ಹಾವೇರಿ: ಬೆಳೆಗೆ ಯಾವುದೇ ಹುಳು ಬಂದರೂ ಅದನ್ನು ತಿನ್ನುವ ಮತ್ತೊಂದು ಹುಳುವನ್ನು ದೇವರು ಸೃಷ್ಟಿಸಿದ್ದಾನೆ. ಎಲ್ಲದಕ್ಕೂ ನಿಸರ್ಗದಲ್ಲಿಯೇ ಪರಿಹಾರವಿದೆ. ಅದನ್ನು ನಾವು ಪತ್ತೆ ಮಾಡಿಕೊಂಡು ಕೃಷಿ ಮಾಡಬೇಕು. ವಿಷಮುಕ್ತ ಆಹಾರವಾಗಿ ನಮ್ಮ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರಬೇಕು. ಆವಾಗಲೇ ರೈತರ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ನೈಸರ್ಗಿಕ ಕೃಷಿ ತಜ್ಞ, ಪದ್ಮಶ್ರೀ ಡಾ. ಸುಭಾಷ್ ಪಾಳೇಕರ್ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.ನಮ್ಮ ದೇಶದಲ್ಲಿ 6 ಲಕ್ಷ ಹಳ್ಳಿಗಳಿವೆ. ಹಳ್ಳಿಯ ರೈತರು ಬೀಜ, ಕೃಷಿ ಯಂತ್ರ ಹಾಗೂ ಇತರೆ ಉತ್ಪನ್ನಗಳನ್ನು ಖರೀದಿಸುತ್ತಿರುವುದರಿಂದ ವರ್ಷಕ್ಕೆ 32 ಲಕ್ಷ ಕೋಟಿ ಬೇರೆ ದೇಶಕ್ಕೆ ಹೋಗುತ್ತಿದೆ. ಗ್ರಾಮದಲ್ಲಿರುವ ರೈತರೇ, ತಮ್ಮ ಹಣವನ್ನು ತಮ್ಮಲ್ಲಿಯೇ ಉಳಿಸಿಕೊಂಡರೆ ಗ್ರಾಮದಿಂದ ಹೊರಗೆ ಹೋಗುವ ಹಣ ಬಂದ್ ಆಗುತ್ತದೆ ಎಂದರು.ಎಲ್ಲಿದೆ ಆತ್ಮನಿರ್ಭರ..?: ಹಿಂದೆ ಅಮೆರಿಕದಲ್ಲಿ ಹಂದಿಗಳು ತಿನ್ನದ ಕೆಟ್ಟ ಗೋಧಿಯನ್ನು ಭಾರತಕ್ಕೆ ಕಳುಹಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಕೃಷಿಯಲ್ಲಿ ಸ್ವಾವಲಂಬಿ ಸಾಧಿಸುವ ಉದ್ದೇಶದಿಂದ ಹಸಿರು ಕ್ರಾಂತಿ ಜಾರಿಗೊಳಿಸಲಾಯಿತು. ಅದಾಗಿ 50 ವರ್ಷವಾಗಿದೆ. ಎಣ್ಣೆ ಪದಾರ್ಥ, ಗೋಧಿ, ಬೇಳೆ ಕಾಳು, ಮಸಾಲೆ, ಔಷಧಿ ಕಚ್ಚಾ ವಸ್ತು ಹಾಗೂ ಇತರೆ ಕೃಷಿ ಉತ್ಪನ್ನಗಳನ್ನು ಇಂದಿಗೂ ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಹಾಗಾದರೆ ಎಲ್ಲಿದೆ ಆತ್ಮನಿರ್ಭರ ಎಂದು ಪ್ರಶ್ನಿಸಿದ ಅವರು, ಹಸಿರು ಕ್ರಾಂತಿಗೆ ಪರ್ಯಾಯ ವ್ಯವಸ್ಥೆ ಬೇಕಾಗಿದೆ ಎಂದರು.ಹಸಿರು ಕ್ರಾಂತಿಗೂ ಮುನ್ನ ಬಿಳಿ ಅಕ್ಕಿ, ಗೋಧಿ ಎಂಬುದನ್ನೆ ನಾವು ನೋಡಿರಲಿಲ್ಲ. ಈಗ ಅದನ್ನೇ ಜನರು ಹೆಚ್ಚಾಗಿ ತಿನ್ನುತ್ತಿದ್ದಾರೆ. ಸಿರಿಧಾನ್ಯ, ಜೋಳ, ಗಾಣದ ಎಣ್ಣೆ, ಅಗಸೆ, ಕುಸುಬೆ ಎಣ್ಣೆ ತಿನ್ನುವುದನ್ನೇ ಬಿಟ್ಟಿದ್ದಾರೆ. ತೊಗರಿ ಸೇರಿ ಎಲ್ಲ ಬೇಳೆ ಕಾಳುಗಳನ್ನೂ ತಿನ್ನುತ್ತಿಲ್ಲ. ಹೀಗಾಗಿಯೇ ಕ್ಯಾನ್ಸರ್, ಮಧುಮೇಹ, ಹೃದಯ ಕಾಯಿಲೆ ಎಲ್ಲವೂ ಬರುತ್ತಿದೆ. ದೇಶದ ಜನರ ಆರೋಗ್ಯ ಹದಗೆಡಿಸುವ ವ್ಯವಸ್ಥಿತ ಷಡ್ಯಂತ್ರವಿದು ಎಂದು ಎಚ್ಚರಿಕೆ ನೀಡಿದರು.