ಸಹಜ ಬಾಲ್ಯ, ಪರಿಪೂರ್ಣ ಜೀವನಕ್ಕೆ ಶಿಕ್ಷಣ ಅಡಿಪಾಯ: ಪ್ರೊ.ಎನ್.ಕೆ. ಲೋಕನಾಥ್

KannadaprabhaNewsNetwork |  
Published : Jul 03, 2025, 11:49 PM IST
3 | Kannada Prabha

ಸಾರಾಂಶ

ಜಾಗತಿಕ ಪೈಪೋಟಿಯಲ್ಲಿ ತೊಡಗಿಕೊಳ್ಳಲು, ಭವಿಷ್ಯದಲ್ಲಿ ಮಕ್ಕಳು ಪ್ರತಿಭಾ ಸಾಮರ್ಥ್ಯ ಹೊಂದುವಂತಾಗಲು, ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಹಾಗೂ ಮೌಲ್ಯಯುತ ಶಿಕ್ಷಣ ಒದಗಿಸಲು ಅತ್ಯುತ್ತಮ ಸವಲತ್ತು ಸೌಲಭ್ಯಗಳು ಅತ್ಯಾವಶ್ಯಕವಾಗಿದ್ದು, ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಸಾಕಷ್ಟು ಸವಾಲುಗಳು ಇವೆ.

ಕನ್ನಡಪ್ರಭ ವಾರ್ತೆ ಮೈಸೂರು

ಜಾಗತಿಕ ಪೈಪೋಟಿಯಲ್ಲಿ ತೊಡಗಿಕೊಳ್ಳಲು, ಭವಿಷ್ಯದಲ್ಲಿ ಮಕ್ಕಳು ಪ್ರತಿಭಾ ಸಾಮರ್ಥ್ಯ ಹೊಂದುವಂತಾಗಲು, ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಹಾಗೂ ಮೌಲ್ಯಯುತ ಶಿಕ್ಷಣ ಒದಗಿಸಲು ಅತ್ಯುತ್ತಮ ಸವಲತ್ತು ಸೌಲಭ್ಯಗಳು ಅತ್ಯಾವಶ್ಯಕವಾಗಿದ್ದು, ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಸಾಕಷ್ಟು ಸವಾಲುಗಳು ಇವೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್ ಹೇಳಿದರು.

ಕನಕದಾಸನಗರ (ದಟ್ಟಗಳ್ಳಿ) ನೈಪುಣ್ಯ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ಕ್ಯಾಂಪಸ್‌ ನಲ್ಲಿ ನಿರ್ಮಿಸಿರುವ ನೂತನ ಈಜುಕೊಳವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ದಶಕಗಳಿಗೆ ಹೋಲಿಸಿದರೆ ಇಂದು ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಮಕ್ಕಳಿಗೆ ಶಿಕ್ಷಣ ಕಲಿಕೆಯ ಜೊತೆಗೆ ಬಾಲ್ಯದ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಸವಲತ್ತು, ಸೌಲಭ್ಯಗಳನ್ನು ಒದಗಿಸುವುದು ಅತ್ಯಾವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಆ ಜವಾಬ್ದಾರಿ ಹೊರಬೇಕಾದ ಅನಿವಾರ್ಯತೆ ಇದೆ ಎಂದರು.

ಅಕ್ಷರ ಕಲಿಕೆಯ ಜತೆ ಜತೆಗೇ ಮಕ್ಕಳ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಗುರುತಿಸಿ, ಅವರಲ್ಲಿರುವ ಕ್ರೀಡೆ ಹಾಗೂ ಸಾಂಸ್ಕೃತಿಕ ಪ್ರತಿಭೆ ಅನಾವರಣಗೊಳ್ಳುವಂತಾಗಲು ಪೂರಕ ವ್ಯವಸ್ಥೆ ಕಲ್ಪಿಸಬೇಕಿದೆ. ಹಿಂದಿನ ದಿನಗಳಲ್ಲಿ ಮನೆಯೇ ಒಂದು ರೀತಿಯ ಪಾಠಶಾಲೆಯಾಗಿತ್ತು. ನೆರೆ- ಹೊರೆ ಸಂಬಂಧಗಳು ಬಾಲ್ಯದ ಚಟುವಟಿಕೆಗಳಿಗೆ ಪ್ರೇರಣೆಯಾಗಿತ್ತು, ಕೆರೆ-ಕಟ್ಟೆಗಳಲ್ಲಿ ಈಜುವ ಅವಕಾಶಗಳು ದೊರೆಯುತ್ತಿತ್ತು ಎಂದು ತಿಳಿಸಿದರು.

