ಕಾವೇರಿ ಬಗ್ಗೆ ಮಾತನಾಡಲು ಎನ್‌ಡಿಎ ಗೆಲ್ಲಬೇಕು: ದೇವೇಗೌಡ

KannadaprabhaNewsNetwork | Updated : Apr 14 2024, 10:21 AM IST

ಸಾರಾಂಶ

ಲೋಕಸಭೆಯಲ್ಲಿ ಹೋರಾಟ ಮಾಡಲು ಮೈಸೂರು ಭಾಗದ10 ಲೋಕಸಭಾ ಕ್ಷೇತ್ರಗಳ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಬೇಕಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕರೆಕೊಟ್ಟರು. ಹೊಳೆನರಸೀಪುರದಲ್ಲಿ ಜೆಡಿಎಸ್ ಪಕ್ಷದ ಪರ ಆಯೋಜನೆ ಮಾಡಿದ್ದ ರೋಡ್‌ಶೋನಲ್ಲಿ ಭಾಗವಹಿಸಿ ಮಾತನಾಡಿದರು.

 ಹೊಳೆನರಸೀಪುರ :  ತಮಿಳುನಾಡಿನ ಮುಖ್ಯಮಂತ್ರಿಯು ಕರ್ನಾಟಕ ಒಂದು ಇಂಚು ಕಾವೇರಿ ನೀರನ್ನೂ ಹೆಚ್ಚುವರಿಯಾಗಿ ಬಳಕೆ ಮಾಡಲು ಬಿಡುವುದಿಲ್ಲ ಎಂದು ಚುನಾವಣೆ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಸಭೆಯಲ್ಲಿ ಹೋರಾಟ ಮಾಡುತ್ತೇನೆ. ಆದರೆ ಲೋಕಸಭೆಯಲ್ಲಿ ಹೋರಾಟ ಮಾಡಲು ಮೈಸೂರು ಭಾಗದ 10 ಲೋಕಸಭಾ ಕ್ಷೇತ್ರಗಳ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಬೇಕಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕರೆಕೊಟ್ಟರು.

ತಾಲೂಕಿನ ಮೂಡಲಹಿಪ್ಪೆ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆ ಜೆಡಿಎಸ್ ಪಕ್ಷದ ಪರ ಆಯೋಜನೆ ಮಾಡಿದ್ದ ರೋಡ್‌ಶೋನಲ್ಲಿ ಭಾಗವಹಿಸಿ ಮಾತನಾಡಿದರು. ‘ಕರ್ನಾಟಕ ರಾಜ್ಯ ಸರ್ಕಾರ ಎಡದಂಡೆ ಬಲದಂಡೆ ನಾಲೆಯಲ್ಲಿ ಹಾಸನ ಜಿಲ್ಲೆಯ ರೈತರಿಗೆ ನೀರನ್ನು ಹರಿಸಬಾರದು ಎಂಬ ಕಟ್ಟಾಜ್ಞೆ ಮಾಡಿದ್ದಾರೆ, ತುಮಕೂರು ಜಿಲ್ಲೆಯ ಭಾಗಕ್ಕೆ ಹರಿಯಲು ಬಿಟ್ಟಿದ್ದಾರೆ, ಅವರೂ ನಮ್ಮ ರೈತರೇ, ಆದರೆ ಇಲ್ಲಿ ನಮ್ಮ ರೈತರ ಬತ್ತ ಒಣಗುತ್ತಿರುವ ಸಂದರ್ಭದಲ್ಲಿ ಧ್ವನಿ ಎತ್ತಿ ಹೋರಾಟ ಮಾಡಬೇಕಿದೆ. ಈ ವಯಸ್ಸಿನಲ್ಲೂ ನರೇಂದ್ರ ಮೋದಿ ಮತ್ತು ಜಲ ಸಂಪನ್ಮೂಲ ಸಚಿವರ ಜತೆಗೆ ಉತ್ತಮ ಒಡನಾಟ ಇಟ್ಟುಕೊಂಡು, ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡಲಾಗುತ್ತಿದೆ. ಹೇಮಾವತಿ ಹಾಗೂ ಕಾವೇರಿ ನದಿಗಳು ನಮ್ಮದು, ಹಾಸನ ಜಿಲ್ಲೆಯ ೨ ಲಕ್ಷ ಎಕರೆ ಭೂಮಿ ಮುಳುಗಡೆಯಾಗಿದೆ ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆಯ ಜನತೆಗೆ ಆಗುವ ಅನ್ಯಾಯವನ್ನು ಸರಿ ಪಡಿಸಲು ಶಕ್ತಿ ಮೀರಿ ಹೋರಾಟ ಮಾಡುವ ಜತೆಗೆ ತಲೆಎತ್ತಿ ನಿಲ್ಲಲ್ಲು ಮತ್ತು ನನಗೆ ವೈಯಕ್ತಿಕ ಶಕ್ತಿ ತುಂಬಲು ಪ್ರಜ್ವಲ್ ಗೆಲ್ಲಬೇಕು. ಹಾಸನದ ಜನತೆ ಪ್ರಜ್ವಲ್ ಅವರನ್ನು ಗೆಲ್ಲಿಸಿ ಕಳುಹಿಸಿದ್ದಾರೆ ಎಂದು ಹೇಳಬೇಕಿದೆ’ ಎಂದು ಹೇಳಿದರು.

