ಮಾನ್ವಿ: ಪಟ್ಟಣದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಕುಡಿಯುವ ನೀರಿನ ಜಲಮೂಲಗಳು ಸಂಪೂರ್ಣವಾಗಿ ಬತ್ತಿ ಹೋಗಿರುವುದರಿಂದ ಪಟ್ಟಣದ ನಿವಾಸಿಗಳು ಕುಡಿಯುವ ನೀರಿಗಾಗಿ ಪ್ರತಿನಿತ್ಯ ಪರಿತಪಿಸುವಂತಾಗಿದೆ.
ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಮಾತನಾಡಿ, ಮಾನ್ವಿ ಪಟ್ಟಣದಲ್ಲಿನ ಕೆಟ್ಟಿರುವ ಕೋಳವೆ ಬಾವಿಗಳ ದುರಸ್ತಿಯನ್ನು 46 ಲಕ್ಷ ರು. ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಖಾಸಗಿಯವರ ಕೊಳವೆ ಬಾವಿಗಳನ್ನು ಗುರುತಿಸಲಾಗಿದ್ದು, ಬಾಡಿಗೆ ಅಧಾರದಲ್ಲಿ ಪಡೆಯಲಾಗುವುದು. ಕೆರೆಸೀಟಿ ಯೋಜನೆ ಅಡಿಯಲ್ಲಿ 28 ಲಕ್ಷ ರು. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನ ದೊರೆತಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಬಳಸಿಕೊಳ್ಳಲಾಗುವುದು. ಮಾನ್ವಿ ಪಟ್ಟಣದಲ್ಲಿ ನೀರಿನ ತೀವ್ರ ಕೋರತೆ ಇರುವ ವಾರ್ಡ್‌ಳಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲು ಟೆಂಡರ್ ಕರೆಯಲಾಗಿದೆ ಪಟ್ಟಣದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು.
ಮಾನ್ವಿ ಪಟ್ಟಣಕ್ಕೆ ಅಗತ್ಯವಿರುವ ಕುಡಿಯುವ ನೀರಿಗಾಗಿ 6 ಮೀಟರ್ ಸಂಗ್ರಹ ಸಾಮರ್ಥ್ಯದ ರಬಣ್ಣಕಲ್ ಕೆರೆ ಸಂಪೂರ್ಣವಾಗಿ ತುಂಬಲು 2.5 ಮೀಟರ್ ನೀರನ್ನು ಸಂಗ್ರಹಿಸಲು ಮಾ.5ರಿಂದ ಕಾಲುವೆ ಮೂಲಕ ಬಿಡುವ ನೀರನ್ನು ಸಂಗ್ರಹಿಸಲಾಗುವುದು. ರಬಣಕಲ್ ಕುಡಿಯುವ ನೀರಿನ ಸಂಗ್ರಹಗಾರದಲ್ಲಿ ನೀರಿಗಾಗಿ ಕಾತರಕಿ ಗ್ರಾಮದಲ್ಲಿ ತುಂಗಭದ್ರ ನದಿಯಲ್ಲಿ ಜಾಕ್ವೆಲ್ ಮೂಲಕ ನೀರನ್ನು ಪಂಪ್ ಮಾಡಿ ಬಿಡಲಾಗುತ್ತಿದ್ದು, ನದಿಯಲ್ಲಿ ನೀರು ಬತ್ತಿರುವುದರಿಂದ ನದಿಯಲ್ಲಿ 6 ಕೊಳವೆಬಾವಿಗಳನ್ನು ಹೊಸದಾಗಿ ಕೊರೆಯಿಸಲಾಗಿದ್ದು ಅವುಗಳಿಂದ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.