ಆತ್ಮಭೂಷಣ್
ಸಮುದ್ರ ತೀರವನ್ನು ಒಳಗೊಂಡಂತೆ ಪಶ್ಚಿಮ ಘಟ್ಟದಿಂದ ಆವೃತ್ತವಾದ ಪ್ರದೇಶ ದ.ಕ. ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರಾಕೃತಿಕ ಅವಘಡಗಳು ತುಸು ಜಾಸ್ತಿಯೇ ಸಂಭವಿಸುತ್ತಿವೆ. ಮಳೆಗಾಲದಲ್ಲಿ ಮಳೆಹಾನಿ ಸ್ವಾಭಾವಿಕವಾದರೆ, ಪದೇ ಪದೇ ಗುಡ್ಡ ಕುಸಿತದಂತಹ ವಿದ್ಯಮಾನಗಳು ಹೆಚ್ಚಾಗಿಯೇ ಕಾಣಿಸುತ್ತಿವೆ. ಕಳೆದ ಮಳೆಗಾಲದಲ್ಲಿ ದ.ಕ.ಜಿಲ್ಲೆಯಲ್ಲಿ ಅಲ್ಲಲ್ಲಿ ನೆರೆ ಮತ್ತು ಭೂಕುಸಿತ ಪ್ರಕರಣಗಳು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಪ್ರಾಕೃತಿಕ ವಿಕೋಪ ಸಂಭವಿಸಬಹುದಾದ ಪ್ರದೇಶಗಳನ್ನು ಗುರುತಿಸಿದೆ. ಈ ಪ್ರದೇಶಗಳಲ್ಲಿ ಸಂಭಾವ್ಯ ಪ್ರಾಕೃತಿಕ ತೊಂದರೆ ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿದ್ಧತೆ ಆರಂಭಿಸಿದೆ. 171 ಸ್ಥಳಗಳಲ್ಲಿ ಪ್ರಕೃತಿ ವಿಕೋಪ ಸವಾಲು:
ಕಂದಾಯ ಇಲಾಖೆಯ ಅಂಕಿಅಂಶಗಳು ದ.ಕ.ಜಿಲ್ಲೆಯ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಒಂಭತ್ತು ತಾಲೂಕುಗಳಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಬಹುದಾದ ಒಟ್ಟು 171 ಪ್ರದೇಶಗಳ ಪಟ್ಟಿ ಮಾಡಿದೆ. ಇವುಗಳಲ್ಲಿ ನೆರೆ ಮತ್ತು ಭೂಕುಸಿತ 74 ಕಡೆಗಳಲ್ಲಿ ಇದೆ. ಮಂಗಳೂರು ಪಾಲಿಕೆ ವ್ಯಾಪ್ತಿಯ 18 ಸೇರಿ ಒಟ್ಟು 59 ನೆರೆಪೀಡಿತ ಪ್ರದೇಶಗಳು ಇವೆ. ಕೇವಲ ಭೂಕುಸಿತ 28 ಕಡೆಗಳಲ್ಲಿ ಕಂಡುಬಂದಿದೆ.ನೆರೆ ಮತ್ತು ಭೂಕುಸಿತ ಬಂಟ್ವಾಳದ 3 ಕಡೆ, ಮಂಗಳೂರಿನ 4, ಸುಳ್ಯ, ಕಡಬ ಮತ್ತು ಪುತ್ತೂರಿನ ತಲಾ 2 ಕಡೆ, ಬೆಳ್ತಂಗಡಿಯ 18 ಸ್ಥಳಗಳನ್ನು ಗುರುತಿಸಲಾಗಿದೆ. ಭೂಕುಸಿತ ಪ್ರದೇಶಗಳು ಬಂಟ್ವಾಳ, ಸುಳ್ಯ ಹಾಗೂ ಬೆಳ್ತಂಗಡಿಗಳಲ್ಲಿ ತಲಾ 4, ಕಡಬ ಮತ್ತು ಪುತ್ತೂರಿನಲ್ಲಿ ತಲಾ 2, ಉಳ್ಳಾಲದಲ್ಲಿ 5 ಹಾಗೂ ಮೂಡುಬಿದಿರೆಯಲ್ಲಿ 6 ಸ್ಥಳಗಳನ್ನು ಪತ್ತೆ ಮಾಡಲಾಗಿದೆ.
ತಡೆಗೋಡೆ ರಚನೆಗೆ ಶಿಫಾರಸು:
ಜಿಲ್ಲಾಡಳಿತಕ್ಕೆ ದೊಡ್ಡ ಸವಾಲು
ಜಿಲ್ಲಾಡಳಿತದ ಪ್ರಾಕೃತಿಕ ವಿಕೋಪ ಖಾತೆಯಲ್ಲಿ 7 ಕೋಟಿ ರು. ಹಣ ಇದೆ. ಆದರೆ ಅದನ್ನು ಹೇಗೆ ಬಳಕೆ ಮಾಡಬೇಕು ಎಂದು ಸರ್ಕಾರ ಮಾರ್ಗದರ್ಶನ ಮಾಡಿಲ್ಲ. ಇದರಿಂದಾಗಿ ಜಿಲ್ಲಾಡಳಿತ ಕೂಡ ಮುಂಜಾಗ್ರತಾ ಕ್ರಮದ ವರದಿ ತನ್ನಲ್ಲಿ ಇದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ 10-15 ವರ್ಷಗಳಿಂದ ಮಳೆ ನೀರು ಹರಿವಿಗೆ ತಡೆ ಒಡ್ಡಿರುವುದು, ಬೆಟ್ಟಗುಡ್ಡಗಳ ನಾಶವೇ ಪ್ರಾಕೃತಿಕ ಏರುಪೇರಿಗೆ ಕಾರಣ. ಮಳೆಗಾಲದಲ್ಲಿ ಭೂಕುಸಿತಕ್ಕೆ ನೀರು ಸರಾಗ ಹರಿದು ಹೋಗದಿರುವುದೇ ಕಾರಣವಾಗಿದೆ. ಇಳಿಜಾರಿನಲ್ಲಿ ತಡೆಗೋಡೆ ಬದಲು ಕನಿಷ್ಠ ಜಲ್ಲಿಕಲ್ಲು ಅಥವಾ ಹುಲ್ಲಿನ ಪದರ ಹಾಕಿ ಮುಚ್ಚಿದರೆ, ಮಳೆ ನೀರನ್ನು ಹೀರಿಕೊಂಡು ಕುಸಿತಕ್ಕೆ ತಡೆಯಾಗುತ್ತದೆ. ಇಂತಹ ವಿಧಾನ ಅನುಸರಿಸಲು ಜಿಲ್ಲಾಡಳಿತ ಮುಂದಾಗಬೇಕು.
-ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ, ದ.ಕ.