‘ಈ ಹೋಬಳಿಯ ಜೆಡಿಎಸ್ ನಾಯಕರು ಹಾಗೂ ತಾಪಂ ಮಾಜಿ ಅಧ್ಯಕ್ಷ ಮಲ್ಲಿಕ್ಕಣ್ಣನವರು ಜನರ ಸಮಸ್ಯೆಗೆ ನಿಸ್ವಾರ್ಥತೆಯಿಂದ ಸ್ಪಂದಿಸಿದ್ದಾರೆ. ಶಾಸಕ ರೇವಣ್ಣ, ಸಂಸದ ಪ್ರಜ್ವಲ್ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ಮಾಡಿರುವ ಜನಪರ ಕಾರ್ಯಗಳನ್ನು ಕಂಡಿದ್ದೀರಿ. ನಾನು ನೀರಾವರಿ ಸಚಿವನಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ಜನರ ಸೇವೆ ಮಾಡಿದ್ದೇನೆ, ರಾಜ್ಯಸಭೆಯಲ್ಲಿ ನಿಮಗಾಗವ ಅನ್ಯಾಯ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದೇನೆ. ಕೋಲಾರ, ಮೈಸೂರು, ಮಂಡ್ಯ, ಹಾಸನ, ತುಮಕೂರು, ಚಿಕ್ಕಮಗಳೂರು, ರಾಮನಗರ, ಇತರೆ ಜಿಲ್ಲೆಗಳಲ್ಲಿ ನೀರಿಲ್ಲದೇ, ಜನರು ಪರಿತಪಿಸುತ್ತಿದ್ದಾರೆ, ಹೊರಾಟ ಅಗತ್ಯವಾಗಿದೆ, ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡಲು ಮತ್ತು ಮೋದಿಯವರ ಬೆಂಬಲಕ್ಕೆ ಪ್ರಜ್ವಲ್ ಗೆಲ್ಲಬೇಕು’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಮಾತನಾಡಿ, ‘ಮೂಡಲಹಿಪ್ಪೆ, ತಟ್ಟೆಕೆರೆ, ಸಿಂಗಾಪುರ, ಸಿಂಗಾಪುರ ಪಾಳ್ಯ, ಈಡಿಗನಹೊಸೂರು, ಗುಂಜೇವು ಸೋಮನಹಳ್ಳಿ, ಮಾರನಾಯಕನಹಳ್ಳಿ, ಮೂಲೆಕಾಳೇನಹಳ್ಳಿ, ಗುಂಜೇವು, ಅಡಿಕೆಕೆರೆ ಹೊಸೂರು, ಬೀರನಹಳ್ಳಿ, ಮಲ್ಲಪ್ಪನಹಳ್ಳಿ ಗ್ರಾಮದ ಜನರು ಆಗಮಿಸಿದ್ದೀರಿ, ನಿಮಗೆ ನೀಡಿದ ಮಾತಿನಂತೆ ನಾವು ನಡೆದುಕೊಂಡಿದ್ದೇವೆ, ಮೂಡಲಹಿಪ್ಪೆ ಗ್ರಾಮದ ಸಣ್ಣ ನೀರಾವರಿ ಸಮಸ್ಯೆಗೆ ಪರಿಹಾರವನ್ನು ಪ್ರಾಮಾಣಿಕವಾಗಿ ಪರಿಹರಿಸುತ್ತೇವೆ, ನಣ್ಣ ಪುಟ್ಟ ವೈಮನಸ್ಸನ್ನು ಬಿಟ್ಟು, ಸಾರ್ವಜನಿಕ ಹಾಗೂ ನಿಮ್ಮ ವೈಯಕ್ತಿಕ ಸಮಸ್ಯೆಗೆ ನಿಮ್ಮ ಜತೆಗೆ ನಾವು ಇರುತ್ತೇವೆ, ಆದ್ದರಿಂದ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಅವರಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿದರು. ರೋಡ್ ಶೋನಲ್ಲಿ ನೂರಾರು ಕಾರ್ಯಕರ್ತರು ದೇವೇಗೌಡರಿಗೆ ಜೈಕಾರ ಹಾಕುತ್ತ ಸಾಗಿದರು.

ಹೊಳೆನರಸೀಪುರ ತಾಲೂಕಿನ ಮೂಡಲಹಿಪ್ಪೆ ಗ್ರಾಮದಲ್ಲಿ ಆಯೋಜನೆ ಮಾಡಿದ್ದ ರೋಡ್‌ಶೋನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾಗವಹಿಸಿ ಮಾತನಾಡಿದರು.

Share this article