ಆದರೆ, ಇಂದು ಗ್ರಾಮೀಣ ಪ್ರದೇಶದಲ್ಲಿಯೂ ಅಂತಹ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಳ್ಳಲು ಅವಕಾಶಗಳು ಕ್ಷೀಣಿಸುತ್ತಿವೆ. ಪಟ್ಟಣ ಪ್ರದೇಶಗಳಲ್ಲಂತೂ ಕಾಂಕ್ರೀಟ್ ಕಾಡು ವಿಸ್ತಾರಗೊಳ್ಳುತ್ತಿರುವ ಪರಿಯಿಂದಾಗಿ ಮಕ್ಕಳ ದೈಹಿಕ ಚಟುವಟಿಕೆಗಳಿಗೆ ಅವಕಾಶಗಳು ಮರೀಚಿಕೆಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳೇ ಮಕ್ಕಳಿಗೆ ಸಹಜ ಬಾಲ್ಯ ಒದಗಿಸುವ ಜವಾಬ್ದಾರಿ ಹೊತ್ತುಕೊಂಡರೆ ಅದು ಮಕ್ಕಳಿಗೆ ಕೊಡಬಹುದಾದ ಪರಿಪೂರ್ಣ ಶಿಕ್ಷಣದ ಅಡಿಪಾಯವಾಗುತ್ತದೆ ಎಂದು ಹೇಳಿದರು.

ನೈಪುಣ್ಯ ಶಾಲೆಯಲ್ಲಿ ಉತ್ತಮ ಈಜುಕೊಳ ನಿರ್ಮಿಸಿ ಮಕ್ಕಳಿಗೆ ಈಜು ಕಲಿಕೆಗೆ ಅವಕಾಶ ಕಲ್ಪಿಸಿ, ಅವರು ಕ್ರೀಡಾ ಸಾಧಕರಾಗಲು ಪ್ರೇರೇಪಿಸುವ ಸಂಕಲ್ಪ ತೊಟ್ಟಿರುವುದು ಶ್ಲಾಘನಿಯವಾಗಿದೆ. ಇಂದಿನ ಮಕ್ಕಳು ಪರಿಸರ ಕಾಳಜಿ ಹಾಗೂ ಆರೋಗ್ಯ ಕಾಳಜಿ ಹೊಂದಲು ಸೈಕಲ್ ಹಾಗೂ ಈಜು ಅಭ್ಯಾಸವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪೋಷಕರು ವಿಶೇಷ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಆರ್‌. ರಘು ಮಾತನಾಡಿ, ನೈಪುಣ್ಯ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ಕ್ಯಾಂಪಸ್ ಆವರಣದಲ್ಲಿ 3 ರಿಂದ 17 ವರ್ಷದವರೆಗಿನ ಮಕ್ಕಳು ಈಜು ಕಲಿಕೆ ಹಾಗೂ ಅಭ್ಯಾಸದಲ್ಲಿ ತೊಡಗಿಕೊಳ್ಳಲು ಎರಡು ಬಗೆಯ ಸುಸಜ್ಜಿತ ಈಜುಕೊಳಗಳನ್ನು ನಿರ್ಮಿಸಲಾಗಿದ್ದು, ಶಾಲೆ ಮುಗಿದ ನಂತರ ಹೊರಗಿನ ಮಕ್ಕಳಿಗೂ ಈಜು ಕಲಿಕೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು.

ಸಂಸ್ಥೆಯ ಕಾರ್ಯದರ್ಶಿ ಆರ್‌. ಕೌಟಿಲ್ಯ, ಪ್ರಾಂಶುಪಾಲ ಎಂ.ಎನ್‌. ಮಹೇಂದ್ರ, ಉಪ ಪ್ರಾಂಶುಪಾಲೆ ಶೀನಾ ಕೆ. ಗುರ್ನಾನಿ, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಈಜುಪಟುಗಳು ಇದ್ದರು.

PREV