ಕನ್ನಡಪ್ರಭ ವಾರ್ತೆ ಮಂಗಳೂರು
ಗುಡ್ಡ ಕುಸಿತದ ಭೀತಿಯಲ್ಲಿರುವ ಮಂಗಳೂರು ಹೊರವಲಯದ ಕೆತ್ತಿಕಲ್ ಪ್ರದೇಶ ಸೇರಿದಂತೆ ಪ್ರಾಕೃತಿಕ ಅವಘಡ ಸಂಭವಿಸಿದ ಸ್ಥಳಗಳಿಗೆ ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾನುವಾರ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಸಂಭಾವ್ಯ ಪ್ರಾಕೃತಿಕ ದುರಂತ ತಡೆಗೆ ಕಂದಾಯ, ಮಹಾನಗರ ಪಾಲಿಕೆ, ಕುಡ್ಸೆಂಪ್ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಜೊತೆ ಸಭೆ ನಡೆಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸದಸ್ಯರಾದ ಹೇಮಲತಾ, ಸಂಗೀತಾ ನಾಯಕ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ತಹಸೀಲ್ದಾರ್ ಪ್ರಶಾಂತ್, ಹೆದ್ದಾರಿ, ಕುಡ್ಸೆಂಪ್ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಸಂಸದರು ಸ್ಥಳ ಪರಿಶೀಲನೆ ನಡೆಸಿದರು.
ಗುಡ್ಡ ಕುಸಿತದ ಭೀತಿ ಎದುರಿಸುತ್ತಿರುವ ಕೆತ್ತಿಕಲ್ ಪ್ರದೇಶ ಖಾಸಗಿ ಹಾಗೂ ಸರ್ಕಾರಿ ಜಾಗವನ್ನು ಹೊಂದಿದೆ. ಇಲ್ಲೇ ಕುಡ್ಸೆಂಪ್‌ನ ವೆಟ್‌ವೆಲ್ ಕೂಡ ಇದೆ. ಹೆದ್ದಾರಿ ಹಾಗೂ ಜನವಸತಿ ಪ್ರದೇಶವಾಗಿರುವುದರಿಂದ ಇಲ್ಲಿ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಈಗಾಗಲೇ 10-12 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದರು.ತಂತ್ರಜ್ಞರ ಸಲಹೆ ಪಡೆಯಲು ಸೂಚನೆ:
ಸಂಭಾವ್ಯ ಭೂಕುಸಿತ ಸೇರಿದಂತೆ ತಡೆಗಟ್ಟುವಿಕೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುರತ್ಕಲ್ ಎನ್‌ಐಟಿಕೆ ಹಾಗೂ ಎನ್‌ಎಚ್‌ಎಐ ತಂತ್ರಜ್ಞರ ಸಲಹೆ ಸೂಚನೆ ಪಡೆಯಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಸೋಮವಾರವೇ ನಾಲ್ಕು ಇಲಾಖೆಗಳ ಜೊತೆ ಸಮನ್ವಯ ಸಭೆ ನಡೆಸಿ ಮುಂಜಾಗ್ರತಾ ಕ್ರಮದ ಬಗ್ಗೆ ತ್ವರಿತ ತೀರ್ಮಾನ ಕೈಗೊಳ್ಳಬೇಕು ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಸೂಚಿಸಿದರು.ತಕ್ಷಣ ಪರಿಹಾರ ಬಿಡುಗಡೆಗೆ ಸಂಸದ ಆಗ್ರಹ
ಮಂಗಳೂರಿನ ಗುರುಪುರ ಸೇರಿದಂತೆ ದ.ಕ.ಜಿಲ್ಲೆಯಾದ್ಯಂತ ವಿಪರೀತ ಪ್ರಮಾಣದಲ್ಲಿ ಪ್ರಾಕೃತಿಕ ದುರಂತ ಸಂಭವಿಸಿದೆ. ಇದರಲ್ಲಿ ಅಪಾರ ಹಾನಿಯಾಗಿದ್ದು, ಹಾನಿ ಬಗ್ಗೆ ಜಿಲ್ಲಾಡಳಿತ ಅಧ್ಯಯನ ನಡೆಸಿ ಸರ್ಕಾರಕ್ಕೆ ಕೂಡಲೇ ವರದಿ ಸಲ್ಲಿಸಬೇಕು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ದೊಡ್ಡ ಮೊತ್ತದ ಪರಿಹಾರ ಮೊತ್ತ ಬಿಡುಗಡೆಗೆ ಸೂಚನೆ ನೀಡಬೇಕು ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಆಗ್ರಹಿಸಿದರು.ಸುದ್ದಿಗಾರರಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವರು ಕಾಟಾಚಾರಕ್ಕೆ ಜಿಲ್ಲೆಗೆ ಬಂದು ಪ್ರಾಕೃತಿಕ ದುರಂತ ಸ್ಥಳಗಳನ್ನು ವೀಕ್ಷಿಸಿದರೆ ಏನೂ ಪ್ರಯೋಜನವಿಲ್ಲ. ತಕ್ಷಣವೇ ಪರಿಹಾರ ಮೊತ್ತ ಬಿಡುಗಡೆಗೆ ಸೂಚನೆ ನೀಡಬೇಕು. ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ನಿಧಿ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಬೇಕು. ಅದು ಬಿಟ್ಟು ಎನ್‌ಡಿಆರ್‌ಎಫ್ ಅನುದಾನ ನೀಡಿಲ್ಲ ಎಂದು ಆರೋಪಿಸುವುದಲ್ಲಿ ಅರ್ಥವಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಾಕೃತಿಕ ದುರಂತ ಸಂಭವಿಸಿದಾಗ ಕೇಂದ್ರದ ಎನ್‌ಡಿಆರ್‌ಎಫ್ ನಿಧಿಗೆ ಕಾಯದೆ ರಾಜ್ಯದಿಂದಲೇ ನೇರವಾಗಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ರಾಜ್ಯ ಸರ್ಕಾರ ಪ್ರಾಕೃತಿಕ ದುರಂತ ಸ್ಥಳಗಳಿಗೆ ಕೂಡಲೇ ಪರಿಹಾರ ಮೊತ್ತ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.