ಸೇನಾ ರ‍್ಯಾಲಿಗೆ ಅಗತ್ಯ ಸಹಕಾರ: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

KannadaprabhaNewsNetwork |  
Published : Nov 17, 2024, 01:20 AM IST
14ಕೆಪಿಎಲ್4:ಕೊಪ್ಪಳ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ  ಸೇನಾ ನೇಮಕಾತಿ ರ‍್ಯಾಲಿಯ ಪೂರ್ವಭಾವಿ ಸಭೆ ಜರುಗಿತು.  | Kannada Prabha

ಸಾರಾಂಶ

ಭಾರತೀಯ ಸೇನೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಗಾಗಿ ನ. 26ರಿಂದ ಡಿಸೆಂಬರ್ 8ರವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿಗೆ ಜಿಲ್ಲಾಡಳಿತ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು.

ನ.26 ರಿಂದ ಡಿ.8 ರವರೆಗೆ ಕೊಪ್ಪಳದಲ್ಲಿ ಸೇನಾ ಭರ್ತಿ ರ‍್ಯಾಲಿ । ಪೂರ್ವಭಾವಿ ಸಭೆಕನ್ನಡಪ್ರಭ ವಾರ್ತೆ ಕೊಪ್ಪಳ

ಭಾರತೀಯ ಸೇನೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಗಾಗಿ ನ. 26ರಿಂದ ಡಿಸೆಂಬರ್ 8ರವರೆಗೆ ಜಿಲ್ಲೆಯಲ್ಲಿ ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿಗೆ ಜಿಲ್ಲಾಡಳಿತ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಸೇನಾ ನೇಮಕಾತಿ ರ‍್ಯಾಲಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಾದ ಬೆಳಗಾವಿ, ಕಲಬುರಗಿ, ಕೊಪ್ಪಳ, ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಈ ರ‍್ಯಾಲಿಯ ಯಶಸ್ವಿ ನಿರ್ವಹಣೆಗಾಗಿ ವೇದಿಕೆ ಸಮಿತಿ, ಭದ್ರತಾ ಸಮಿತಿ, ಮೂಲಭೂತ ಸೌಕರ್ಯ ಸಮಿತಿ, ಸಾರಿಗೆ ಸಮಿತಿ, ಆಹಾರ ಸಮಿತಿ, ವಸತಿ ಸಮಿತಿ, ಆರೋಗ್ಯ ನೈರ್ಮಲ್ಯೀಕರಣ ಸಮಿತಿ, ಪ್ರಚಾರ ಮತ್ತು ಮಾಧ್ಯಮ ಸಮಿತಿ, ವಿದ್ಯುತ್ ಸರಬರಾಜು ಸಮಿತಿ ಹಾಗೂ ದಾಖಲೆಗಳ ಪರಿಶೀಲನೆ ಸಮಿತಿ ರಚಿಸಲಾಗಿದೆ ಎಂದರು.

ಎಲ್ಲಾ ಸಮಿತಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಹಾಗೂ ನಿಯೋಜಿತ ಸಿಬ್ಬಂದಿಗೆ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಮತ್ತು ಬಳಕೆಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಹಾಗೂ ಕ್ರೀಡಾಂಗಣದಲ್ಲಿ ಸ್ವಚ್ಛತೆಗೆ ಕ್ರಮ ವಹಿಸಬೇಕು. ಅಭ್ಯರ್ಥಿಗಳಿಗೆ ತಂಗಲು ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಬೇಕು. ಕ್ರೀಡಾಂಗಣದಲ್ಲಿ ಆರೋಗ್ಯ ಅಧಿಕಾರಿಗಳ ತಂಡ ಹಾಗೂ ಅಂಬುಲೆನ್ಸ್ ವ್ಯವಸ್ಥೆ, ಅಗ್ನಿಶಾಮಕ ತಂಡ, ವಿದ್ಯುತ್ ದೀಪದ ವ್ಯವಸ್ಥೆ ಸೇರಿದಂತೆ ಮುಂತಾದ ವ್ಯವಸ್ಥೆಗಳು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೇಮಕಾತಿ ರ‍್ಯಾಲಿಗೆ ಆಗಮಿಸುವ ಎಲ್ಲಾ ಅಭ್ಯರ್ಥಿಗಳಿಗೆ ಹಾಗೂ ರ‍್ಯಾಲಿ ವೇಳೆ ಸಾರ್ವಜನಿಕರಿಗೆ ಯಾವುದೇ ರಿತಿಯ ತೊಂದರೆ ಆಗದಂತೆ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಲಾಗುವುದು. ಜನಸಂದಣಿ ನಿರ್ವಹಣೆಗಾಗಿ ಕ್ರೀಡಾಂಗಣದ ಹೊರಗಡೆ, ಮುಂಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಸಾರ್ವಜನಿಕ ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ಹೇಳಿದರು.

ಬೆಳಗಾವಿಯ ಸೇನಾ ನೇಮಕಾತಿ ನಿರ್ದೇಶಕ ಕರ್ನಲ್ ಎ.ಕೆ. ಉಪಾಧ್ಯಾಯ ಮಾತನಾಡಿ, ಜಿಲ್ಲೆಯಲ್ಲಿ ನ.26ರಿಂದ ಡಿ.8 ರವರೆಗೆ ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿಗೆ ಕೊಪ್ಪಳ ಜಿಲ್ಲಾಡಳಿತದಿಂದ ನಮಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು. ನೇಮಕಾತಿ ಪಾರದರ್ಶಕವಾಗಿ ನಡೆಸುತ್ತಿರುವುದರಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಮತ್ತು ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆಗಾಗಿ ಕಂದಾಯ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೂ ನಿಯೋಜನೆ ಮಾಡಬೇಕು. ಸೇನಾ ನೇಮಕಾತಿ ರ‍್ಯಾಲಿಯು ಸುಸುತ್ರವಾಗಿ ನಡೆದರೆ ಕೊಪ್ಪಳ ಜಿಲ್ಲಾಡಳಿತಕ್ಕೆ ಮತ್ತು ನಮ್ಮ ಸೇನೆಗೂ ಒಳ್ಳೆಯ ಹೆಸರು ಬರುತ್ತದೆ. ಹಾಗಾಗಿ ರ‍್ಯಾಲಿಯನ್ನು ಸುವ್ಯವಸ್ಥಿತವಾಗಿ ನಡೆಸಲು ತಮ್ಮ ಸಹಕಾರ ನಮಗೆ ಅತ್ಯಗತ್ಯವಾಗಿದೆ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಬೆಳಗಾವಿಯ ಸೇನಾ ನೇಮಕಾತಿ ಕಚೇರಿಯ ಸುಬೇದಾರ ಮೇಜರ್ ದಿನೇಶ್ ರಾಮ್ ಲೋಹಿಯಾ, ನೈಬ್ ಸುಬೇದಾರ್ ಮಾಲಕೀತ್ ಸಿಂಗ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ನಾಗಮಣಿ ಹೊಸಮನಿ, ಕೊಪ್ಪಳ ನಿರ್ಮಿತಿ ಕೇಂದ್ರ ವ್ಯವಸ್ಥಾಪಕ ಶಶಿಧರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