ಹುಬ್ಬಳ್ಳಿ:
ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಎಂಜಿನಿಯರಿಂಗ್ ಮತ್ತು ತಾಂತ್ರಿಕ ವಿದ್ಯಾರ್ಥಿಗಳು ಅನುಭವಸ್ಥ ಉದ್ಯಮಿಗಳ ಯಶೋಗಾಥೆ ಮತ್ತು ಉದ್ಯಮ ಆರಂಭ, ಯಶಸ್ಸು ಕುರಿತು ಮಾತುಗಳನ್ನು ಆಲಿಸಿ ಪ್ರೇರಣೆ ಪಡೆದರು.
ವೈಫಲ್ಯಗಳಿಂದ ಎದೆಗುಂದದೇ ಹೊಸ ಹೊಸ ಆಲೋಚನೆಗಳೊಂದಿಗೆ ಮತ್ತು ಬದಲಾವಣೆಗಳಿಗೆ ಒಗ್ಗಿಕೊಂಡು ಮುನ್ನುಗಿದರೆ ಮಾತ್ರ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಉದ್ಯಮಿಗಳು ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿದರು. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಐದು ಬಾರಿ ವಿಫಲ ಉದ್ಯಮಿಯಾಗಿ ಸೋಲನ್ನು ಕಂಡು, ₹ 3,000 ಕೋಟಿ ಆಡಿಯೋ ಸಾಮ್ರಾಜ್ಯವನ್ನು ಮುನ್ನಡೆಸುತ್ತಿರುವ ತಮ್ಮ ಪ್ರಯಾಣದ ವ್ಯಕ್ತಪಡಿಸಿದ ಬೋಟ್ ಆಡಿಯೋ ಕಂಪನಿ ಸಂಸ್ಥಾಪಕ ಮತ್ತು ಶಾರ್ಕ್ ಟ್ಯಾಂಕ್ ಇಂಡಿಯಾ ತೀರ್ಪುಗಾರ ಅಮಾನ್ ಗುಪ್ತಾ ಅವರ ಸ್ಫೂರ್ತಿದಾಯಕ ಮಾತುಗಳಿಗೆ ಡಾ. ಪ್ರಭಾಕರ ಕೊರೆ ಒಳಾಂಗಣ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ ವಿದ್ಯಾರ್ಥಿ ಸಮೂಹ ತಲೆದೂಗಿತು. ಹೊಸತನ ಅಥವಾ ಅಸಲಿತನ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಳ್ಳುವುದೇ ಬಿಟ್ಟು, ನೈಜ ಸಮಸ್ಯೆಗಳ ಪರಿಹರಿಸುವತ್ತ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು. ತಮಗೆ ದಾರಿ ಕಾಣುತ್ತಿಲ್ಲ ಎಂದು ಕಳೆದುಹೋದಂತೆ ಭಾವಿಸುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಅವರು, ನನಗೆ 30 ವರ್ಷ ದಾಟುವವರೆಗೂ ಗ್ಯಾಜೆಟ್ ಉದ್ಯಮವೇ ನನ್ನ ವೃತ್ತಿ ಎಂದು ತಿಳಿದಿರಲಿಲ್ಲ. ಆ್ಯಪಲ್ ಮತ್ತು ಸ್ಯಾಮ್‌ಸಂಗ್‌ನಂತಹ ಕಂಪನಿಗಳಿಂದ ತಿರಸ್ಕರಿಸಲ್ಪಟ್ಟ ನಂತರವಷ್ಟೇ ನಾನು ನನ್ನ ಹಾದಿ ಕಂಡುಕೊಂಡೆ ಎಂದು ನೆನಪಿಸಿಕೊಂಡರು.ಜಗತ್ತಿನಲ್ಲಿ ಹಿಂದೆಂದೂ ಕಾಣದ ಐಡಿಯಾದೊಂದಿಗೆ ಜಗತ್ತನ್ನು ಬದಲಾಯಿಸಲು ಹೋಗಿ ಬದುಕನ್ನು ಸಂಕೀರ್ಣಗೊಳಿಸಿಕೊಳ್ಳಬೇಡಿ. ಈಗಾಗಲೇ ಸಾಬೀತಾಗಿರುವ ಪರಿಕಲ್ಪನೆಯನ್ನು ತೆಗೆದುಕೊಂಡು ಅದನ್ನು ಇನ್ನು ಉತ್ತಮವಾಗಿ ಜಾರಿಗೆ ತನ್ನಿ ಎಂದು ಕಿವಿಮಾತು ಹೇಳಿದರು.ನಿವೃತ್ತ ಸೇನಾ ಅಧಿಕಾರಿ, ನಾಯಕತ್ವ ತರಬೇತಿದಾರ ಕರ್ನಲ್ ರಾಜೀವ್ ಭಾರ್ಗವ ಅವರು ಶುಕ್ರವಾರ ಬೆಳಗ್ಗೆ ಬಿವಿಬಿ ಮುಖ್ಯ ಕಟ್ಟಡದ ಎದುರು ಬಲೂನು ಹಾರಿ ಬಿಡುವ ಮೂಲಕ ಪ್ಲೀಡಿಸ್ ಉತ್ಸವಕ್ಕೆ ಚಾಲನೆ ನೀಡಿದರು.ಕುಲಪತಿ ಡಾ. ಪ್ರಕಾಶ ತೆವರಿ, ಕುಲಸಚಿವ ಡಾ. ಬಸವರಾಜ ಅನಾಮಿ, ಪ್ರೊ. ಬಿ.ಎಲ್. ದೇಸಾಯಿ, ಡಾ. ಸಂಜಯ ಕೊಟಬಾಗಿ, ಅಧ್ಯಾಪಕರು, ವಿದ್ಯಾಥಿರ್ಗಳು ಉಪಸ್ಥಿತರಿದ್ದರು.