ಕನ್ನಡಪ್ರಭ ವಾರ್ತೆ ಮೈಸೂರುವರ್ಗಾವಣೆ ಮಾಡಬಹುದಾದ ಹಕ್ಕುಗಳಲ್ಲಿ (ಟಿ.ಡಿ.ಆರ್) ಭೂಸ್ವಾಧೀನಕ್ಕೆ ಹಣ ವ್ಯಯಿಸದೇ ಜಾಗ ವಶಕ್ಕೆ ಪಡೆದು ಅಭಿವೃದ್ಧಿಪಡಿಸಲು ಅವಕಾಶವಿದೆ. ಇಲ್ಲಿ ಜಮೀನು ಕಳೆದುಕೊಂಡವರಿಗೆ ಸರ್ಕಾರದಿಂದ ಕೆಲವು ಹಕ್ಕು ಸಿಗಲಿದೆ ಎಂದು ರಾಜ್ಯ ನಗರ ಮತ್ತು ಗ್ರಾಮೀಣ ಯೋಜನಾ ವಿಭಾಗದ ಹೆಚ್ಚುವರಿ ನಿರ್ದೇಶಕ ಎಂ.ಸಿ. ಶಶಿಕುಮಾರ್ ಅಭಿಪ್ರಾಯಪಟ್ಟರು.ನಗರದಲ್ಲಿ ಶನಿವಾರ ರಾಷ್ಟ್ರೀಯ ರಿಯಲ್ ಎಸ್ಟೇಟ್ ಡೆವಲಪ್ಮೆಂಟ್ ಕೌನ್ಸಿಲ್ ವತಿಯಿಂದ ಶನಿವಾರ ಆಯೋಜಿಸಿದ್ದ ಟಿಡಿಆರ್ ಮತ್ತು ಬಫರ್ ವಲಯ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ನಗರಗಳ ಸಮಗ್ರ ಅಭಿವೃದ್ದಿಗೆ ವರ್ಗಾವಣೆ ಮಾಡಬಹುದಾದ ಹಕ್ಕುಗಳು ಪರಿಹಾರವಾಗಿದೆ. ಮೈಸೂರು ನಗರ ಸೇರಿದಂತೆ ಎಲ್ಲಾ ನಗರ, ಪಟ್ಟಣ ಪ್ರದೇಶಗಳ ಅಭಿವೃದ್ದಿಗೆ ಪೂರಕವಾಗಿ ಈ ಟಿಡಿಆರ್ ಸಿದ್ಧಪಡಿಸಲಾಗಿದೆ. ಈ ಯೋಜನೆ ಭೂ ಸಂತ್ರಸ್ತರಿಗೆ ಹಣಕಾಸಿನ ಪರಿಹಾರ ನೀಡುವ ಬದಲಿಗೆ ಅಭಿವೃದ್ಧಿಯ ಹಕ್ಕು ನೀಡುತ್ತದೆ ಎಂದರು.ರಸ್ತೆ ವಿಸ್ತರಣೆ, ಹೊಸ ಬಡಾವಣೆಗಳ ನಿರ್ಮಾಣ, ಯೋಜನೆಗಳಿಗೆ ಭೂಮಿ ಪಡೆಯುವುದು ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಇದರಿಂದ ಅನಕೂಲವಾಗಲಿದೆ. ಟಿಡಿಆರ್ ನೊಂದಿಗೆ ಲ್ಯಾಂಡ್ ಪೂಲಿಂಗ್ ಯೋಜನೆ ಕೂಡ ಈಚೆಗೆ ಹೆಚ್ಚು ಜನಪ್ರಿಯ ಆಗುತ್ತಿದೆ. ಇಲ್ಲಿ ರೈತರ ಸಹಭಾಗಿತ್ವದಲ್ಲಿ ಜಮೀನು ಪಡೆದು ಅವರಿಗೆ ಇಂತಿಷ್ಟು ನಿವೇಶನ ನೀಡಲಾಗುತ್ತಿದೆ. ಸಾಕಷ್ಟು ಅಭಿವೃದ್ದಿ ಪ್ರಾಧಿಕಾರಗಳು ಇದನ್ನು ಅನುಷ್ಠಾನಗೊಳಿಸಿವೆ ಎಂದು ಹೇಳಿದರು.