ವಸಂತಕುಮಾರ್ ಕತಗಾಲ
ಕಾರವಾರ: ದೇಶ, ವಿದೇಶಗಳಲ್ಲಿ ಸಂಸ್ಕೃತದ ರಾಯಭಾರಿಯಂತೆ ಕರ್ತವ್ಯ ನಿರ್ವಹಿಸಿದ ಕುಮಟಾದ ಪ್ರತಿಭೆ ಪ್ರೊ.ಗಣೇಶ ತಿಮ್ಮಣ್ಣ ಪಂಡಿತ ಅವರಿಗೆ ಈಚೆಗೆ ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿದರು.ಬೋಧನೆ, ಸಂಶೋಧನೆ ಮತ್ತು ಪ್ರಕಾಶನ ಕ್ಷೇತ್ರಗಳಲ್ಲಿ ನೀಡಿದ ಅವರ ಅದ್ವಿತೀಯ ಕೊಡುಗೆಯ ಹಿನ್ನೆಲೆಯಲ್ಲಿ 2025ರ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ನೀಡಲಾಗಿದೆ. ಪ್ರಸ್ತುತ ಅವರು ಕಳೆದ ಎರಡೂವರೆ ವರ್ಷಗಳಿಂದ ದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಕೇಂದ್ರ ಕಚೇರಿಯಲ್ಲಿ ಸಂಯುಕ್ತ ನಿರ್ದೇಶಕರಾಗಿ (ಪ್ರಕಾಶನ ವಿಭಾಗ) ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರೊ.ಗಣೇಶ್ ತಿಮ್ಮಣ್ಣ ಪಂಡಿತ 1980ರ ಫೆಬ್ರುವರಿ 17ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ವಾಲಗಳ್ಳಿ ಗ್ರಾಮದಲ್ಲಿ ಜನಿಸಿದ್ದು, ತಿಮ್ಮಣ್ಣ ಸುಬ್ರಾಯ ಪಂಡಿತ ಹಾಗೂ ಮೋಹಿನಿ ಪಂಡಿತ ದಂಪತಿಯ ಪುತ್ರರಾಗಿದ್ದಾರೆ.ಕುಮಟಾದ ಉಂಚಗಿ ಹಾಗೂ ಊರಕೇರಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಕುಮಟಾದ ಗಿಬ್ ಬಾಯ್ಸ್ ಹೈಸ್ಕೂಲ್ ನಲ್ಲಿ ಅಭ್ಯಾಸ ಮಾಡಿದರು. ಸಂಸ್ಕೃತ ಭಾಷೆಯ ಮೇಲಿನ ಆಸಕ್ತಿಯನ್ನು ಗಮನಿಸಿ ಸಂಸ್ಕೃತ ಗುರು ಎಂ.ಆರ್. ಉಪಾಧ್ಯಾಯ ಅವರನ್ನು ಪ್ರೇರೇಪಿಸಿದರು. ನಂತರ ಗೋಕರ್ಣದಲ್ಲಿರುವ ಮೇಧಾದಕ್ಷಿಣಾಮೂರ್ತಿ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಅಲಂಕಾರಶಾಸ್ತ್ರ ವಿಷಯದಲ್ಲಿ ವಿದ್ವನ್ಮಧ್ಯಮ ಮತ್ತು ವಿದ್ವದುತ್ತಮ ಪದವಿಗಳನ್ನು ಪಡೆದರು. ಶಾಸ್ತ್ರಗುರು ಹಾಗೂ ಪ್ರಾಚಾರ್ಯ ಗುಂಡ್ಮಿ ಗಣಪಯ್ಯ ಹೊಳ್ಳ ಮಾರ್ಗದರ್ಶನದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಅನೇಕ ಶಾಸ್ತ್ರೀಯ ಸ್ಪರ್ಧೆಗಳಲ್ಲಿ ವಿಜೇತರಾದರು.ನಂತರ ತಿರುಪತಿಯಲ್ಲಿ ಇರುವ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ಕ್ರಮವಾಗಿ ಬಿಇಡಿ, ಎಂಇಡಿ ಹಾಗೂ ಪಿಎಚ್ ಡಿ ಪದವಿಗಳನ್ನು ಪಡೆದರು. ಪ್ರೊ.ಮುರಳೀಧರ ಶರ್ಮಾ ಅವರ ಸಂಶೋಧನಾ ಮಾರ್ಗದರ್ಶಕರಾಗಿದ್ದರು. ಪ್ರೊ. ರಾಮಾನುಜ ದೇವನಾಥನ್ ಇವರಿಗೆ ಪ್ರಮುಖ ಪ್ರೇರಣೆಯಾಗಿದ್ದರು.
