ್ಠಿತ ಪಂದ್ಯಾವಳಿಗೆ ಅಂದಾಜು 750ಕ್ಕೂ ಅಧಿಕ ಕ್ರೀಡಾಪಟುಗಳು ಆಗಮಿಸಿದ್ದಾರೆ. ಅಂದಾಜು 40ರಿಂದ 50 ಬಾಲಕಿಯರ ಹಾಕಿ ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು, 27 ತಂಡಗಳು ಈಗಾಗಲೇ ನೋಂದಣಿ ಮಾಡಿಕೊಂಡಿದೆ.ಕೂಡಿಗೆಯ ಸರ್ಕಾರಿ ಕ್ರೀಡಾಶಾಲೆ, ಮಡಿಕೇರಿಯ ಸಾಯ್ ಟರ್ಫ್ ಮೈದಾನ, ಸೋಮವಾರಪೇಟೆ ಕ್ರೀಡಾಂಗಣ ಮತ್ತು ಪೊನ್ನಂಪೇಟೆ ಟರ್ಫ್ ಕ್ರೀಡಾಂಗಣದಲ್ಲಿ ಪಂದ್ಯಾಟಗಳು ನಡೆಯಲಿವೆ. ಕೂಡಿಗೆಯ ಸರ್ಕಾರಿ ಕ್ರೀಡಾ ಶಾಲೆ ಮೈದಾನದಲ್ಲಿ ಜ.3ರಂದು ಮಧ್ಯಾಹ್ನ 3 ಗಂಟೆಗೆ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಉದ್ಘಾಟಿಸುವರು. ಜ.8ರಂದು ಸಮಾರೋಪ ಸಮಾರಂಭ ಪೊನ್ನಂಪೇಟೆ ಹಾಕಿ ಟರ್ಫ್ ಮೈದಾನದಲ್ಲಿ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ನಡೆಯಲಿದೆ.ಸ್ಕೂಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾ ಆಶ್ರಯದಲ್ಲಿ ರಾಷ್ಟ್ರಮಟ್ಟದ ಪಂದ್ಯಾಟ ಆಯೋಜಿಸಲ್ಪಟ್ಟಿದ್ದು, ದಕ್ಷಿಣ ಭಾರತದಲ್ಲಿ ಇದೇ ಪ್ರಥಮ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಪಂದ್ಯಾವಳಿ ನಡೆಯುತ್ತಿದೆ.ಕೊಡಗು ಜಿಲ್ಲೆಯ ಬಾಲಕಿಯರ ತಂಡ ಈ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದೆ. ಅಂದಾಜು 20 ರಿಂದ 25 ರಾಜ್ಯಗಳ ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಈ ಹಾಕಿ ಪಂದ್ಯಾವಳಿಯ ಸಂಬಂಧ ಎಲ್ಲ ರೀತಿಯ ಪೂರ್ವ ಸಿದ್ಧತೆಗಳು ನಡೆದಿವೆ. ಕ್ರೀಡಾಪಟುಗಳು ಸೇರಿದಂತೆ ಸಂಯೋಜಕರು, ಸ್ವಯಂಸೇವಕರು, ಒಂದು ವಾರದ ಕಾಲ ಉಳಿದುಕೊಂಡು ಅವರಿಗೆ ಅಗತ್ಯ ಸೌಲಭ್ಯ, ವಸತಿ ಊಟೋಪಚಾರ ನೀಡಲು ಎಲ್ಲ ಸಿದ್ಧತೆಗಳು ನಡೆದಿದೆ.। ಎಂ.ಚಂದ್ರಕಾಂತ್, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ-----------------
ಜಿಲ್ಲೆಗೆ ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿ ಆಯೋಜನೆ ಮಾಡಲು ಅವಕಾಶ ದೊರೆತಿರುವುದು ಜಿಲ್ಲೆಯ ಹಾಕಿ ಕ್ರೀಡಾಭಿಮಾನಿಗಳಿಗೆ ಹೆಮ್ಮೆಯ ವಿಷಯ.। ವೆಂಕಟ್ ರಾಜ, ಜಿಲ್ಲಾಧಿಕಾರಿ