ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರಸಭೆಯ ಸಭಾಂಗಣದಲ್ಲಿ ಆಡಳಿತಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಗರಸಭಾ ಸಾಮಾನ್ಯ ಸಭೆ ನಡೆಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಕೆ.ಎಸ್. ರಮೇಶ್, ನಗರಸಭಾ ವ್ಯಾಪ್ತಿಯಲ್ಲಿ ನಿವೇಶನಗಳನ್ನು ಹೊಂದಿರುವ ಬಡ ಮಂದಿ ಖಾತೆಗಳನ್ನು ಮಾಡಿಸುವ ಹಂತದಲ್ಲಿ ಏಕ ನಿವೇಶನದ ವಿಭಜನ ನಕ್ಷೆಯ ಷರತ್ತು ವಿಧಿಸಲಾಗುತ್ತಿದೆ. ಇದಕ್ಕಾಗಿ ನಿವೇಶನ ಹೊಂದಿರುವವರು ಮುಡಾಕ್ಕೆ ತೆರಳಿದರೆ ಅಲ್ಲಿ ಇದರ ಅವಶ್ಯಕತೆ ಇಲ್ಲವೆಂದು ಹಿಂಬರಹ ನೀಡಿ ಮರಳಿ ನಗರಸಭೆಗೆ ಕಡತ ಕಳುಹಿಸುತ್ತಿದ್ದಾರೆ. ಇದರಿಂದ ಬಹಳಷ್ಟು ಸಮಸ್ಯೆ ಆಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.ಇದಕ್ಕೆ ಪೂರಕವಾಗಿ ಅಮಿನ್ ಮೊಹಿಸಿನ್ ಮಾತನಾಡಿ, ಬಹಳಷ್ಟು ಹಿಂದಿನಿಂದಲೆ ನಗರ ವ್ಯಾಪ್ತಿಯಲ್ಲಿ ಮನೆ, ನಿವೇಶನ ಹೊಂದಿದ್ದು, ಇದನ್ನು ತಮ್ಮ ಮಕ್ಕಳಿಗೆ ಹಂಚಿಕೆ ಮಾಡಿಕೊಡುವ ಹಂತದಲ್ಲಿಯೂ ‘ಏಕ ನಿವೇಶನ ವಿಭಜನೆ ನಕ್ಷೆ’ ಕೇಳಲಾಗುತ್ತಿದೆ. ಆದರೆ ಈ ಬಗ್ಗೆ ನ್ಯಾಯಾಲಯಗಳು ವಿವಿಧ ಪ್ರಕರಣಗಳಲ್ಲಿ ಇದರ ಅಗತ್ಯವಿಲ್ಲವೆಂದು ತೀರ್ಪು ನೀಡಿರುವ ಅಂಶವನ್ನು ಸಭೆಯ ಮುಂದಿಟ್ಟು, ಸಮಸ್ಯೆ ಬಗೆಹರಿಸುವಂತೆ ಕೋರಿದರು.
* ಗುತ್ತಿಗೆದಾರ ಸಂಸ್ಥೆ ಬ್ಲಾಕ್ ಲಿಸ್ಟ್‌ಗೆ: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಎಲ್‌ಇಡಿ ಬೀದಿ ದೀಪಗಳು ಸಮರ್ಪಕವಾಗಿ ಉರಿಯದೆ, ನಗರ ಕತ್ತಲೆಯಲ್ಲಿ ಮುಳುಗಿದೆ. ಇದನ್ನು ಸಮರ್ಪಕವಾಗಿ ನಿರ್ವಹಿಸದಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಸಂದರ್ಭ ಜಿಲ್ಲಾಧಿಕಾರಿ, ಟೆಂಡರ್ ನಿಯಮಗಳಂತೆ ಗುತ್ತಿಗೆದಾರ ಸಂಸ್ಥೆ ಬೀದಿ ದೀಪ ನಿರ್ವಹಿಸಿಲ್ಲ ಎಂದಾದರೆ ಅದನ್ನು ಕಪ್ಪು ಪಟ್ಟಿಗೆ ಒಳಪಡಿಸುವ ಎಚ್ಚರಿಕೆ ನೀಡಿದರು.
ಸದಸ್ಯ ಮನ್ಸೂರ್ ಮಾತನಾಡಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನಗರೋತ್ಥಾನದಡಿ ಆಗಿರುವ ಕೆಲಸಗಳನ್ನು ಮತ್ತೆ ನಡಾವಳಿಯಲ್ಲಿ ನಗರಸಭಾ ನಿಧಿಯ ಕಾಮಗಾರಿಗಳಲ್ಲಿ ತೋರಿಸಲಾಗಿದೆ ಎಂದು ಸಭೆಯ ಗಮನ ಸೆಳೆದರು. ಸದಸ್ಯ ಅಮಿನ್ ಮೊಹಿಸಿನ್, ನಗರೋತ್ಥಾನದಡಿ ನಡೆದ ಬಹಳಷ್ಟು ಕಾಮಗಾರಿಗಳು ಈಗ ಹದಗೆಟ್ಟಿದೆ ಮತ್ತು ಸಾಕಷ್ಟು ಕಾಮಗಾರಿಗಳು ನಡೆದಿಲ್ಲ ಎಂದರು.
