ಮಂಗಳೂರು: ನವರಾತ್ರಿ ಉತ್ಸವ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ‘ಮಂಗಳೂರು ದಸರಾ’ಗೆ ನಗರದಾದ್ಯಂತ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ನಗರದ ರಸ್ತೆಗಳು ಸಂಜೆಯಿಂದ ಎಲ್ಲ ಕಡೆಗಳಲ್ಲೂ ಜಗಮಗಿಸುತ್ತಿದೆ.
ದಸರಾ ಮೆರವಣಿಗೆ ಸಾಗುವ ಕುದ್ರೋಳಿ, ಲೇಡಿಹಿಲ್, ಲಾಲ್ಬಾಗ್, ಎಂಜಿ ರೋಡ್, ನವಭಾರತ್ ಸರ್ಕಲ್, ಕೆ.ಎಸ್.ರಾವ್ ರೋಡ್, ಕೃಷ್ಣ ಭವನ, ಕಾರ್ಸ್ಟ್ರೀಟ್, ನ್ಯೂಚಿತ್ರ ಟಾಕೀಸ್ ರಸ್ತೆಗಳನ್ನು ವಿದ್ಯುತ್ ದೀಪಗಳ ಚಪ್ಪರದಂತೆ ಅಲಂಕಾರ ಮಾಡಲಾಗಿದ್ದು, ಜನತೆಯನ್ನು ಆಕರ್ಷಿಸುತ್ತಿದೆ. ನಗರದ ಸುಮಾರು 25 ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 10 ಕೋಟಿಯಷ್ಟು ಬಲ್ಬ್ಗಳಿಂದ ಅಲಂಕಾರಗೊಳಿಸಲಾಗಿದೆ. ವಿವಿಧ ಮಾದರಿಯ ವಿನ್ಯಾಸ ಮಿನಿಯೇಷರ್ಗಳಿಂದ ಅಲಂಕೃತಗೊಂಡಿದೆ.
ಸಂಭ್ರಮ ನೋಡಲು ಜನರ ದಂಡು:ದಸರಾ ಸಂಭ್ರಮದಲ್ಲಿರುವ ಮಂಗಳೂರಿಗೆ ಆರಂಭದ ದಿನದಿಂದಲೇ ನಿತ್ಯ ಸಾವಿರಾರು ಮಂದಿ ದಸರಾ ಸಂಭ್ರಮ ನೋಡಲು ನಗರಕ್ಕೆ ಆಗಮಿಸುತ್ತಿದ್ದಾರೆ. ಕುಟುಂಬ ಸಮೇತ, ಸ್ನೇಹಿತರೊಂದಿಗೆ ತಂಡೋಪತಂಡವಾಗಿ ಆಗಮಿಸುವ ಮಂದಿ ದಸರಾ ಸಂಭ್ರಮ ವಿದ್ಯುತ್ ದೀಪಾಲಂಕಾರ, ದಸರಾ ಸಂತೆ, ಆಹಾರ ಮಳಿಗೆಗಳಿಗೆ ಭೇಟಿ ನೀಡುತ್ತಿದ್ದಾರೆ. ಸಾಂಸ್ಕೃತಿಕ ಸಂಭ್ರಮ:ಮಂಗಳೂರು ದಸರಾದಲ್ಲಿ ಕುದ್ರೋಳಿ, ಮಂಗಳಾದೇವಿ ಕ್ಷೇತ್ರಗಳಲ್ಲಿ ಒಂದು ಕಡೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ವಿಶೇಷ ರೀತಿಯಲ್ಲಿ ನಡೆಯುತ್ತಿದೆ. ವಿವಿಧ ಸಾಂಸ್ಕೃತಿಕ ತಂಡಗಳಿಂದ ಕಾರ್ಯಕ್ರಮ, ನಾಟಕ, ಯಕ್ಷಗಾನಗಳು ಪ್ರದರ್ಶನವಾಗುತ್ತಿದೆ. ಇನ್ನೊಂದೆಡೆ ತುಳುನಾಡಿನ ಕಲೆ ಹುಲಿ ಕುಣಿತ ಸ್ಪರ್ಧೆಗಳೂ ಜಿಲ್ಲೆಯ ವಿವಿಧ ಕಡೆಗಳಲ್ಲಿ ಆಯೋಜನೆಗೊಳ್ಳುತ್ತಿದೆ. ಒಟ್ಟಿನಲ್ಲಿ ಮಂಗಳೂರು ದಸರಾ ವಿವಿಧ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡಿದೆ.
ಮಂಗಳೂರು ದಸರಾದ ಮತ್ತೊಂದು ವಿಶೇಷತೆ ದಸರಾ ಮೆರವಣಿಗೆ. ಮೆರವಣಿಗೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಅ.21ರಂದು ಮಂಗಳೂರು ದಸರಾ ಶೋಭಾಯಾತ್ರೆ ನಡೆಯಲಿದ್ದು, ಆ ಪ್ರಯುಕ್ತ ಶೋಭಾಯಾತ್ರೆಗೆ ವಿವಿಧ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಶೋಭಾಯಾತ್ರೆಯಲ್ಲಿ ಭಾಗವಹಿಸುವ ಸ್ತಬ್ಧ ಚಿತ್ರ ತಂಡಗಳು, ಕಲಾವಿದರ ತಂಡಗಳು ತಮ್ಮ ಸಿದ್ಧತೆಗಳನ್ನು ನಡೆಸುತ್ತಿವೆ.
ಸಂಜೆಯಾಗುತ್ತಿದ್ದಂತೆ ವಾಹನ ದಟ್ಟಣೆ
ಮಂಗಳೂರು ದಸರೆಯಲ್ಲಿ ಪಾಲ್ಗೊಳ್ಳಲು ಬೇರೆ ಬೇರೆ ಊರುಗಳಿಂದ ಆಗಮಿಸುವ ಹಿನ್ನೆಲೆಯಲ್ಲಿ ಸಂಜೆಯ ಬಳಿಕ ಟ್ರಾಫಿಕ್ ಜಾಮ್ ನಿತ್ಯದ ಮಾತಾಗಿದೆ. ವಾಹನ ದಟ್ಟಣೆ ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕಂಡುಬರುತ್ತಿದೆ. ರಾತ್ರಿವರೆಗೂ ದಸರಾಗೆ ಬಂದು ಹೋಗುವವರ ಸಂಖ್ಯೆ ಹೆಚ್ಚು ಇರುವುದರಿಂದ ವಾಹನ ಸಂಚಾರವೂ ವಿಪರೀತ ದಟ್ಟಣೆ ಕೂಡಿರುತ್ತದೆ.