ಕೃಷ್ಣ ಲಮಾಣಿ
ಕಳೆದ ಒಂದು ತಿಂಗಳಿನಿಂದ ಜಲಾಶಯದ ಗೇಟ್‌ಗಳಲ್ಲಿ ಈ ಪರೀಕ್ಷೆ ನಡೆಯುತ್ತಿದ್ದು, ಈ ಏಜೆನ್ಸಿ ನೀಡುವ ವರದಿ ಆಧಾರದ ಮೇಲೆ ಗೇಟ್‌ಗಳನ್ನು ಬದಲಿಸಲು ಇ-ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ.
ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಹಾಗೂ ಜಲಾಶಯದ ಗಟ್ಟಿತನ ಪತ್ತೆ ಹಚ್ಚಲು, ಮೌಲ್ಯಮಾಪನ ನಡೆಸಲು ಈ ಪರೀಕ್ಷೆ ನಡೆಸಲಾಗುತ್ತಿದೆ. ಆಂಧ್ರಪ್ರದೇಶ ಮೂಲದ ಕೆ.ಎಸ್. ಎನ್‌ಡಿಟಿ ಸರ್ವಿಸ್ ಎಂಬ ಏಜೆನ್ಸಿ ಈ ಕಾರ್ಯ ಕೈಗೆತ್ತಿಕೊಂಡಿದ್ದು, ಕಳೆದ ಒಂದು ತಿಂಗಳಿನಿಂದ ಹತ್ತಾರು ಜನ ತಜ್ಞರ ತಂಡ ಜಲಾಶಯದ ಗೇಟ್‌ಗಳಲ್ಲಿ ಇಳಿದು ಪರೀಕ್ಷೆ ನಡೆಸುತ್ತಿದ್ದು, ಐದಾರು ದಿನಗಳಲ್ಲೇ ಈ ಕಾರ್ಯ ಪೂರ್ಣಗೊಳ್ಳಲಿದೆ. ಬಳಿಕ ಆರಂಭಿಕ ಹಂತದಲ್ಲಿ 32 ಕ್ರಸ್ಟ್‌ಗೇಟ್‌ಗಳಲ್ಲಿ (19ನೇ ಕ್ರಸ್ಟ್‌ಗೇಟ್‌ಗೆ ಸ್ಟಾಪ್‌ಲಾಗ್ ಅಳವಡಿಸಲಾಗಿದೆ) ಯಾವ್ಯಾವ ಗೇಟ್‌ಗಳನ್ನು ತುರ್ತಾಗಿ ಬದಲಿಸಬೇಕು ಎಂಬುದರ ಕುರಿತು ಮಂಡಳಿಗೆ ವರದಿ ಸಲ್ಲಿಸಲಿದೆ ಎಂದು ವಿಶ್ವಸನೀಯ ಮೂಲಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿವೆ.19ನೇ ಕ್ರಸ್ಟ್‌ಗೇಟ್‌ನ ಡಿಸೈನ್ ಬಂದಿದೆ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳಚಿ ಬಿದ್ದು, 40 ಟಿಎಂಸಿಯಷ್ಟು ನೀರು ನದಿಪಾಲಾಗಿತ್ತು. ಹೈದರಾಬಾದ್‌ನ ಪರಿಣಿತ ಕನ್ನಯ್ಯ ನಾಯ್ಡು ತಂಡ ಸ್ಟಾಪ್‌ಲಾಗ್ ಅಳವಡಿಕೆ ಮಾಡಿ, ಅಪಾಯದಿಂದ ಪಾರು ಮಾಡಿದ್ದರು. ಈಗ ಕೇಂದ್ರ ಸರ್ಕಾರದ ಡೈರೆಕ್ಟರ್ ಆಫ್ ಡಿಸೈನ್ ವಿಂಗ್, ಈ ಗೇಟ್ ಬದಲಿಸಲು ಡಿಸೈನ್ ತಯಾರಿಸಿ ಕಳುಹಿಸಿಕೊಟ್ಟಿದೆ. ಆಂಧ್ರಪ್ರದೇಶ ಸರ್ಕಾರದ ಪರಿಣಿತರ ತಂಡಕ್ಕೂ ಕಳುಹಿಸಲಾಗಿದೆ. ಈ ತಂಡ ಕೂಡ ಈ ಡಿಸೈನ್‌ಗೆ ಸಹಮತ ವ್ಯಕ್ತಪಡಿಸಿದೆ. ಹಾಗಾಗಿ ಶೀಘ್ರವೇ ಟೆಂಡರ್ ಕರೆದು; 19ನೇ ಗೇಟ್‌ಗೆ ಹೊಸ ವಿನ್ಯಾಸದ ಗೇಟ್ ಅಳವಡಿಸಲು ಮಂಡಳಿ ಮುಂದಾಗಲಿದೆ.
ತುಂಗಭದ್ರಾ ಜಲಾಶಯ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ 10 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಇನ್ನೂ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೂ ನೀರು ಒದಗಿಸುತ್ತದೆ.
₹2.3 ಕೋಟಿ ಬಿಡುಗಡೆ: 19ನೇ ಕ್ರಸ್ಟ್‌ಗೇಟ್ ಕಳಚಿ ಬಿದ್ದ ಬಳಿಕ ತುಂಗಭದ್ರಾ ಮಂಡಳಿ ಸ್ಟಾಪ್‌ಲಾಗ್ ಗೇಟ್ ಅಳವಡಿಕೆ ಮಾಡಿದೆ. ಈಗ ಆಂಧ್ರಪ್ರದೇಶ ಸರ್ಕಾರ ₹2.3 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಹಣದಲ್ಲಿ ಕನ್ನಯ್ಯ ನಾಯ್ಡು ನೇತೃತ್ವದ ಪರಿಣಿತರ ತಂಡ ಹಾಗೂ ಸ್ಟಾಪ್‌ಲಾಗ್ ಅಳವಡಿಕೆಗೆ ಎಲಿಮೆಂಟ್ ಒದಗಿಸಿದ ಸಂಸ್ಥೆಗಳು, ಕಾರ್ಮಿಕರಿಗೆ ವೇತನವನ್ನು ನೀಡಲು ಮಂಡಳಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.