ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಯುವ ಪತ್ರಕರ್ತರು ಯಾವುದೇ ಬೆದರಿಕೆಗಳಿಗೆ ಬಗ್ಗದೆ ನಿರ್ಭೀತ ನಡೆಯಿಂದ ವೃತ್ತಿಪರತೆಯಿಂದ ಕಾರ್ಯಪ್ರವೃತ್ತರಾದಾಗ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಶಿರಾದ ವರ್ಧಮಾನ್ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ, ಶಿಕ್ಷಣ ತಜ್ಞ ಸಂಜಯ್ ಎಸ್. ಗೌಡ ಅಭಿಪ್ರಾಯಪಟ್ಟಿದ್ದಾರೆ.ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಹಯೋಗದೊಂದಿಗೆ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ (ಪದವಿ ಮತ್ತು ಸ್ನಾತಕೋತ್ತರ), ಬಿ.ವೋಕ್ ವಿಭಾಗ (ಡಿಜಿಟಲ್ ಮೀಡಿಯಾ ಆ್ಯಂಡ್ ಫಿಲ್ಮ್ ಮೇಕಿಂಗ್) ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ‘ಸಮೂಹ ಮಾಧ್ಯಮ ವೃತ್ತಿಪರತೆ ಮತ್ತು ಸದ್ಯದ ಸವಾಲುಗಳು’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ‘ಮಾಧ್ಯಮ ಪರ್ವ’ ಉತ್ಸವ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಾಧ್ಯಮಗಳು ಪ್ರಜಾಪ್ರಭುತ್ವದ ಜೀವಾಳ. ಪತ್ರಕರ್ತರು ಸಮರ್ಪಕವಾಗಿ ಕೆಲಸ ಮಾಡಿದಾಗ ಪ್ರಜಾಪ್ರಭುತ್ವ ಸದೃಢವಾಗಿ ಉಳಿಯುತ್ತದೆ ಎಂದರು.ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಕಾರ್ಯಕ್ರಮದ ಪ್ರಧಾನ ಆಶಯ ಪ್ರಸ್ತುತಪಡಿಸಿ, ನಂಬಿಕೆ, ವಿಶ್ವಾಸ ಮತ್ತು ನಿರೀಕ್ಷೆಗಳನ್ನು ಸಮಾಜದಲ್ಲಿ ಮೂಡಿಸುವುದು ಮಾಧ್ಯಮಗಳ ಕೆಲಸವಾಗಿದೆ. ಮಾಧ್ಯಮಗಳು ಸಮಾಜದ ನಂಬಿಕೆ ಉಳಿಸಿಕೊಳ್ಳಬೇಕಾದರೆ ದಮನಿತರ ಧ್ವನಿಯಾಗಬೇಕು. ಆಗ ಅವುಗಳ ಅಸ್ತಿತ್ವವೂ ಉಳಿಯುತ್ತದೆ. ಸಾಮಾಜಿಕ ಮಾಧ್ಯಮಗಳ ಕಾರಣದಿಂದ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಸವಾಲುಗಳು ಎದುರಾಗಿವೆ. ಇವುಗಳನ್ನು ಎದುರಿಸಬೇಕಾದರೆ ಮಾಧ್ಯಮದ ವಿದ್ಯಾರ್ಥಿಗಳು ಪತ್ರಿಕೋದ್ಯಮದ ಆಶಯ ಮತ್ತು ನೈತಿಕತೆಯನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದ್ಯ ಪಾಸಿಟಿವ್ ಜರ್ನಲಿಸಂ ವಿಸ್ತರಿಸುವ ಅಗತ್ಯವಿದೆ. ಸುದ್ದಿ ಕೆರಳಿಸುವಂತಿರದೆ, ಶಮನ ನೀಡುವಂತಿರಬೇಕು ಎಂದರು. ಮಾಧ್ಯಮ ಅಕಾಡೆಮಿ ಸದಸ್ಯೆ ಶೋಭಾ ಮಳವಳ್ಳಿ ಹಾಜರಿದ್ದರು.ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ವಿರಾಟ್ ಪದ್ಮನಾಭ ಅವರ ‘ಬೆಟ್ಟದ ಹೂವು’ ಪುಸ್ತಕ ಇತ್ತೀಚೆಗೆ ಬಿಡುಗಡೆಯಾದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲಾಯಿತು. ಉದ್ಘಾಟನಾ ಸಮಾರಂಭದ ಕುರಿತು ಪದವಿ ಪತ್ರಿಕೋದ್ಯಮ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ತಕ್ಷಣಕ್ಕೆ ಸಂಯೋಜಿಸಿದ ‘ಚಿಗುರು’ ಭಿತ್ತಿಪತ್ರಿಕೆಯ ವಿಶೇಷ ಸಂಚಿಕೆ ಅನಾವರಣಗೊಳಿಸಲಾಯಿತು. ವಿಚಾರ ಸಂಕಿರಣದೊಂದಿಗೆ ಆಯೋಜಿಸಿರುವ ಮಾಧ್ಯಮ ಪರ್ವ ಫೆಸ್ಟ್ ಥೀಮ್ ಸಾಂಗ್ ಬಿಡುಗಡೆ ಮಾಡಲಾಯಿತು.
ಆಯೇಶಾ ಖಾನಂ, ಸಂಜಯ್ ಎಸ್. ಗೌಡ ಮತ್ತು ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಸಹನಾ ಎಂ., ಉಜಿರೆಯ ಮಂಜುಶ್ರೀ ಪ್ರಿಂಟರ್ಸ್ ಪ್ರಬಂಧಕ ಶೇಖರ್ ಮತ್ತು ಉದ್ಯಮಿ ಶ್ರೀನಿವಾಸ ಗಲಗಲಿ ಅವರನ್ನು ಸನ್ಮಾನಿಸಲಾಯಿತು.ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಪ್ರಸ್ತಾವಿಸಿ, ಸ್ವಾಗತಿಸಿದರು. ವಿದ್ಯಾರ್ಥಿಗಳಾದ ನೈದಿಲೆ ಮತ್ತು ಸಿಂಚನ ನಿರೂಪಿಸಿದರು. ಸಹನಾ ವಂದಿಸಿದರು.