2005ರಿಂದ 2009ರವರೆಗೆ ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಬಿಇಡಿ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 2009ರಿಂದ 2022ರವರೆಗೆ ಅದೇ ವಿಭಾಗದಲ್ಲಿ ಸ್ಥಾಯಿ ಪ್ರಾಧ್ಯಾಪಕರಾಗಿ ಬೋಧನೆ ಮುಂದುವರಿಸಿದರು. 2022ರಲ್ಲಿ ಜೈಪುರ್ ದಲ್ಲಿ ನ್ಯಾಕ್ ಸಂಬಂಧಿತ ಸೆಲ್ಫ್ ಸ್ಟಡಿ ರಿಪೋರ್ಟ್ ಅನ್ನು ಸಂಸ್ಕೃತ ಭಾಷೆಯಲ್ಲಿ ಸಿದ್ಧಪಡಿಸುವಲ್ಲಿ ವಿಶೇಷ ಕೊಡುಗೆ ನೀಡಿದರು. ಇದರ ಫಲವಾಗಿ ವಿಶ್ವವಿದ್ಯಾಲಯಕ್ಕೆ A++ ಗ್ರೇಡ್ ಲಭಿಸಿತು. ಇದು ಸಂಸ್ಕೃತ ಭಾಷೆಯಲ್ಲಿ ಶಾಸ್ತ್ರೀಯ ವಿಷಯಗಳ ಜೊತೆಗೆ ಆಧುನಿಕ ವಿಷಯಗಳನ್ನೂ ನಿರ್ವಹಿಸುವ ಅವರ ಅಪೂರ್ವ ಸಾಮರ್ಥ್ಯವನ್ನು ತೋರಿಸುತ್ತದೆ.ಈವರೆಗೆ 50ಕ್ಕೂ ಹೆಚ್ಚು ಗ್ರಂಥಗಳಿಗೆ ಕಾರ್ಯಕಾರಿ ಸಂಪಾದಕರಾಗಿದ್ದಾರೆ. ಇವರ ನೇತೃತ್ವದಲ್ಲಿ ಪ್ರಕಟವಾಗುತ್ತಿರುವ ಸಂಸ್ಕೃತ ವಿಮರ್ಶ ಸಂಶೋಧನಾ ಪತ್ರಿಕೆಯನ್ನು ಅಂತಾರಾಷ್ಟ್ರೀಯ ಓಪನ್ ಎಕ್ಸೆಸ್ ಜರ್ನಲ್ ಆಗಿ ರೂಪಾಂತರಿಸಿದ್ದಾರೆ.
ಅವರ ಸೇವೆಗಳು ಭಾರತ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. 2024ರಲ್ಲಿ ಆಸ್ಟ್ರೇಲಿಯಾದ ಸಿಡ್ನಿ, ಬ್ರಿಸ್ಬೇನ್ ಸೇರಿದಂತೆ ವಿವಿಧ ನಗರಗಳಲ್ಲಿ ನಡೆದ ಅಂತಾರಾಷ್ಟ್ರೀಯ ಸಂಸ್ಕೃತ ಸಮ್ಮೇಳನಗಳಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದಾರೆ.ಪ್ರಸ್ತುತ ಅವರು ಭಾರತೀಯ ಜ್ಞಾನ ಪರಂಪರೆ ಆಧಾರಿತ ಸ್ಟಾರ್ಟ್-ಅಪ್ ಕಾರ್ಯಕ್ರಮಗಳು ಮತ್ತು ನವೋತ್ಪನ್ನಗಳ ರೂಪುರೇಷೆಗಳನ್ನು ಸಿದ್ಧಪಡಿಸುವಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ.
ಸಂಸ್ಕೃತದಲ್ಲಿ ದಕ್ಷಿಣ ಭಾರತದಲ್ಲೆ ಮೊಟ್ಟ ಮೊದಲು ಪುರಸ್ಕಾರ ಪಡೆದಿರುವುದು ನನಗೆ ಖುಷಿ ತಂದಿದೆ. ಇಡೀ ಭಾರತದಲ್ಲಿ ಈ ಬಾರಿ ನನಗೊಬ್ಬನಿಗೆ ಪ್ರಶಸ್ತಿ ಸಂದಿದೆ ಎನ್ನುತ್ತಾರೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗಣೇಶ ತಿಮ್ಮಣ್ಣ ಪಂಡಿತ.