ಗುಂಡ್ಲುಪೇಟೆ ಕ್ಷೇತ್ರದಲ್ಲಿ ಚುನಾವಣೆಗೆ ಅಗತ್ಯ ಸಿದ್ದತೆ

KannadaprabhaNewsNetwork | Published : Mar 29, 2024 12:53 AM

ಸಾರಾಂಶ

ಮುಂದಿನ ತಿಂಗಳು ನಡೆವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಿನ್ನೆಲೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಡಾ. ದಯಾನಂದ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಮುಂದಿನ ತಿಂಗಳು ನಡೆವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಿನ್ನೆಲೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಡಾ. ದಯಾನಂದ ತಿಳಿಸಿದರು.ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ ಪತ್ರಕರ್ತರೊಂದಿಗೆ ಲೋಕಸಭೆ ಚುನಾವಣಾ ಪೂರ್ವ ಸಿದ್ಧತೆಗಳ ಕುರಿತು ಮಾತನಾಡಿ, ಕ್ಷೇತ್ರದಲ್ಲಿ 249 ಮತಗಟ್ಟೆ ತೆರಯಲಾಗಿದೆ ಎಂದರು. ಕ್ಷೇತ್ರದಲ್ಲಿ 1,05,346 ಪುರುಷರು, 1,19,954 ಮಹಿಳೆಯರು, 16 ತೃತೀಯ ಲಿಂಗಿಗಳು ಹಾಗೂ 3729 ಹಿರಿಯ ನಾಗರೀಕರು, 3629 ವಿಶೇಷಚೇತನರು ಸೇರಿದಂತೆ 2,15,316 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದರು. ಹಿರಿಯ ನಾಗರೀಕರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ. ಕೆಲವರು ಮತಗಟ್ಟೆಗೆ ಬಂದು ಮತದಾನ ಮಾಡುವುದಾಗಿ ಹೇಳಿದ್ದರೆ, ಹಲವರು ಮನೆಯಲ್ಲೇ ಮತದಾನ ಮಾಡುವುದಾಗಿ ಕೋರಿದ್ದು ಮತದಾನಕ್ಕೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.ತಾಲೂಕಿನ ಹಿರೀಕಾಟಿ, ಕೇರಳ ಗಡಿಯ ಮದ್ದೂರು, ತಮಿಳುನಾಡು ಗಡಿಯ ಕೆಕ್ಕನಹಳ್ಳ ಬಳಿ ಚೆಕ್‌ ಪೋಸ್ಟ್‌ ಆರಂಭವಾಗಿದ್ದು ವಾಹನಗಳ ತಪಾಸಣೆ ಕಟ್ಟುನಿಟ್ಟಾಗಿ ನಡೆಯುತ್ತಿದೆ. ತಪಾಸಣೆಗೆ ಮೂರು ತಂಡಗಳನ್ನು ನೇಮಿಸಲಾಗಿದ್ದು, ಅಕ್ರಮ ಹಣ ಸಾಗಾಣಿಕೆ ಸೇರಿದಂತೆ ಚುನಾವಣಾ ಇನ್ನಿತರ ಅಕ್ರಮ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ಯಾವುದೇ ರಾಜಕೀಯ ಪಕ್ಷಗಳ ಸಭೆ, ಸಮಾರಂಭ ನಡೆಸಲು ಅನುಮತಿ ಕಡ್ಡಾಯ ಆದರೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಿದರೆ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿ ಅನುಮತಿ ನೀಡಲಿದ್ದಾರೆ ಎಂದರು. ರಾಜಕೀಯೇತರ ಸಭೆ, ಸಮಾರಂಭ ಹಾಗೂ ಜಾತ್ರೆ, ಉತ್ಸವ, ಮದುವೆ, ನಾಮಕರಣ, ಗೃಹ ಪ್ರವೇಶಕ್ಕೆ ಅನುಮತಿ ಬೇಕಿಲ್ಲ ಆದರೂ ಆದರೂ ಆಫ್‌ಲೈನ್‌ ಮೂಲಕ ಅನುಮತಿ ನೀಡುತ್ತೇವೆ. ರಾಜಕೀಯ ಚಟುವಟಿಕೆಗಳನ್ನು ಮಾಡುವಂತಿಲ್ಲ ಎಂದರು. ಸಾರ್ವಜನಿಕರು ಚುನಾವಣಾ ಸಂಬಂಧ ಯಾವುದೇ ದೂರುಗಳಿದ್ದಲ್ಲಿ ದೂ.ಸಂಖ್ಯೆ 08229-222225, ಪೊಲೀಸರ ಸಹಾಯವಾಣಿ 112 ಗೆ ಕೂಡ ಸಂಪರ್ಕಿಸಬಹುದು ಎಂದರು.ನೂತನ ತಹಸೀಲ್ದಾರ್‌ ಮಂಜುನಾಥ್‌ ಮಾತನಾಡಿ, ಕ್ಷೇತ್ರದಲ್ಲಿ 249 ಮತಗಟ್ಟಗಳಿದ್ದು ಪ್ರತಿ 10 ಮತಗಟ್ಟೆಗೆ ಓರ್ವ ಸೆಕ್ಟರ್‌ ಅಧಿಕಾರಿಯಂತೆ 25 ಸೆಕ್ಟರ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು. ತಾಲೂಕಿನ ಮತಗಟ್ಟೆಗಳಿಗೆ ಭೇಟಿ ನೀಡಿದ್ದು ಮೂಲಭೂತ ಸೌಕರ್ಯ ಪರಿಶೀಲನೆ ನಡೆಸಲಾಗಿದೆ. ಏ.5 ರಂದು ಪೊಲೀಂಗ್‌ ಅಧಿಕಾರಿಗಳಿಗೆ ಮೊದಲ ಹಂತದ ತರಬೇತಿ ನೀಡಲಾಗುತ್ತದೆ ಎಂದರು. ತಾಲೂಕಿನ ಬೊಮ್ಮಲಾಪುರದಲ್ಲಿ 1 ಮತಗಟ್ಟೆ ಅತೀ ಸೂಕ್ಷ್ಮ ಮತಗಟ್ಟೆಯಾಗಿರುವ ಹಿನ್ನೆಲೆ ಈಗಾಗಲೇ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಗ್ರಾಮಸ್ಥರು ಸಹ ಶಾಂತಿಯುತ ಮತದಾನಕ್ಕೆ ಒಪ್ಪಿದ್ದಾರೆ ಎಂದರು.ಚುನಾವಣೆ ಹಾಗೂ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಎಲ್ಲಾ ಇಲಾಖೆಗಳ ಜೊತೆಗೂಡಿ ವ್ಯವಸ್ಥಿತವಾಗಿ ಚುನಾವಣೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಗುಂಡ್ಲುಪೇಟೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್. ಪರಶಿವಮೂರ್ತಿ, ಬೇಗೂರು ಸರ್ಕಲ್‌ ಇನ್ಸ್‌ಪೆಕ್ಟರ್‌ ವಿ.ಸಿ.ವನರಾಜು ಇದ್ದರು.

Share this article