ನಗರ ಯೋಜನೆಗಳು ಯಾವುದೇ ಒಂದು ನಗರದ ವೈಜ್ಞಾನಿಯ ಅಭಿವೃದ್ಧಿಗೆ ಸಹಕಾರಿ. ಈ ನಿಟ್ಟಿನಲ್ಲಿ ಪ್ರತಿಯೊಂದು ನಗರ ಮತ್ತು ಪಟ್ಟಣಗಳ ಅಭಿವೃದ್ದಿಗೆ ಮಹಾ ಯೋಜನೆ ಅಗತ್ಯವಿದೆ. ಮೈಸೂರು ನಗರದಲ್ಲಿ ಸಿಐಟಿಬಿ ಮೂಲಕ ನಗರ ಮಹಾ ಯೋಜನೆಯು ಅನುಷ್ಠಾನಕ್ಕೆ ಬಂದಿತು. ಇದರಿಂದ ಮೈಸೂರು ನಗರವು ವ್ಯವಸ್ಥಿತವಾಗಿ ಅಭಿವೃದ್ಧಿ ಆಗುತ್ತಿದೆ, ಮಹಾಯೋಜನೆ ಅಂಗವಾಗಿ 100 ಪ್ರಮುಖ ರಸ್ತೆಗಳ ವಿಸ್ತರಣೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.ಹೊಸ ಬಡಾವಣೆಗಳನ್ನು ನಿರ್ಮಿಸಿ ನೂರಾರು ನಿವೇಶನಗಳನ್ನು ಹಂಚಿಕೆ ಮಾಡಿ ಮೈಸೂರು ನಗರವನ್ನು ಅಬಿವೃದ್ದಿ ಮಾಡುವುದಕ್ಕಿಂತ ವರ್ಟಿಕಲ್ ಮಾದರಿಯಲ್ಲಿ ಮೈಸೂರು ನಗರವನ್ನು ಅಭಿವೃದ್ಧಿ ಪಡಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ನೆರೆಡ್ಕೋ ಮೈಸೂರು ಅಧ್ಯಕ್ಷ ಡಾ.ರಾಘವೇಂದ್ರ ಪ್ರಸಾದ್, ಉಪಾಧ್ಯಕ್ಷ ಎ.ಪಿ.ನಾಗೇಶ್, ವಿ.ಸಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಗನ್ ದೀಪ್, ಖಜಾಂಚಿ ಡಾ.ಎಸ್.ಎಚ್. ಜಗದೀಶ್, ಜಂಟಿ ಕಾರ್ಯದರ್ಶಿ ಪಿ. ನಂಜುಂಡ ಸ್ವಾಮಿ ಇದ್ದರು.---ಬಾಕ್ಸ್ ಸುದ್ದಿಮೈಸೂರು ಟಿಡಿಆರ್ ಗೆ ನಿರ್ಣಯಬೆಂಗಳೂರು ಮತ್ತು ಮಂಗಳೂರಿನಲ್ಲಿ ಟಿಡಿಆರ್ ಅನ್ನು ಜಾರಿಗೊಳಿಸಿರುವಂತೆ ಮೈಸೂರು ನಗರದಲ್ಲಿಯೂ ಕೂಡ ಟಿಡಿಆರ್ ಜಾರಿಗೊಳಿಸಲು ಕ್ರಮವಹಿಸಬೇಕು ಎಂದು ನಿರ್ಣಯಕೈಗೊಂಡು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.- ಎ.ಪಿ. ನಾಗೇಶ್, ನೆರೆಡ್ಕೋ ಮೈಸೂರು ವಿಭಾಗದ ಉಪಾಧ್ಯಕ್ಷರು.