ಕನ್ನಡಪ್ರಭವಾರ್ತೆ ನಾಯಕನಹಟ್ಟಿ
ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ನೀರಾವರಿ ಆನುಷ್ಠಾನ ಹೋರಾಟ ಸಮಿತಿಯು ಫೆಬ್ರವರಿ 13ರ ಮಂಗಳವಾರ ನಾಯಕನಹನಟ್ಟಿ ಬಂದ್ ಗೆ ಕರೆ ನೀಡಿದೆ.ಹಟ್ಟಿ ಮಲ್ಲಪ್ಪನಾಯಕ ಸಂಘದ ಆಡಳಿತ ಕಚೇರಿಯಲ್ಲಿ ಮಂಗಳವಾರ ನಡೆದ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸ್ವಯಂ ಪ್ರೇರಿತ ಬಂದ್ ಆಚರಿಸುವುದರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಹೋಬಳಿ ಅಧ್ಯಕ್ಷ ಜಿ.ಬಿ.ಮುದಿಯಪ್ಪ, ದೇಶಕ್ಕಾಗಿ ನಾಯಕನಹಟ್ಟಿ ಹೋಬಳಿಯ ಜನ ಅಪಾರ ಪ್ರಮಾಣದಲ್ಲಿ ತ್ಯಾಗ ಮಾಡಿದ್ದಾರೆ. ಡಿಆರ್ ಡಿಓ ಸೇರಿದಂತೆ ಹಲವು ವೈಜ್ಞಾನಿಕ ಸಂಸ್ಥೆಗಳಿಗೆ 13 ಸಾವಿರ ಎಕರೆ ಭೂಮಿ ಬಿಟ್ಟು ಕೊಟ್ಟಿದ್ದಾರೆ. ಇಂತಹ ತ್ಯಾಗಿಗಳ ಬದುಕು ಹಸನಾಗಿಸುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕರ್ತವ್ಯ. ಭದ್ರಾ ಮೇಲ್ದಂಡೆ ಯೋಜನೆಯಡಿ ಚಳ್ಳಕೆರೆ ತಾಲೂಕಿನ ಎಲ್ಲ ಕೆರೆಗಳ ಶೀಘ್ರ ತುಂಬಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.ಭದ್ರಾ ಮೇಲ್ದಂಡೆ ಯೋಜನೆ ನಿಧಾನಗತಿಯಲ್ಲಿ ಸಾಗಿದೆ. ಚಳ್ಳಕೆರೆ, ಮೊಳಕಾಲ್ಮೂರು, ಜಗಳೂರು ತಾಲೂಕುಗಳ ಕಡೆಗಣನೆ ಮಾಡಲಾಗಿದೆ. ಈ ಭಾಗದ ಜನರ ತಾಳ್ಮೆ ಪರೀಕ್ಷೆ ಮಾಡಲು ಸರ್ಕಾರ ಮುಂದಾಗಬಾರದು. ಕಾಲಮಿತಿಯಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳ ತುಂಬಿಸಬೇಕು. ಈ ಭಾಗದಲ್ಲಿಯೂ ಡ್ರಿಪ್ ಇರಿಗೇಷನ್ ಪ್ರಾಜೆಕ್ಟ್ ಜಾರಿ ಮಾಡಬೇಕೆಂದು ಒತ್ತಾಯಿಸಿದರು.ಚಿಂತಕ ಜಗಳೂರು ಯಾದವರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಮುಗಿಸುವ ಇರಾದೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಇದ್ದಂತಿಲ್ಲ. ಜನರ ಭಾವನೆಗಳ ಜೊತೆ ಯಾವುದೇ ಸರ್ಕಾರಗಳು ಚೆಲ್ಲಾಟವಾಡಬಾರದು. ಭದ್ರಾದ ನಂತರ ಕೈಗೆತ್ತಿಕೊಳ್ಳಲಾದ ಎತ್ತಿನಹೊಳೆ ಯೋಜನೆಗೆ 12 ಸಾವಿರ ಕೋಟಿ ರುಪಾಯಿ ವ್ಯಯ ಮಾಡಿರುವ ರಾಜ್ಯ ಸರ್ಕಾರ ಭದ್ರಾ ಮೇಲ್ಡಂಡೆ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸರ್ಕಾರವ ಎಚ್ಚರಿಸಲು ಚಳವಳಿ ಅನಿವಾರ್ಯ. ನಿರ್ಣಾಯಕ ಹೋರಾಟದ ಮೂಲಕ ಬಹುದಿನಗಳ ಕನಸನ್ನು ಈಡೇರಿಸಿಕೊಳ್ಳಲು ಎಲ್ಲರೂ ಮುಂದಾಗಬೇಕೆಂದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಇದು ಪಕ್ಷಾತೀತ ಹೋರಾಟವಾಗಿದ್ದು, ಜನರ ಬದುಕು ಪ್ರಧಾನವಾಗಿರಿಸಿ ಕೊಂಡು ಮುನ್ನಡೆಯಲಾಗುತ್ತಿದೆ. ಯಾವುದೇ ಪಕ್ಷದ ವಿರುದ್ಧ ನಮ್ಮ ಹೋರಾಟವಲ್ಲ. ಭದ್ರಾ ಮೇಲ್ಡಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಎನ್ನುವುದು ನಮ್ಮ ಹಕ್ಕೊತ್ತಾಯ. ಕೇಂದ್ರ ಸರ್ಕಾರದ ಅನುದಾನ ಕೊಡುತ್ತದೆ ಎಂದು ರಾಜ್ಯ ಸರ್ಕಾರ ಕಾಯುವುದು, ರಾಜ್ಯ ಮೊದಲು ಖರ್ಚು ಮಾಡಲಿ ಎಂದು ಕೇಂದ್ರ ಉದಾಸೀನ ತೋರುವುದು ತರವಲ್ಲದ ನಡವಳಿಕೆಯಾಗಿದೆ. ಅನುದಾನ ಎಲ್ಲಿಂದ ತರುತ್ತಾರೋ ನಮಗದು ಬೇಕಾಗಿಲ್ಲ. ಆಧ್ಯತೆ ಮೇರೆಗೆ ಕಾಮಗಾರಿ ಪೂರ್ಣಗೊಳಿಸಿ ಎಂಬುದು ನಮ್ಮ ಬೇಡಿಕೆ ಎಂದು ಹೇಳಿದರು.ಭದ್ರಾ ಕಾಮಗಾರಿಗೆ ಹಣ ಒದಗಿಸುವಂತೆ ಆಗ್ರಹಿಸಿ ಈಗಾಗಲೇ ಚಿತ್ರದುರ್ಗ ಬಂದ್ ನಡೆದಿದೆ. ಫೆಬ್ರವರಿ 9ರಂದು ಚಳ್ಳಕೆರೆ ಬಂದ್ ಕರೆಯಲಾಗಿದೆ. ಜಿಲ್ಲಾ ಪಂಚಾಯಿತಿ ಮುಂಭಾಗ ರೈತ ಸಂಘ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದೆ. ಚಿತ್ರದುರ್ಗದ ನೆಲ ದಲ್ಲಿ ಹೆಚ್ಚು ಹೋರಾಟಗಳು ದಾಖಲಾಗುವುದರ ಮೂಲಕ ಬಹುದಿನಗಳ ನೀರಾವರಿ ಕನಸು ಸಾಕಾರಗೊಳಿಸಿಕೊಳ್ಳಬೇಕಿದೆ. ಇದಕ್ಕಾಗಿ ಸಂಘಟಿತ ಪ್ರಯತ್ನ ಅಗತ್ಯವೆಂದು ಹೇಳಿದರು.
ಸಭೆಯಲ್ಲಿ ಫೆಬ್ರವರಿ 13 ರಂದು ಸ್ವಯಂ ಪ್ರೇರಿತ ನಾಯಕನಹಟ್ಟಿ ಬಂದ್ ಕೈಗೊಳ್ಳುವ ತೀರ್ಮಾನ ಕೈಗೊಳ್ಳಲಾಯಿತು. ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಹೋಬಳಿ ಉಪಾಧ್ಯಕ್ಷ ಮಹಾಂತೇಶ್ ದೇವರಹಳ್ಳಿ, ಆರ್ ಬಸಪ್ಪ, ಗುಂತಕೋಲಮ್ಮನಹಳ್ಳಿ ಚಂದ್ರಣ್ಣ, ಕಾರ್ಯಧ್ಯಕ್ಷ ಎಸ್.ಟಿ ಬೋರ ಸ್ವಾಮಿ, ಗೌಡಗೆರೆ ಟಿ ರಂಗಪ್ಪ, ಚೇರ್ಮನ್ ತಿಪ್ಪೇಸ್ವಾಮಿ, ಏಜೆಂಟ್ರು ಪಾಲಯ್ಯ, ರೇಖಲಗೆರೆ ವೀರೇಶ್, ಅಶೋಕ್, ಅಬ್ಬೇನಹಳ್ಳಿ ಎಂ ಎಸ್ ಶಿವಪ್ರಕಾಶ್, ಕೆ.ಟಿ ನಾಗರಾಜ್ ಮಲ್ಲೂರಹಳ್ಳಿ, ತೊರೆಕೋಲಮ್ಮನಹಳ್ಳಿ, ಮಂಜಣ್ಣ, ರಾಮಸಾಗರ ಪಿ.ಪಿ ಮಹಾಂತೇಶ್ ನಾಯಕ, ಜಯಣ್ಣ, ಆರ್ ತಿಪ್ಪೇಸ್ವಾಮಿ ಸಭೆಯಲ್ಲಿ ಪಾಲ್ಗೊಂಡಿದ್ದರು.2ನೇ ದಿನಕ್ಕೆ ಕಾಲಿಟ್ಟ ಸಂಘಟನೆಗಳ ಧರಣಿ: ಭದ್ರೆಗಾಗಿ ರೈತರ ಭಜನೆ
