ಗುಡಿಬಂಡೆಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

KannadaprabhaNewsNetwork | Published : Jan 26, 2025 1:33 AM

ಸಾರಾಂಶ

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಜೊತೆಗೆ ಪಟ್ಟಣದ ಮುಖ್ಯರಸ್ತೆಯಲ್ಲಿ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಮತದಾನದ ಕುರಿತು ಜಾಗೃತಿ ಜಾಥಾ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ತಮ್ಮ ಒಂದು ಮತ ಅಮೂಲ್ಯವಾದದು, ಮತದಾನದ ಬಗ್ಗೆ ನಿರ್ಲಕ್ಷ್ಯತೆ ಬೇಡ, 18 ವರ್ಷ ತುಂಬಿದ ಪ್ರತಿಯೊಬ್ಬರೂ ಚುನಾವಣೆಗಳಲ್ಲಿ ಕಡ್ಡಾಯವಾಗಿ ಮತ ಚಲಾಯಿಸಬೇಕೆಂದು ಜೆಎಂಎಫ್ಸಿ ನ್ಯಾಯಾಧೀಶ ಕೆ.ಎಂ.ಹರೀಶ್ ತಿಳಿಸಿದರು.

ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ತಾಲೂಕು ಸ್ವೀಪ್ ಸಮಿತಿ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾನ ಹಕ್ಕನ್ನು ಸಂವಿಧಾನವು ನಮಗೆಲ್ಲರಿಗೂ ನೀಡಿರುವ ಅತ್ಯಮೂಲ್ಯ ಹಕ್ಕಾಗಿದೆ. ಜೊತೆಗೆ ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿಗಾಗಿ ಅರ್ಹ ಪ್ರತಿನಿಧಿಯನ್ನು ಆರಿಸುವುದು ಕೂಡಾ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಯಾವುದೇ ಆಮಿಷಕ್ಕೆ ಒಳಗಾಗದೆ ದೇಶದ ಅಬಿವೃದ್ಧಿಗಾಗಿ ನಿಷ್ಪಕ್ಷಪಾತವಾಗಿ ಮತ ಚಲಾಯಿಸುವಂತೆ ಪ್ರೇರೇಪಿಸುವದಾಗಿದೆ. ಅಲ್ಲದೆ 18 ವರ್ಷ ತುಂಬಿದ ಎಲ್ಲಾ ವಯಸ್ಕರರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವುದು ಮತ್ತು ಅವರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವುದು ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ ಎಂದರು.

ಬಳಿಕ ತಹಸೀಲ್ದಾರ್ ಸಿಗ್ಬತ್ತುಲ್ಲಾ ಮಾತನಾಡಿ, ಮತದಾನದ ಹಕ್ಕು ಪಡೆದ ಪ್ರತಿಯೊಬ್ಬರೂ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಗತ್ಯತೆಯ ಬಗ್ಗೆ ಅರಿವು ಮೂಡಿಸಿ, ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಭಾರತದಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವದ ಮುನ್ನಾ ದಿನದಂದು ಅಂದರೆ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಬಿಇಒ ಕೃಷ್ಣಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಜೊತೆಗೆ ಪಟ್ಟಣದ ಮುಖ್ಯರಸ್ತೆಯಲ್ಲಿ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಮತದಾನದ ಕುರಿತು ಜಾಗೃತಿ ಜಾಥಾ ನಡೆಸಿದರು.

ತಾಪಂ ಇಒ ನಾಗಮಣಿ, ಪಪಂ ಮುಖ್ಯಾಧಿಕಾರಿ ಸಬಾ ಶಿರಿನ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ರಾಮನಾಥರೆಡ್ಡಿ, ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ರಾಮಮೂರ್ತಿ, ಹಂಪಸಂದ್ರ ಗ್ರಾಪಂ ಪಿಡಿಒ ನರಸಿಂಹಮೂರ್ತಿ, ಟಿಪಿಒ ಮುರಳಿ, ಸೇರಿದಂತೆ ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿ, ಪೊಲೀಸ್ ಇಲಾಖೆಯ ಸಿಬ್ಬಂದಿ, ನ್ಯಾಯಾಲಯದ ಸಿಬ್ಬಂದಿ ಸೇರಿದಂತೆ ಹಲವರು ಹಾಜರಿದ್ದರು.

Share this article