ಸುಸ್ಥಿರ ಇಳುವರಿ, ಆರೋಗ್ಯಕರ ಪರಿಸರಕ್ಕೆ ನೈಸರ್ಗಿಕ ಕೃಷಿ ಅವಶ್ಯ

KannadaprabhaNewsNetwork |  
Published : Dec 25, 2025, 01:45 AM IST
ಚಿತ್ರ 2 | Kannada Prabha

ಸಾರಾಂಶ

ತಾಲೂಕಿನ ಬಬ್ಬೂರು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಭರಮಸಾಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕೃಷಿಯಲ್ಲಿ ಜೈವಿಕ ಗೊಬ್ಬರ, ಜೈವಿಕ ಪೀಡೆನಾಶಕಗಳ ಬಳಕೆ ಮತ್ತು ಅಡಕೆ ಸಿಪ್ಪೆ ಕಾಂಪೋಸ್ಟಿಂಗ್ ಕುರಿತ ಹೊರಾಂಗಣ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಕಾಂಪೋಷ್ಟ್ ಕಲ್ಚರ್ ಬಳಸಿ ಅಡಕೆ ಸಿಪ್ಪೆಯನ್ನು ಮೌಲ್ಯಯುತ ಸಾವಯವ ಗೊಬ್ಬರವಾಗಿಸಿ

ಮುಂದಿನ ಪೀಳಿಗೆಗೆ ಪರಿಶುದ್ಧ ನೀರು, ಪರಿಸರ ಮತ್ತು ಸಜೀವ ಮಣ್ಣು ಉಳಿಸುವುದು ನಮ್ಮೆಲ್ಲರ ಜವಬ್ದಾರಿ. ಸುಸ್ಥಿರ ಇಳುವರಿ ಮತ್ತು ಆರೋಗ್ಯಕರ ಪರಿಸರಕ್ಕೆ ಸಾವಯವ ಮತ್ತು ನೈಸರ್ಗಿಕ ಕೃಷಿಗೆ ರೈತರು ಆದ್ಯತೆ ನೀಡಬೇಕು ಎಂದು ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ.ಆರ್ ಹೇಳಿದರು.