* ಪಾದಚಾರಿ ಸ್ನೇಹಿ ರಸ್ತೆ: ನಗರದ ಡಿಸಿಸಿ ಬ್ಯಾಂಕ್‌ನಿಂದ ರಾಜಾಸೀಟ್‌ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಇಂಟರ್ ಬ್ಲಾಕ್‌ಗಳನ್ನು ಅಳವಡಿಸಿ ಪಾದಚಾರಿ ಸ್ನೇಹಿ ರಸ್ತೆಯನ್ನಾಗಿ ಪರಿವರ್ತಿಸುವ ಅಗತ್ಯವಿದೆ. ಈ ಕಾರ್ಯ ಹತ್ತು ಹದಿನೈದು ದಿನಗಳಲ್ಲಿ ಪೂರ್ಣಗೊಳಿಸಬಹುದು. ಈ ಕುರಿತು ಅಗತ್ಯ ಗಮನ ಹರಿಸುವಂತೆ ಪೌರಾಯುಕ್ತರಿಗೆ ಸ್ಪಷ್ಟ ನಿರ್ದೇಶನವನ್ನು ನೀಡಿದರು.
* ಅಸಮರ್ಪಕ ತ್ಯಾಜ್ಯ ವಿಲೇವಾರಿ: ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಹಸಿಕಸ ಮತ್ತು ಒಣಕಸಗಳ ವಿಲೇವಾರಿ ಸಮರ್ಪಕವಾಗಿ ನಡೆಯದಿರುವ ಅಂಶವನ್ನು ಮನ್ಸೂರು ಸಭೆಯ ಗಮನಕ್ಕೆ ತಂದು, ನಗರದ ಅಲ್ಲಲ್ಲಿ ಸಿಸಿ ಟಿವಿ ಅಳವಡಿಸಿದ್ದರೂ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ನಿಯಂತ್ರಿಸಲು ಸಾಧ್ಯವಾಗದಿರುವ ಕುರಿತು ಸಭೆಯ ಗಮನ ಸೆಳೆದರು. ಇದಕ್ಕೆ ಪೂರಕವಾಗಿ ಸದಸ್ಯ ಅಪ್ಪಣ್ಣ ಮಾತನಾಡಿ ಸುಮಾರು ೫೦ ರಿಂದ ೫೫ ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲಾಗಿದ್ದರೂ ಕಸ ವಿಲೇವಾರಿ ಮಾತ್ರ ನಡೆಯುತ್ತಿಲ್ಲ ಎಂದು ದೂರಿದರು.
ವೆಂಕಟ್ ರಾಜಾ ಮಾತನಾಡಿ ಈ ಅನುದಾನ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಾಗಿರುತ್ತದೆ. ನಾಮನಿರ್ದೇಶಿತ ಸದಸ್ಯರು ಅಗತ್ಯವಾಗಿ ನಡೆಯಬೇಕಾದ ಕಾಮಗಾರಿಗಳನ್ನು ತಮಗೆ ಸೂಚಿಸಿದರೆ ಪರಿಶೀಲಿಸಿ ಅವುಗಳನ್ನು ನಡೆಸುವುದಾಗಿ ಸ್ಪಷ್ಟಪಡಿಸಿದರು.
ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆಯಲಾಗಿರುವ ನಗರ ಸಭೆ ಸಾಮಾನ್ಯ ಸಭೆಯ ನಡಾವಳಿಯಲ್ಲಿ ಈ ಹಿಂದಿನ ಹಲವು ಸಭೆಗಳ ಅಂಶಗಳನ್ನು ತರದೆ ಇರುವ ಹಿನ್ನೆಲೆಯಲ್ಲಿ ಸಭೆಯ ಕಾನೂನು ಬದ್ಧವಲ್ಲವೆಂದು ಸದಸ್ಯ ಅಮಿನ್ ಮೊಹಿಸಿನ್ ಸಭೆಯ ಗಮನಕ್ಕೆ ತಂದ ಘಟನೆ ನಡೆಯಿತು.
ಈ ಹಿಂದೆ ಪೌರಾಯುಕ್ತರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕೆನ್ನುವ ನಿರ್ಣಯ ತೆಗೆದುಕೊಂಡ ಸಭೆಯ ನಿರ್ಣಯಗಳನ್ನು ಈ ಸಭೆಗೆ ತಂದಿಲ್ಲ. ಹಿಂದಿನ ಆಯವ್ಯಯ ಸಭೆಯ ನಿರ್ಣಯಗಳನ್ನು ಸಭೆಗೆ ತಂದಿಲ್ಲ ಎಂದು ಉದಾಹರಣೆ ಸಹಿತ ವಿವರಿಸಿದ ಅಮಿನ್ ಮೊಹಿಸಿನ್, ಇವೆಲ್ಲವುಗಳನ್ನು ಪೌರಾಯುಕ್ತರು ಉದ್ದೇಶ ಪೂರ್ವಕವಾಗಿ ಮರೆ ಮಾಡಿದ್ದಾರೆಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ವೆಂಕಟ್ ರಾಜ ಈ ಬಗ್ಗೆ ತನಿಖೆ ಮಾಡಿಸುವುದಾಗಿ ತಿಳಿಸಿದರು. ಮುಂದಿನ ಸಭೆಯಲ್ಲಿ ಕಳೆದ ಸಭೆಗಳ ಅಂಶಗಳನ್ನು ತರಬೇಕೆಂದು ಪೌರಾಯುಕ್ತರಿಗೆ ಸೂಚಿಸಿದರಲ್ಲದೇ, ಸದಸ್ಯರ ಒಪ್ಪಿಗೆ ಇದ್ದಲ್ಲಿ ಸಭೆ ನಡೆಸಬಹುದೆಂದು ತಿಳಿಸಿದರು. ಇದಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿದ ಬಳಿಕ ಸಭೆ ಮುಂದುವರಿಯಿತು.