ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಕಾರ್ಯಾನುಷ್ಠಾನಕ್ಕೆ ಆಗ್ರಹಿಸಿ ಶಾಲೆ-ಕಾಲೇಜು, ಆಟೋ, ಬಸ್ಸು ಸಂಚಾರ ಸೇರಿ ದಿನವಿಡೀ ವಹಿವಾಟು ಸ್ತಬ್ಧವಾಗಿತ್ತು. ಮೋದಿ, ದೇವೇಗೌಡ, ಸಿದ್ದರಾಮಯ್ಯ ಹೆಸರಲ್ಲಿ ತಿಪ್ಪೇರುದ್ರಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಈ ವೇಳೆ ಜಲಸಂಪನ್ಮೂಲ ಇಲಾಖೆ ಅನುದಾನದಲ್ಲಿ ಹತ್ತು ಸಾವಿರ ಕೋಟಿ ರು ಕಾಯ್ದಿರಿಸಲು ಆಗ್ರಹ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ನಾಯಕನಹಟ್ಟಿಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಕಾರ್ಯಾನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ, ಹೋಬಳಿ ಮಟ್ಟದ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮಂಗಳವಾರ ಕರೆ ನೀಡಿದ್ದ ನಾಯಕನಹಟ್ಟಿ ಬಂದ್ ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಕಾಯಕಯೋಗಿ ಹಟ್ಟಿ ತಿಪ್ಪೇಶನ ನೆಲ ದಿನವಿಡಿ ಬಂದ್ ಆಗಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಶಾಲಾ ಕಾಲೇಜುಗಳು ಇರಲಿಲ್ಲ. ಬಸ್ಸು, ಆಟೋ ಸಂಚಾರ ಸ್ಥಗಿತವಾಗಿತ್ತು. ಬೆಳಗ್ಗೆ ಆರು ಗಂಟೆಗೆ ಆರಂಭವಾದ ಬಂದ್ ಪ್ರಕ್ರಿಯೆ ಸಂಜೆ ಐದರವರೆಗೂ ನಡೆಯಿತು.ಪ್ರತಿಭಟನಾ ಮೆರವಣಿಗೆಯಲ್ಲಿ ಎತ್ತಿನಗಾಡಿ, ಟ್ರ್ಯಾಕ್ಟರ್, ಕುರಿ ಮಂದೆ ಸಾಗಿದ್ದು ವಿಶೇಷವಾಗಿತ್ತು. ಹಟ್ಟಿ ಮಲ್ಲಪ್ಪನಾಯಕನ ಸಂಘದ ಆವರಣದಿಂದ ಆರಂಭವಾದ ಮೆರವಣಿಗೆ ಪಾದಗಟ್ಟೆ ಮೂಲಕ ತಿಪ್ಪೇಸ್ವಾಮಿ ಒಳಮಠಕ್ಕೆ ತೆರಳಿತು. ಈ ವೇಳೆ ಪ್ರತಿಭಟನಾಕಾರರು ತಿಪ್ಪೇಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಭದ್ರಾ ಮೇಲ್ದಂಡೆ ಕಾಮಗಾರಿ ಮುಗಿಸಲು ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ ಅವರಿಗೊಂದಿಷ್ಟು ಮತಿ ನೀಡಿ ಎಂದು ಪ್ರಾರ್ಥಿಸಲಾಯಿತು. ತರವಾಯ ಮದಕರಿನಾಯಕ ವೃತ್ತದ ಮೂಲಕ ಮೆರವಣಿಗೆ ಪ್ರಮುಖ ವೃತ್ತಕ್ಕೆ ಆಗಮಿಸಿತು.
ಈ ವೇಳೆ ಮಾತನಾಡಿದ ಮುಖಂಡರು ಈ ಭಾಗದ ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಭದ್ರಾ ಮೇಲ್ದಂಡೆ ನಿಧಾನಗತಿಯಲ್ಲಿ ಸಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಬಿಡುಗಡೆ ಮಾಡದಿದ್ದರೆ ಚುನಾವಣೆ ಬಹಿಷ್ಕಾರಕ್ಕೂ ಮುಂದಾಗೋಣ. ನಿರ್ಣಾಯಕ ಹೋರಾಟಕ್ಕೆ ಸಜ್ಜಾಗೋಣ ಎಂದು ಎಚ್ಚರಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಾಡಕಚೇರಿ ಉಪ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಕುಟುಂತ್ತಾ ಸಾಗಿದೆ. ರಾಜ್ಯ ಸರ್ಕಾರದ ಉದಾಸೀನ ಮನೋಭಾವ, ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದೇ ಇರುವುದು ಪ್ರಮುಖ ಕಾರಣವೆಂದು ಮನವಿಯಲ್ಲಿ ದೂರಲಾಗಿದೆ.22 ಸಾವಿರ ಕೋಟಿ ರುಪಾಯಿ ವೆಚ್ಚದ ಭದ್ರಾ ಮೇಲ್ದಂಡೆ ಕಾಮಗಾರಿಗೆ ಇದುವರೆಗೂ ರಾಜ್ಯ ಸರ್ಕಾರ ಮಾಡಿದ ವೆಚ್ಚ ಹತ್ತು ಸಾವಿರ ಕೋಟಿ ರು. ದಾಟಿಲ್ಲ. ಕಾಮಗಾರಿ ಆರಂಭವಾಗಿ ಇಪ್ಪತ್ತು ವರ್ಷ ಕಳೆದರೂ ಅರೆಬರೆಯಾಗಿದೆ. ರಾಜ್ಯ ಸರ್ಕಾರ ಕೇಂದ್ರದ ಅನುದಾನಕ್ಕೆ ಕಾದು ಕುಳಿತುಕೊಳ್ಳದೇ ಭದ್ರಾ ಮೇಲ್ದಂಡೆ ಕಾಮಗಾರಿಗೆ ಶರವೇಗ ನೀಡಿ ಪೂರ್ಣಗೊಳಿಸಬೇಕು. ಈ ಬಾರಿಯ ಬಜೆಟ್‌ನಲ್ಲಿ ನೀರಾವರಿ ಇಲಾಖೆಗೆ ಮೀಸಲಿಡುವ ಅನುದಾನದಲ್ಲಿ ಭದ್ರಾ ಮೇಲ್ದಂಡೆಗೆ ಕನಿಷ್ಠ ಹದಿನೈದು ಸಾವಿರ ಕೋಟಿ ರುಪಾಯಿ ಕಾಯ್ದಿರಿಸಬೇಕು. ಕೇಂದ್ರ ಸರ್ಕಾರ 5300 ಕೋಟಿ ರು. ನೆರವು ನೀಡಿ ಬಯಲು ಸೀಮೆ ಜನರ ನೆರವಿಗೆ ಧಾವಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ಹೋಬಳಿ ಅಧ್ಯಕ್ಷ ಮುದಿಯಪ್ಪ, ಕಾರ್ಯಾಧ್ಯಕ್ಷ ಬೋರಸ್ವಾಮಿ, ಜಿಪಂ ಮಾಜಿ ಸದಸ್ಯ ಎತ್ತಿಹಟ್ಟಿ ಗೌಡ, ಜಿಪಂ ಮಾಜಿ ಅಧ್ಯಕ್ಷ ಬಾಲರಾಜು, ರವಿಕುಮಾರ್, ಚಿಂತಕ ಜಗಳೂರು ಯಾದವರೆಡ್ಡಿ, ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ. ಶಿವಕುಮಾರ್, ಜಗಳೂರು ಓಬಳೇಶ್, ರೈತ ಸಂಘದ ಮುಖಂಡರಾದ ಕೆ.ಪಿ. ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಆರ್.ಬಿ. ನಿಜಲಿಂಗಪ್ಪ, ಹಂಪಯ್ಯನಮಾಳಿಗೆ ಧನಂಜಯ, ಮಲ್ಲಾಪುರ ತಿಪ್ಪೇಸ್ವಾಮಿ, ಚನ್ನಕೇಶವ, ಬಂಡೆಕಪ್ಲೆ ಓಬಣ್ಣ, ಕರಿಕೆರೆ ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡರಾದ ಸೈಯದ್, ಪ್ರಸನ್ನಕುಮಾರ್, ಮುಖಂಡರಾದ ಅಬ್ಬೇನಹಳ್ಳಿ ನಾಗರಾಜ್, ಬಾಲರಾಜ್ ಯಾದವ್, ಮಹಮದ್ ಪಾಷಾ, ಮಲ್ಲಿಕಾರ್ಜುನ, ಮಹಂತೇಶ್, ಬಸಣ್ಣ, ಲಕ್ಷ್ಮಣ ರೆಡ್ಡಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರೈತ ಸಂಘದಿಂದ ಪಂಜಿನ ಮೆರವಣಿಗೆ
ಚಿತ್ರದುರ್ಗ: ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರ 5300 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಸಂಜೆ ಚಿತ್ರದುರ್ಗದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.ನಗರದ ಗಾಂಧಿ ವೃತ್ತದಿಂದ ಆರಂಭವಾದ ಮೆರವಣಿಗೆ ಕಿತ್ತೂರುರಾಣಿ ಚೆನ್ನಮ್ಮ ಸರ್ಕಲ್, ಪ್ರವಾಸಿ ಮಂದಿರ, ಅಂಬೇಡ್ಕರ್ ಸರ್ಕಲ್, ಮದಕರಿನಾಯಕ ಸರ್ಕಲ್ ಮೂಲಕ ಸಾಗಿ ಜಿಲ್ಲಾ ಪಂಚಾಯಿತಿ ಬಳಿ ಮುಕ್ತಾಯಗೊಂಡಿತು.
ಗಾಂಧಿ ವೃತ್ತದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರೈತ ಸಂಘ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆಗೆ ಅನುದಾನ ನೀಡುವುದಾಗಿ ಹೇಳಿ ರೈತರ ವಂಚಿಸಿದೆ. ರಾಜ್ಯ ಸರ್ಕಾರ ಕೂಡಾ ಕೈಚೆಲ್ಲಿದೆ. ಅನುದಾನ ಬಿಡುಗಡೆ ಮಾಡುವ ತನಕ ಅನಿರ್ದಿಷ್ಟಾವದಿ ಧರಣಿ ಮುಂದುವರಿಸುವುದಾಗಿ ಹೇಳಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಮಲ್ಲಿಕಾರ್ಜುನ ಮಾತನಾಡಿ, ತಕ್ಷಣವೇ ಕಾಮಗಾರಿಗೆ ಚುರುಕಿನ ವೇಗ ನೀಡಬೇಕೆಂದು ಆಗ್ರಹಿಸಿದರು.