ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ಹೆಸರಿನಲ್ಲಿ ರೈತರ ಮನೆ ಹಾಳು ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಬಿಡಬೇಕು. ಒಳಿತು ಮಾಡು ಮನುಷ ನೀ ಇರೋದು ಮೂರೇ ದಿವಸ ಅನ್ನೋ ಹಾಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸರ್ಕಾರ ಒಂದೂವರೆ ವರುಷ ಮಾತ್ರ ಇರುತ್ತದೆ. ಈ ಯೋಜನೆ ಪ್ರಾರಂಭ ಮಾಡುವಷ್ಟರಲ್ಲಿ ಸರ್ಕಾರ ಹೋಗುತ್ತದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭೂಸ್ವಾಧೀನಕ್ಕೆ ಶೇ.80ರಷ್ಟು ರೈತರು ಒಪ್ಪಿದ್ದಾರೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಆದರೆ ಇಲ್ಲಿ ವಾಸ್ತವ ಚಿತ್ರಣವೇ ಬೇರೆಯಿದೆ. ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಹಸಿರು ವಲಯವನ್ನು ನೋಡಿಯೇ ಇಲ್ಲ. ವಾರ್ಷಿಕ 6 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ರೈತರಿಗೆ 25 ಕೋಟಿ ರು.ಆದಾಯವಿದೆ. ರೇಷ್ಮೆ ಬೆಳೆಯಿಂದ 35 ಕೋಟಿ ಲಾಭವಿದೆ. ಇಂತಹ ಫಲವತ್ತಾದ ಭೂಮಿಯಲ್ಲಿ ಲೇಔಟ್ ನಿರ್ಮಿಸಿ ರೈತರ ಮನೆಹಾಳು ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದು ಕಿಡಿಕಾರಿದರು.
ಅಲ್ಲಿ ಓಕೆ, ಇಲ್ಲಿ ಸಿಟ್ಟು ಏಕೆ?:ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಅಂಡಮಾನ್ ನಿಕೋಬರ್‌ನಲ್ಲಿ ಚೀನಾ ದಾಳಿ ನಿಲ್ಲಿಸಲು ಸ್ಥಾಪಿಸುತ್ತಿರುವ ಹಡಗು ನಿಲ್ದಾಣ ಜಾಗಕ್ಕೆ ಹೋಗಿ ಯೋಜನೆಯನ್ನು ವಿರೋಧಿಸಿದ್ದಾರೆ. ಲಕ್ಷಾಂತರ ಮರಗಿಡಗಳು ಪ್ರಾಣಿಪಕ್ಷಿಗಳು ನಾಶವಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿ ಹಸಿರು ಉಳಿಸಲು ಹೇಳಿದ್ದಾರೆ. ಅದಕ್ಕೆ ಡಿ.ಕೆ.ಶಿವಕುಮಾರ್ ಅವರು ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದು ಕುಮಾರಸ್ವಾಮಿ ಕೂಸು ಎನ್ನುವ ನೀವು ಅವರ ಅವಧಿಯಲ್ಲೂ ಯೋಜನೆ ಅನುಷ್ಠಾನವಾಗಲಿಲ್ಲ. ಯಡಿಯೂರಪ್ಪ ಸರ್ಕಾರದಲ್ಲಿಯೂ ಆಗಲಿಲ್ಲ. ಈಗೇಕೆ ಮಾಡುತ್ತೀರಾ ಬಿಟ್ಟುಬಿಡಿ. ಬೆಂಗಳೂರಿನಲ್ಲಿರುವ ಹಲವು ಬಡಾವಣೆಗಳಲ್ಲಿ ಇನ್ನೂ ನಿವೇಶನಗಳು ಹಂಚಿಕೆಯಾಗಿಲ್ಲ. ಖಾಲಿ ನಿವೇಶನಗಳಲ್ಲಿ ಮನೆಗಳೇ ಕಟ್ಟಿಲ್ಲ. ಇಲ್ಲೇಕೆ ಅಷ್ಟೊಂದು ಬಲವಂತವಾಗಿ ಟೌನ್ ಮಾಡುತ್ತಿದ್ದೀರಾ. ಗುದ್ದಲಿ ಪೂಜೆ ಮಾಡುವಷ್ಟರಲ್ಲಿ ನಿಮ್ಮ ಸರ್ಕಾರವೇ ಹೋಗುತ್ತದೆ. ಮುಂದೆ ನಮ್ಮ ಸರ್ಕಾರ ಬಂದ ಮೇಲೆ ನಾವು ಈ ಯೋಜನೆ ಮಾಡುವುದಿಲ್ಲ ಎಂದು ಆರ್.ಅಶೋಕ್ ತಿಳಿಸಿದರು.
ಕೋಟ್ .....................
- ಆರ್.ಅಶೋಕ್, ವಿಪಕ್ಷ ನಾಯಕರು
ವಿಪಕ್ಷ ನಾಯಕ ಆರ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.