ಕನ್ನಡಪ್ರಭ ವಾರ್ತೆ ಬೆಂಗಳೂರು
ಗಾಬರಿಯಾಗಬೇಡಿ, ಇದು ನೈಋತ್ಯ ರೈಲ್ವೇ ಜೊತೆಗೂಡಿ ಎನ್‌ಡಿಆರ್‌ಎಫ್ ಬುಧವಾರ ನಡೆಸಿದ ಅಣಕು ಕಾರ್ಯಾಚರಣೆಯ ಚಿತ್ರಣವಷ್ಟೇ. ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆ ಹೇಗಿರಬೇಕು ಎಂಬುದರ ಬಗ್ಗೆ ಎನ್‌ಡಿಆರ್‌ಎಫ್ ಪ್ರಾದೇಶಿಕ ನಿರ್ವಹಣಾ ಕೇಂದ್ರ 10ನೇ ಬೆಟಾಲಿಯನ್ ಮತ್ತು ರಾಜ್ಯ ಸರ್ಕಾರದ ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿ ಸಹಯೋದಲ್ಲಿ ಈ ಅಭ್ಯಾಸ ನಡೆಯಿತು. ಇದಕ್ಕಾಗಿ ಕೃತಕ ಸನ್ನಿವೇಶ ಸೃಷ್ಟಿಸಲಾಗಿತ್ತು.
ನೆಲಮಂಗಲ ಯಾರ್ಡ್‌ನಲ್ಲಿ ಎರಡು ಬೋಗಿ ಹಳಿತಪ್ಪಿ ಒಂದು ಬೋಗಿ ಮಗುಚಿಬಿದ್ದಿರುವ ಬಗ್ಗೆ ಸಂಬಂಧಪಟ್ಟ ಎಲ್ಲ ಇಲಾಖೆ ಸಿಬ್ಬಂದಿಗೆ ಸಂದೇಶ ರವಾನಿಸಲಾಯಿತು. ಸ್ವಯಂ ಚಾಲಿತ ಅಪಘಾತ ಪರಿಹಾರ ವೈದ್ಯಕೀಯ ವಾಹನ, ಅಪಘಾತ ಪರಿಹಾರ ರೈಲು (ಎಆರ್‌ಟಿ), ಮತ್ತು ರಕ್ಷಣಾ ತಂಡವನ್ನು ಸ್ಥಳಕ್ಕೆ ಕಳುಹಿಸುವಂತೆ ಸೂಚಿಸಲಾಯಿತು. ಅಪಘಾತದ ಬಗ್ಗೆ ಜಾಗೃತಗೊಳಿಸಲು ಸೈರನ್ ಮಾಡಲಾಯಿತು.ಸಂದೇಶ ಸ್ವೀಕರಿಸಿದ ತಕ್ಷಣ, ರೈಲ್ವೇ ಬ್ರೇಕ್‌ಡೌನ್ ತಂಡ ಮತ್ತು ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ತಲುಪಿ, ತ್ವರಿತವಾಗಿ ವೈದ್ಯಕೀಯ ಸೇವೆಗಾಗಿ ಟೆಂಟ್ ಅಳವಡಿಸಿದರು. ಬೋಗಿಯ ಕಿಟಕಿಯ ಕಂಬಿ ಮತ್ತು ಕೋಚ್ ಮೇಲ್ಭಾಗ ಕತ್ತರಿಸಿ ಗಾಯಗೊಂಡ ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ಸ್ಥಳಾಂತರಿಸುವ ವಿಧಾನ ಪ್ರದರ್ಶಿಸಿದರು.