ಗೋಕರ್ಣ: ಸ್ವಭಾಷೆ ಎನ್ನುವುದು ಸಹಜ ಭಾಷೆ, ನಮ್ಮ ಸಹಜ ಜೀವನಕ್ಕೆ ಸ್ವಭಾಷೆ ಅನಿವಾರ್ಯ. ನಾವು ಸಹಜ ಭಾಷೆ ಬದಲು ಬೇರೆ ಭಾಷೆ ಬಳಸುತ್ತಿದ್ದೇವೆ ಎಂದರೆ ನಮ್ಮ ಜೀವನ ಸಹಜವಾಗಿಲ್ಲ ಎಂಬ ಅರ್ಥ ಎಂದು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ನಮ್ಮ ಭಾಷೆಯ ಪದ ಮರೆತು ಬೇರೆ ಭಾಷೆಯ ಪದಗಳನ್ನು ನಮ್ಮ ಸಹಜ ಭಾಷೆಯಲ್ಲಿ ಕಲಬೆರಕೆ ಮಾಡಿಕೊಂಡಿದ್ದೇವೆ ಎಂದರೆ ನಮ್ಮ ಜೀವನ ಸಹಜವಾಗಿಲ್ಲ ಎಂಬ ಅರ್ಥ ಎಂದು ವಿಶ್ಲೇಷಿಸಿದರು.
ದಿನಕ್ಕೊಂದು ಇಂಗ್ಲಿಷ್ ಪದ ತ್ಯಾಗದ ಅಭಿಯಾದಲ್ಲಿ ಚಾರ್ಜ್-ಚಾರ್ಜರ್ ಎಂಬ ಪದ ಬಿಡುವಂತೆ ಸಲಹೆ ಮಾಡಿದರು. ನಮ್ಮ ನಮ್ಮ ಚರವಾಣಿಗಳಿಗೆ ಚಾರ್ಜ್ ಮಾಡುವುದು ಎಂಬ ಶಬ್ದ ಬಳಸುತ್ತೇವೆ. ಚಾರ್ಜ್ ಎಂಬ ಪದಕ್ಕೆ ಕನ್ನಡ ಪದ ಇದೆ ಎನ್ನುವುದೇ ಹೆಚ್ಚಿನವರಿಗೆ ತಿಳಿದಿಲ್ಲ ಎಂದು ಹೇಳಿದರು.ಚಾರ್ಜ್ ಎಂಬ ಪದಕ್ಕೆ ಇಂಗ್ಲಿಷ್‍ನಲ್ಲಿ ವಿದ್ಯುತ್ ತುಂಬುವುದು ಎಂಬ ಅರ್ಥ ನಿಘಂಟುಗಳಲ್ಲಿ ಕೂಡಾ ಮೊದಲಿಗೆ ಇಲ್ಲ. ಹಣ ವಿಧಿಸುವುದು, ಶುಲ್ಕ, ಆರೋಪ ಹೊರಿಸುವುದು, ಅಧಿಕಾರ, ಆಜ್ಞೆ ಮಾಡುವುದು, ಮೇಲೇರಿ ಬರುವುದು ಎಂಬ ಅರ್ಥಗಳಿವೆ. ಕೊನೆಗೆ ವಿದ್ಯುತ್ ಭರ್ತಿ ಮಾಡುವುದು ಎಂಬ ಅರ್ಥ ನೀಡಲಾಗಿದೆ. ಅಂದರೆ ಅವರಲ್ಲಿ ಕೂಡಾ ಬೇರೆ ಅರ್ಥದ ಪದ ವಿದ್ಯುತ್ ಪೂರಣಕ್ಕೆ ಬಳಸಲಾಯಿತು ಎನ್ನುವುದು ತಿಳಿಯುತ್ತದೆ ಎಂದು ವಿವರಿಸಿದರು.
ನಾಡವ, ಸಿದ್ದಿ ಮತ್ತು ಬೋವಿ ಸಮಾಜದವರಿಂದ ಸುವರ್ಣ ಪಾದುಕಾಪೂಜೆ ನೆರವೇರಿತು. ಮೂರೂ ಸಮಾಜಗಳಿಂದ ದೊಡ್ಡ ಸಂಂಖ್ಯೆಯಲ್ಲಿ ಆಗಮಿಸಿದ ಸಮಾಜ ಬಾಂಧವರು ಸಾಂಪ್ರದಾಯಿಕ ಗುರುಪೀಠಕ್ಕೆ ವಾರ್ಷಿಕ ಸೇವೆ ಸಮರ್ಪಿಸಿದರು. ಸಮಾಜದ ಪ್ರತಿ ಮನೆಗಳಿಗೆ ವಿತರಿಸಲು ಸಮಾಜದ ಮುಖಂಡರು ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.
ನಾಡವ ಸಮಾಜದ ಮುಖಂಡರಾದ ಬೀರಣ್ಣ ಮಾಸ್ತರ್, ನಿತ್ಯಾನಂದ ನಾಯಕ ಅಚವೆ, ನಾರಾಯಣ ನಾಯಕ, ಬೋವಿ ಸಮಾಜದ ಮುಖಂಡ ಅನಂತ ಬೈಂದೂರು, ರಾಮದಾಸ ಸಿರ್ಸಿಕರ, ಸಿದ್ದಿ ಸಮಾಜದ ಮುಖಂಡ ನಾರಾಯಣ ಸಿದ್ದಿ, ಶಿವಾನಂದ ಸಿದ್ದಿ, ರಾಮು ಸಿದ್ದಿ, ಕೃಷ್ಣ ಸಿದ್ದಿ, ಸರ್ವ ಸಮಾಜ ಸಂಯೋಜಕ ಕೆ.ಎನ್. ಹೆಗಡೆ, ವಿ.ಡಿ. ಭಟ್ಟ ಮತ್ತಿತರರು ಉಪಸ್ಥಿತರಿದ್ದರು.ಸಂಕಷ್ಟಿ ಚತುರ್ಥಿಯ ದಿನವಾದ ಮಂಗಳವಾರ ಗೋಕರ್ಣದ ಗಣಪತಿ ದೇವಾಲಯದಲ್ಲಿ ಶ್ರೀಮಠದಿಂದ ಮೋದಕ ಕಣಜ ಸೇವೆ ನೆರವೇರಿಸಲಾಯಿತು.