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5300 ಕೋಟಿ ರು. ಬಿಡುಗಡೆ ಮಾಡದಿರುವ ಕ್ರಮ ವಿರೋಧಿಸಿ ರೈತ ಸಂಘ, ಹಸಿರುಸೇನೆ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘ, ವಿವಿಧ ಜನಪರ ಸಂಘಟನೆಗಳೊಂದಿಗೆ ಜಿಲ್ಲಾ ಪಂಚಾಯಿತಿ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಹುಣಸೆಕಟ್ಟೆ ಗ್ರಾಮದ ಅಹೋಬಲ ಭಜನಾ ತಂಡದವರು ಧರಣಿಯಲ್ಲಿ ಸಂಜೆಯವರೆಗೂ ಭಜನೆ ಮಾಡಿದರು.ಈ ವೇಳೆ ಮಾತನಾಡಿದ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಜಿಲ್ಲೆಯಲ್ಲಿ ಈಗಾಗಲೇ ಬರಗಾಲ ತಲೆದೋರಿದ್ದು, ಭದ್ರಾಮೇಲ್ದಂಡೆ ಯೋಜನೆಯೊಂದೆ ಶಾಶ್ವತ ಪರಿಹಾರ. ಕಳೆದ ತಿಂಗಳು ಕೇಂದ್ರ ಮಂತ್ರಿ ಎ.ನಾರಾಯಣ ಸ್ವಾಮಿರವರಿಗೆ ಮನವಿ ಪತ್ರ ನೀಡಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಮೊದಲೆ ತಿಳಿಸಿದ್ದೆವು. ಆದರೂ ನಮ್ಮ ಮನವಿಯನ್ನು ನಿರ್ಲಕ್ಷಿಸಿರುವ ಕೇಂದ್ರ ಸರ್ಕಾರ ಭದ್ರಾಮೇಲ್ದಂಡೆ ಯೋಜನೆಯನ್ನು ತುರ್ತಾಗಿ ಮುಗಿಸುವಂತೆ ಕಾಣುತ್ತಿಲ್ಲ. ಎಲ್ಲೆಲ್ಲಿ ಸಮಸ್ಯೆ ಯಿದೆಯೋ ಅವುಗಳನ್ನೆಲ್ಲಾ ನಿವಾರಿಸಿ ಯೋಜನೆಯನ್ನು ಪೂರ್ಣಗೊಳಿಸಿ ಜಿಲ್ಲೆಗೆ ನೀರು ಹರಿಸುವತನಕ ಧರಣಿಯಿಂದ ಹಿಂದೆ ಸರಿಯುವುದಿಲ್ಲವೆಂಬ ಎಚ್ಚರಿಕೆ ನೀಡಿದರು.ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಡಿ.ಎಸ್.ಹಳ್ಳಿ, ರಾಮರೆಡ್ಡಿ, ಆರ್.ಬಿ.ನಿಜಲಿಂಗಪ್ಪ, ತಾಲೂಕು ಅಧ್ಯಕ್ಷ ಮಂಜುನಾಥ್, ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಹಳಿಯೂರು, ಹೂ ಬೆಳೆಗಾರ ಸಂಘದ ಕಾಂತರಾಜ್ ಇದ್ದರು. ಇಬ್ಬರು ಮಂಗಳಮುಖಿಯರು ಧರಣಿಯಲ್ಲಿ ಭಾಗವಹಿಸಿ ರೈತರಿಗೆ ಬೆಂಬಲಿಸಿದರು.ಹುಣಸೆಕಟ್ಟೆಯ ಮಾರುತಿ ಧರಣಿನಿರತ ರೈತರಿಗೆ ಪಪ್ಪಾಯಿ ಹಣ್ಣು ನೀಡಿದರು.