ಬಡವರೇ ಹೆಚ್ಚು: ಜಿಡಿಪಿಯಲ್ಲಿ ಜಗತ್ತಿನಲ್ಲಿಯೇ ನಾಲ್ಕನೇ ಸ್ಥಾನದಲ್ಲಿರವ ಭಾರತದಲ್ಲಿ 80 ಕೋಟಿ ಬಿಪಿಎಲ್ ಜನರಿದ್ದಾರೆ. ಜೊತೆಗೆ, 25 ಕೋಟಿ ರೈತರು ಬಡತನಕ್ಕಿಂತ ಕೆಳಗಿದ್ದಾರೆ. ವೈಯಕ್ತಿಕ ಆದಾಯದಲ್ಲಿ ಭಾರತ, ಬಾಂಗ್ಲಾದೇಶಕ್ಕಿಂತಲೂ ಕೆಳಗಿನ ಸ್ಥಾನದಲ್ಲಿರುವುದು ದುರಂತದ ಸಂಗತಿ. ಭಾರತದಲ್ಲಿ ಬಂಡವಾಳ ಶಾಹಿಗಳ ಬಳಿಯೇ ಹೆಚ್ಚು ಹಣವಿದೆ. ಶ್ರೀಮಂತ ದೇಶವೆಂದು ಬಿಂಬಿಸಿದರೂ, ಭಾರತದಲ್ಲಿ ಬಡವರೇ ಹೆಚ್ಚಿದ್ದಾರೆ. ಮೆಕ್ಕೆಜೋಳ ಹಾಗೂ ಇತರೆ ಬೆಳೆಗಳಿಗೆ ಬೆಲೆ ನಿಗದಿ ಮಾಡುವಂತೆ ರೈತ ಸಂಘಗಳು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿವೆ. ಆದರೆ, ಸರ್ಕಾರ ಮಾತ್ರ ಬೆಲೆ ನಿಗದಿ ಮಾಡುತ್ತಿಲ್ಲ. ಏಕೆಂದರೆ, ಬೆಲೆ ನಿಗದಿ ಮಾಡುವ ಅಧಿಕಾರ ಯಾವುದೇ ಸರ್ಕಾರಗಳಿಗಿಲ್ಲ ಎಂದರು.ಪುಕ್ಕಟೆ ಕೊಟ್ರೆ ಯಾರು ಕೆಲಸಕ್ಕೆ ಬರ್ತಾರೆ: ಜನರಿಗೆ ಎಲ್ಲವನ್ನೂಸರ್ಕಾರವೇ ಉಚಿತವಾಗಿ ಕೊಟ್ಟರೆ ಜನ ಏಕೆ ಕೆಲಸಕ್ಕೆ ಬರುತ್ತಾರೆ? ರೈತ ಫಸಲು ಕಟಾವು ಮಾಡಿ ಮಾರಾಟ ಮಾಡುವ ಹೊತ್ತಿಗೆ ರಫ್ತು ನಿಲ್ಲಿಸುತ್ತಾರೆ. ರೈತರ ಕೆಲಸಕ್ಕೆ ಕೂಲಿಗಳು ಸಿಗುತ್ತಿಲ್ಲ, ಯುವಕರು ಕೃಷಿಗೆ ಬರುತ್ತಿಲ್ಲ, ರೈತರನ್ನು ಹಣೆಯಲು ದೊಡ್ಡ ಷಡ್ಯಂತ್ರವೇ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಅತಿಯಾದ ರಸಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ. ಒಂದೇ ತಳಿ ಬೆಳೆ ಬೆಳೆಯುವುದರಿಂದ ಜೀವಸತ್ವ ಕಡಿಮೆಯಾಗಿದೆ. ರೈತರು ಸಾವಯವ ಕೃಷಿ ಜತೆಗೆ ನೈಸರ್ಗಿಕ ಕೃಷಿ ಮಾಡಬೇಕು ಎಂದರು.ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಪಂ ಸಿಇಒ ರುಚಿ ಬಿಂದಲ್, ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೆರ, ರಾಜ್ಯ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಮಹಿಮಾ ಪಟೇಲ್, ಜಂಟಿ ಕೃಷಿ ನಿರ್ದೇಶಕ ಕೆ. ಮಲ್ಲಿಕಾರ್ಜುನ, ತೇಜಸ್ವಿ ಪಟೇಲ್, ಕೊಟ್ರೇಶಪ್ಪ ಬಸೆಗಣ್ಣಿ, ಸಂಜೀವಕುಮಾರ ನೀರಲಗಿ, ಶಿವಬಸಪ್ಪ ಗೋವಿ, ಎಚ್.ಎಚ್. ಮುಲ್ಲಾ, ಶಿವಯೋಗಿ ಹೊಸಗೌಡ್ರ, ಮರಿಗೌಡ ಪಾಟೀಲ, ರಾಜು ತರ್ಲಘಟ್ಟ, ಚೆನ್ನಪ್ಪ ಮರಡೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.