ನವಲಗುಂದ:
ಪಟ್ಟಣದ ಬಹುತೇಕ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದರಿಂದ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು. ವಿವಿಧ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಯುವಕರು ಬಂದ್‌ಗೆ ಬೆಂಬಲಿಸಿದರು.
ಪಂಚಗ್ರಹ ಹಿರೇಮಠದ ಇಮ್ಮಡಿ ಸಿದ್ದೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ರೈತರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಹಿರೇಮಠದಿಂದ ರೈತ ಭವನದ ವರೆಗೆ ಮೆರವಣಿಗೆ ನಡೆಸಿ, ಹುತಾತ್ಮ ರೈತ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು. ಹುಬ್ಬಳ್ಳಿ, ಅಣ್ಣಿಗೇರಿ ಹಾಗೂ ಗ್ರಾಮೀಣ ಭಾಗದ ಯುವ ರೈತರು ಬೈಕ್ ರ‍್ಯಾಲಿ ನಡೆಸಿದರು.ರೈತ ಭವನದಲ್ಲಿ ನಡೆದ ಸಮಾವೇಶದಲ್ಲಿ ನರಗುಂದ ವಿರಕ್ತಮಠದ ಗುರುಶಿದ್ಧ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ರೈತರು ಸಂಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸಿ ಪರಿಹಾರ ಒದಗಿಸುವುದು ಸರ್ಕಾರದ ಕರ್ತವ್ಯ. ಆದರೆ, ರೈತರ ಸಮಸ್ಯೆಗಳನ್ನು ಕಡೆಗಣಿಸಿ ರಾಜಕಾರಣ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ರೈತ ಸಂಘಟನೆಗಳು ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಬರದಿಂದ ತತ್ತರಿಸಿರುವ ರೈತರಿಗೆ ಮಧ್ಯಂತರ ಪರಿಹಾರವಾಗಿ ₹50 ಸಾವಿರ ನೀಡಬೇಕು, ಬರಗಾಲ ಕಾಮಗಾರಿ ಆರಂಭಿಸಿ ಕೃಷಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಬೇಕು ಹಾಗೂ ಎಲ್ಲ ಬ್ಯಾಂಕ್‌ಗಳಲ್ಲಿನ ರೈತರ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ನರಗುಂದ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತ ಮಠದ ಶಾಂತಲಿಂಗ ಶ್ರೀ, ರಘುನಾಥ ನಡುವಿನಮನಿ, ಶ್ರೀಶೈಲ, ಮಹಾದೇವಿ ಹೂಯಿಲಗೋಳ, ಪ್ರೇಮಾ ನಾಯ್ಕರ, ಮೈಲಾರಪ್ಪ ವೈದ್ಯ, ವಿಕ್ರಂ ಕುರಿ, ಅಣ್ಣಪ್ಪ ಬಾಗಿ, ರಿಯಾಜ ನಾಶಿಪುಡಿ, ಶಿರಾಜ್ ಧಾರವಾಡ, ಉಮೇಶ ನವಲಗುಂದ, ಡಿ.ಕೆ. ಹಳ್ಳದ, ಶಿವಾನಂದ ಕೊಳಲಿನ, ಮಲ್ಲಿಕಾರ್ಜುನಗೌಡ ಪಾಟೀಲ ಕುಲಕರ್ಣಿ, ನೇತಾಜಿ ಕಲಾಲ ಸೇರಿದಂತೆ ಸಾವಿರಾರು ರೈತರು ಪಾಲ್ಗೊಂಡಿದ್ದರು. ಜತೆಗೆ ತಾಲೂಕಿನ ಕನ್ನಡಪರ ಸಂಘಟನೆ ಸೇರಿದಂತೆ ಹತ್ತಾರು ಸಂಘಟನೆಗಳು ನವಲಗುಂದ ಬಂದ್‍ಗೆ ಬೆಂಬಲ ವ್ಯಕ್ತ ಪಡಿಸಿದ್ದರು.