ಭರಮ ಸಾಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಅಂಗವಾಗಿ ಬಬ್ಬೂರು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕೃಷಿಯಲ್ಲಿ ಜೈವಿಕ ಗೊಬ್ಬರ, ಜೈವಿಕ ಪೀಡೆನಾಶಕಗಳ ಬಳಕೆ ಮತ್ತು ಅಡಕೆ ಸಿಪ್ಪೆ ಕಾಂಪೋಸ್ಟಿಂಗ್ ಕುರಿತ ಹೊರಾಂಗಣ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಐದನೇ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರ ಜನ್ಮದಿನದ ಸವಿನೆನಪಿಗಾಗಿ ಪ್ರತಿವರ್ಷ ಡಿ.23ರಂದು ಭಾರತದಲ್ಲಿ ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ರೈತರ ಶ್ರೇಯೋಭಿವೃದ್ಧಿಗಾಗಿ ಹಲವು ಕಾರ್ಯಕ್ರಮ ಮತ್ತು ಯೋಜನೆಗಳನ್ನು ಜಾರಿಗೆ ತಂದರು. ರೈತರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಿಷ್ಠರಾಗದ ಹೊರತು ದೇಶದ ಒಟ್ಟಾರೆ ಅಭಿವೃದ್ಧಿ ಅಸಾಧ್ಯ ಎಂದು ನಂಬಿದ್ದ ಚರಣ್ ಸಿಂಗ್ ರವರು ರೈತರ ಸಬಲೀಕರಣಕ್ಕಾಗಿ ಹಲವು ಕಾನೂನು, ಕೃಷಿ ಸುಧಾರಣೆಗಳು, ನೀತಿಗಳನ್ನು ರೂಪಿಸಿದ್ದರು. ಜಿಲ್ಲೆಯಲ್ಲಿ ಅಡಕೆ ಬೆಳೆಯು ಪ್ರಮುಖ ತೋಟಗಾರಿಕಾ ವಾಣಿಜ್ಯ ಬೆಳೆಯಾಗಿದ್ದು ಕಳೆದ 10 ವರ್ಷಗಳಲ್ಲಿ ಇದರ ವಿಸ್ತೀರ್ಣ ದುಪ್ಪಟ್ಟಾಗಿದೆ. ಆದರೆ ಅಡಕೆ ಸಿಪ್ಪೆಯು ಕೊಳೆಯಲು 2-3 ವರ್ಷಗಳು ಬೇಕಾಗಿರುವುದರಿಂದ ರೈತರು ಇದರ ವಿಲೇವಾರಿಗೆ ಇದನ್ನು ಸುಡುವುದು, ರಸ್ತೆ ಬದಿ ಹಾಕುವುದು ಮತ್ತು ಕೆರೆಗಳಿಗೆ ಸುರಿಯುತ್ತಿರುವುದರಿಂದ ನೀರು ಮತ್ತು ಪರಿಸರ ಮಾಲಿನ್ಯವಾಗುತ್ತಿದೆ. ಆದ ಪ್ರಯುಕ್ತ ಇದನ್ನೇ ನಾವು ಸೂಕ್ಷ್ಮಜೀವಾಣುಗಳಿರುವ ಕಾಂಪೋಷ್ಟ್ ಕಲ್ಚರ್ ಬಳಸಿ ಮೌಲ್ಯಯುತ ಸಾವಯವ ಗೊಬ್ಬರವಾಗಿ ಪರಿವರ್ತಿಸಬಹುದಾಗಿದೆ. ಸಜೀವ ಸೂಕ್ಷ್ಮಜೀವಿಗಳು ಮಣ್ಣಿನಲ್ಲಿ ಪೋಷಕಾಂಶಗಳನ್ನು ಸಸ್ಯಗಳಿಗೆ ಲಭ್ಯವಾಗುವಂತೆ ಮಾಡುತ್ತವೆ. ಮಣ್ಣಿನ ಜೀವಶಕ್ತಿ ಹೆಚ್ಚಿಸುತ್ತವೆ, ರಾಸಾಯನಿಕ ಗೊಬ್ಬರ ಅವಲಂಬನೆ ಕಡಿಮೆ ಮಾಡಿ ಕೃಷಿಯ ವೆಚ್ಚವನ್ನು ತಗ್ಗಿಸುತ್ತವೆ. ಮುಂದಿನ ಪೀಳಿಗೆಗೆ ಆರೋಗ್ಯಕರ ಸಜೀವ ಮಣ್ಣು ಉಳಿಸಲು ಮತ್ತು ಸುಸ್ಥಿರ ಇಳುವರಿ ಪಡೆಯಲು ಸಾವಯವ ಮತ್ತು ನೈಸರ್ಗಿಕ ಕೃಷಿಗೆ ರೈತರು ಆದ್ಯತೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ತುಮಕೂರಿನ ಮಲ್ಟಿಪ್ಲೆಕ್ಸ್ ಬಯೋಟೆಕ್ ಪ್ರೈ ಲಿ ನ ತಾಂತ್ರಿಕ ಮುಖ್ಯಸ್ಥರಾದ ಎಸ್.ಕುಮಾರ್, ಜಿ ಗಿರಿಧರ್, ಕೆನರಾ ಬ್ಯಾಂಕಿನ ಹಣಕಾಸು ಸಾಕ್ಷರತಾ ಕೇಂದ್ರದ ಆರ್ಥಿಕ ಸಮಾಲೋಚಕ ವಿ.ತಿಪ್ಪೇಸ್ವಾಮಿ, ರೈತ ಹೆಚ್ ಸಿ ಲೋಕೇಶ್, ಅಖಂಡ ಕರ್ನಾಟಕ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶಾಂತ ಅಶೋಕ್,

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಪೂರ್ಣಶ್ರೀ ಎಂ.ಬಡಿಗೇರ, ಕೃಷಿ ಅಧಿಕಾರಿ ಪವಿತ್ರಾ ಎಂ.ಜೆ, ಮಹಿಳಾ ಮತ್ತು ಮಕ್ಖಳ ಕಲ್ಯಾಣ ಇಲಾಖೆ ಅಧಿಕಾರಿ ವಿನಯ್, ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ದೇಶಕರಾದ ಚಿಕ್ಕಬೆನ್ನೂರಿನ ಕೆ.ಸಿ.ಕುಮಾರ್, ಕೋಡಿ ರಂಗವ್ವನಹಳ್ಳಿಯ ಜಿ.ಸಿ ಶಿವಕುಮಾರ್, ಚೌಲಿಹಳ್ಳಿಯ ಶೈಲೇಶ್ ಕುಮಾರ್, ಪ್ರಶಾಂತ್ ಮತ್ತು ವಿವಿಧ ಗ್ರಾಮಗಳ 85 ಕ್ಕೂ ಹೆಚ್ಚಿನ ರೈತ ಮಹಿಳೆಯರು ಮತ್ತು ರೈತರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