ಇಂದಿನಿಂದ ರಾಷ್ಟ್ರೀಯ ಲೋಕ್‌ ಅದಾಲತ್: ನ್ಯಾ.ವೇಲಾ

KannadaprabhaNewsNetwork |  
Published : Sep 13, 2025, 02:04 AM IST
ಕ್ಯಾಪ್ಷನ10ಕೆಡಿವಿಜಿ43 ದಾವಣಗೆರೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಿರುವ ಕುರಿತು ನ್ಯಾಯಾದೀಶರಾದ ಡಿ.ಕೆ.ವೇಲಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. | Kannada Prabha

ಸಾರಾಂಶ

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ನಿರ್ದೇಶನ ಅನ್ವಯ ಸೆ.13ರಂದು ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್‌ ಅದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಕೆ.ವೇಲಾ ಹೇಳಿದ್ದಾರೆ.

- ಶೀಘ್ರ ನ್ಯಾಯದಾನ ಉದ್ದೇಶ । ರಾಜಿಯಾಗಬಲ್ಲ 9916 ಪ್ರಕರಣಗಳ ಇತ್ಯರ್ಥಕ್ಕೆ ಗುರಿ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ನಿರ್ದೇಶನ ಅನ್ವಯ ಸೆ.13ರಂದು ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್‌ ಅದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಕೆ.ವೇಲಾ ಹೇಳಿದರು.

ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ರಾಷ್ಟ್ರೀಯ ಲೋಕ್‌ ಅದಾಲತ್ ಆಯೋಜನೆ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಎಲ್ಲ 25 ನ್ಯಾಯಾಲಯಗಳಿಂದ ಒಟ್ಟು 42701 ಪ್ರಕರಣಗಳು ಬಾಕಿ ಇರುತ್ತವೆ. ಇದರಲ್ಲಿ ರಾಜಿಯಾಗಬಲ್ಲ ಪ್ರಕರಣಗಳನ್ನು ಇತ್ಯರ್ಥ ಮಾಡಲು ಸೆ.13ರಂದು ನಡೆಯುವ ಲೋಕ್‌ ಅದಾಲತ್‌ನಲ್ಲಿ 9916 ಪ್ರಕರಣ ಇತ್ಯರ್ಥ ಗುರಿ ಹೊಂದಲಾಗಿದೆ. ಈಗಾಗಲೇ 2863 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಮಾಡಿದ್ದು ಅಂತಿಮ ತೀರ್ಪಿನ ವರದಿ ಮಾಡಬೇಕಾಗಿದೆ ಎಂದರು.

ಲೋಕ್‌ ಅದಾಲತ್‌ಗೆ ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣ, ಬ್ಯಾಂಕ್ ಪ್ರಕರಣ, ಹಣ ವಸೂಲಾತಿ, ಸಿಬ್ಬಂದಿಗಳ ವೇತನ, ಕಾರ್ಮಿಕರ ವಿವಾದ, ವಿದ್ಯುತ್ ಬಿಲ್, ನೀರಿನ ಶುಲ್ಕ, ವೈವಾಹಿಕ ವಿವಾದ, ಭೂ ಸ್ವಾಧೀನ, ಕಂದಾಯ ಪ್ರಕರಣ, ಪಾಲು ವಿಭಾಗ, ಸಂಚಾರಿ ನಿಯಮಗಳ ಉಲ್ಲಂಘನೆ, ಜನನ ಮತ್ತು ಮರಣ ಸೇರಿದಂತೆ ರಾಜಿಯಾಗಬಲ್ಲ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುತ್ತದೆ ಎಂದರು.

ಲೋಕ್‌ ಅದಾಲತ್‌ನಲ್ಲಿ ಭಾಗವಹಿಸಿ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಆಸಕ್ತಿ ಇರುವ ಕಕ್ಷಿದಾರರು ಇದರಲ್ಲಿ ಭಾಗವಹಿಸಲು ಮುಕ್ತ ಅವಕಾಶ ಇದೆ. ಲೋಕ್‌ ಅದಾಲತ್ ಯಶಸ್ಸಿಗೆ ವಕೀಲರ ಸಂಘ, ವಕೀಲರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಕಂದಾಯ ಇಲಾಖೆ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳನ್ನು 90 ದಿನಗಳಲ್ಲಿ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ನಿರ್ದೇಶನದಂತೆ ಪೌತಿ ಖಾತೆ ಆಂದೋಲನ ಪ್ರಾರಂಭಿಸಲಾಗಿದೆ. 92 ಸಾವಿರ ಪಹಣಿಗಳು ಮೃತ ಖಾತೆದಾರರ ಹೆಸರಿನಲ್ಲಿದ್ದು, ಕಾನೂನು ಪ್ರಕಾರ ಬದುಕಿರುವ ವಾರಸುದಾರರ ಹೆಸರಿಗೆ ಜಂಟಿ ಖಾತೆ ಮಾಡಲಾಗುತ್ತದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಟಿ.ಆರ್. ಗುರುಬಸವರಾಜ್ ಮಾತನಾಡಿ, ಲೋಕ್‌ ಅದಾಲತ್‌ ಯಶಸ್ಸುಗೊಳಿಸಲು ಎಲ್ಲ ವಕೀಲರು ಸಹ ಸಲಹೆ- ಸಹಕಾರ ನೀಡಿದ್ದಾರೆ ಎಂದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರಣ್ಣವರ, ವಕೀಲರ ಸಂಘದ ಉಪಾಧ್ಯಕ್ಷರಾದ ಕೆ.ಜಿ.ಆರ್. ಸ್ವಾಮಿ, ಕಾರ್ಯದರ್ಶಿ ಎಸ್.ಮಂಜು, ಸಹ ಕಾರ್ಯದರ್ಶಿ ರೇವಣಸಿದ್ದಪ್ಪ ಕೆ.ಎಸ್.ಶಾಗಲೆ, ಖಜಾಂಚಿ ಜಿ.ಇ.ವನಜಾಕ್ಷಿ ಉಪಸ್ಥಿತರಿದ್ದರು.

- - -

(ಕೋಟ್‌) ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸುಮಾರು 15 ಸಾವಿರ ಪ್ರಕರಣಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದೆ. ಶೇ.50ರಷ್ಟು ದಂಡ ಪಾವತಿಯೊಂದಿಗೆ ಸೆ.12 ರೊಳಗೆ ಇತ್ಯರ್ಥಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸದುಪಯೋಗ ಮಾಡಿಕೊಳ್ಳಬೇಕು.

- ಉಮಾ ಪ್ರಶಾಂತ್‌, ಜಿಲ್ಲಾ ಎಸ್ಪಿ.

- - -

-10ಕೆಡಿವಿಜಿ43:

ದಾವಣಗೆರೆಯಲ್ಲಿ ರಾಷ್ಟ್ರೀಯ ಲೋಕ್‌ ಅದಾಲತ್ ಆಯೋಜಿಸಿರುವ ಕುರಿತು ನ್ಯಾಯಾಧೀಶರಾದ ಡಿ.ಕೆ.ವೇಲಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