ಶಿವಪುರಧ್ವಜ ಸತ್ಯಾಗ್ರಹ ಸೌಧದ ಅಭಿವೃದ್ಧಿಗೆ ಅಗತ್ಯ ಕ್ರಮ: ಶಾಸಕ ಕೆ.ಎಂ.ಉದಯ್

KannadaprabhaNewsNetwork | Published : Aug 16, 2024 12:49 AM

ಸಾರಾಂಶ

ಐತಿಹಾಸಿಕ ಹಿನ್ನೆಲೆಯ ಶಿವಪುರ ಧ್ವಜ ಸತ್ಯಾಗ್ರಹಸೌಧದ ಅಭಿವೃದ್ಧಿಗೆ ಅಗತ್ಯ ಕಾರ್ಯಕ್ರಮ, ಕಾಮಗಾರಿ, ಯೋಜನೆ ರೂಪಿಸಿ ಹಣ ಬಿಡುಗಡೆಗೆ ಉಪ ಮುಖ್ಯಮಂತ್ರಿಗಳೊಡನೆ ಚರ್ಚಿಸಿದ್ದೇವೆ. ಅನುದಾನ ಬಿಡುಗಡೆಗೊಳಿಸುವ ಕುರಿತು ಕಳೆದ ವಾರವಷ್ಟೆ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸ್ವಾತಂತ್ರ್ಯ ಸಂಗ್ರಾಮದ ಕುರುವಾಗಿರುವ ಶಿವಪುರಧ್ವಜ ಸತ್ಯಾಗ್ರಹ ಸೌಧದ ಅಭಿವೃದ್ಧಿಗೆ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ಶಿವಪುರ ಧ್ವಜ ಸತ್ಯಾಗ್ರಹ ಸೌಧದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದ್ರು ನೇತೃತ್ವದಲ್ಲಿ ಎಂ.ಎಚ್.ಚೆನ್ನೇಗೌಡ ವಿದ್ಯಾನಿಲಯ, ಎಚ್.ಕೆ.ವೀರಣ್ಣಗೌಡ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಮಂಡ್ಯ ಪಿ.ಡಿ.ಎಫ್ ಲಯನ್ಸ್ ಸಂಸ್ಥೆ ಹಾಗೂ ಮದ್ದೂರಿನ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಐತಿಹಾಸಿಕ ಹಿನ್ನೆಲೆಯ ಶಿವಪುರ ಧ್ವಜ ಸತ್ಯಾಗ್ರಹಸೌಧ ದೇಶಕ್ಕೆ ಮಾದರಿಯಾದ ಸ್ಥಳ. ಇದರ ಅಭಿವೃದ್ಧಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಿರ್ವಹಣಾ ಉಸ್ತುವಾರಿ ಸಮಿತಿ ಅಸ್ತಿತ್ವಕ್ಕೆ ತರಲು ಕ್ರಮ ವಹಿಸಲಾಗಿದೆ ಎಂದರು.

ಸೌಧದ ಅಭಿವೃದ್ಧಿಗೆ ಅಗತ್ಯ ಕಾರ್ಯಕ್ರಮ, ಕಾಮಗಾರಿ, ಯೋಜನೆ ರೂಪಿಸಿ ಹಣ ಬಿಡುಗಡೆಗೆ ಉಪ ಮುಖ್ಯಮಂತ್ರಿಗಳೊಡನೆ ಚರ್ಚಿಸಿದ್ದೇವೆ. ಅನುದಾನ ಬಿಡುಗಡೆಗೊಳಿಸುವ ಕುರಿತು ಕಳೆದ ವಾರವಷ್ಟೆ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿರುವುದಾಗಿ ಹೇಳಿದರು.

ಧ್ವಜವಂದನೆ ಸ್ವೀಕರಿಸಿದ ತಹಸೀಲ್ದಾರ್ ಕೆ.ಎಸ್.ಸೋಮಶೇಖರ್, ಸ್ವಾತಂತ್ರ್ಯ ಹೋರಾಟದ ಇತಿಹಾಸ ನೆಲ ಹೊಂದಿರುವ ಶಿವಪುರ ಧ್ವಜ ಸತ್ಯಾಗ್ರಹಸೌಧದಲ್ಲಿ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣದಲ್ಲಿ ಪಾಲ್ಗೊಂಡ ಕ್ಷಣ ಅವಿಸ್ಮರಣೀಯವೆಂದರು.

ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಮಾತನಾಡಿ, ಇಂದಿನ ಯುವಜನತೆ ದೇಶದ ಸ್ವಾತಂತ್ಯಕ್ಕಾಗಿ ತ್ಯಾಗ, ಬಲಿದಾನವಿತ್ತ ಹಿರಿಯರನ್ನು ಸ್ಮರಿಸುವ ಮತ್ತು ರಾಷ್ಟ್ರದ ಐಕ್ಯತೆಯನ್ನು ಕಾಪಾಡುವ ಹಾಗೂ ದೇಶದ ಭವಿಷ್ಯದ ಅಭಿವೃದ್ಧಿಗೆ ಚಿಂತಿಸುವಂತೆ ಕಿವಿಮಾತು ಹೇಳಿದರು.

ಇದೇ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು, ಸಂಸ್ಥೆ ಕಾರ್ಯದರ್ಶಿ ಸ್ವರೂಪ್ಚಂದ್, ಪಿ.ಡಿ.ಎಫ್ ಲಯನ್ಸ್ ಅಧ್ಯಕ್ಷ ಅನಂತ್ ಕುಮಾರ್, ಪುರಸಭೆ ಸದಸ್ಯೆ ಬಿ.ಸಿ.ಸರ್ವಮಂಗಳ ನಂಜಪ್ಪ, ಕಸಾಪ ತಾಲೂಕು ಅಧ್ಯಕ್ಷ ಕೆ.ಎಸ್.ಸುನೀಲ್ ಕುಮಾರ್, ರೋಟರಿ ಅಧ್ಯಕ್ಷ ಚನ್ನಂಕೇಗೌಡ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಉಪನ್ಯಾಸಕರು, ಶಿಕ್ಷಕರು ಹಾಜರಿದ್ದರು.

Share this article