ಹಾವೇರಿ: ನವೆಂಬರ್ 13ರಂದು ನಡೆಯಲಿರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನಕ್ಕೆ ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದರು.
ಮತಗಟ್ಟೆಗಳಿಗೆ ವೆಬ್‌ಕಾಸ್ಟಿಂಗ್ ಸೌಲಭ್ಯ: ಕ್ಷೇತ್ರದಲ್ಲಿ 241 ಮತಗಟ್ಟೆಗಳ ಪೈಕಿ 92 ಮತಗಟ್ಟೆಗಳನ್ನು ಕ್ರಿಟಿಕಲ್ ಎಂದು ಗುರುತಿಸಲಾಗಿದೆ. 121 ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು, ಇಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ ಕಾರ‍್ಯಾಲಯ, ಜಿಲ್ಲಾ ಕಂಟ್ರೋಲ್ ರೂಂ, ಸಿಇಓ ಕಚೇರಿ ಮತ್ತು ಆರ್‌ಓ ಕಚೇರಿಯಿಂದ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಒಟ್ಟು 100 ಜನ ಸೂಕ್ಷ್ಮ ವೀಕ್ಷಕರನ್ನು ಸೂಕ್ಷ್ಮ ಮತಗಟ್ಟೆಗಳಿಗೆ ನೇಮಿಸಲಾಗಿದೆ. 20 ವಿಡಿಯೋ ಗ್ರಾಫರ್‌ಗಳನ್ನು ಸಹ ನಿಯೋಜಿಸಲಾಗಿದೆ.
8 ಅಭ್ಯರ್ಥಿಗಳು ಕಣದಲ್ಲಿ: ಈ ಚುನಾವಣೆಯಲ್ಲಿ ಒಟ್ಟು 26 ಅಭ್ಯರ್ಥಿಗಳಿಂದ 46 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಪರಿಶೀಲನೆಯ ವೇಳೆಯಲ್ಲಿ 7 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿದ್ದವು. 11 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಬಳಿಕ ಅಂತಿಮವಾಗಿ 8 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.ಒಟ್ಟು 2,37,525 ಮತದಾರರು: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಅಕ್ಟೋಬರ್ 25ರಂದು ಅಂತಿಮವಾಗಿ ಸಿದ್ಧಪಡಿಸಿದಂತೆ 83-ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ 1,21,443 ಪುರುಷರು ಹಾಗೂ 1,16,076 ಮಹಿಳೆಯರು ಮತ್ತು ಇತರೆ 6 ಜನ ಸೇರಿ ಒಟ್ಟು 2,37,525 ಮತದಾರರು ಮತದಾನ ಮಾಡಲು ಅರ್ಹರಿದ್ದಾರೆ. ಕೊನೆಯ 48 ಗಂಟೆಗಳಿಂದ ಅನ್ವಯವಾಗುವಂತೆ 163 ಬಿಎನ್‌ಎಸ್‌ಎಸ್ 2023 ಸೆಕ್ಷನ್ ಜಾರಿ ಮಾಡುವ ಆದೇಶ ಮಾಡಲಾಗಿದೆ. ಕೊನೆಯ 48 ಗಂಟೆಗಳ ಅವಧಿಯನ್ನು ಡ್ರೈ ಡೇ (ಶುಷ್ಕ ದಿನ) ಎಂದು ಆದೇಶ ಮಾಡಲಾಗಿದೆ. ಅಕ್ರಮ ಮದ್ಯ ದಾಸ್ತಾನು ಶೋಧನೆ ಮತ್ತು ಮದ್ಯ ಹಂಚಿಕೆ ಬಗ್ಗೆ ನಿಗಾವಹಿಸಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಕಣದಲ್ಲಿರುವ ಅಭ್ಯರ್ಥಿಗಳ ಯಾದಿ ಅಂತಿಮಗೊಂಡ 24 ಗಂಟೆಗಳೊಳಗಾಗಿ ಒಟ್ಟು 146 ಸೇವಾ ಮತದಾರರಿಗೆ ಇಟಿಪಿಬಿಎಸ್ ತಂತ್ರಾಂಶದ ಮೂಲಕ ಮತಪತ್ರಗಳನ್ನು ಕಳುಹಿಸಲಾಗಿದೆ. ಮರಳಿ ಬಂದ ಇಟಿಬಿಪಿಎಸ್ ಮತ ಪತ್ರಗಳನ್ನು ಕ್ಯೂಆರ್ ಕೋಡ್ ಸ್ಕಾನರ್ ಮೂಲಕ ಮತ ಎಣಿಕೆಯ ದಿನದಂದು ಮತಎಣಿಕೆ ಮಾಡಲಾಗುತ್ತದೆ. ಶಿಗ್ಗಾಂವ್ ಕ್ಷೇತ್ರದಲ್ಲಿ ಒಟ್ಟು 2802 ಜನರು 85 ರ‍್ಷ ಮೇಲ್ಪಟ್ಟ ಮತದಾರರಿದ್ದು, ಈ ಪೈಕಿ 208 ಜನರು ಮನೆಯಲ್ಲಿಯೇ ಮತದಾನ ಮಾಡುವುದಾಗಿ ಕೋರಿದಂತೆ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ 85 ವರ್ಷ ಮೇಲ್ಪಟ್ಟ 203 ಮತದಾರರು ಮತದಾನ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 5252 ಪಿಡಬ್ಲೂಡಿ ಮತದಾರರಿದ್ದಾರೆ. ಈ ಪೈಕಿ 94 ಜನರು ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಅನುಮೋದನೆಗೊಂಡ 92 ಪಿ.ಡಬ್ಲೂಡಿ ಮತದಾರರ ಪೈಕಿ 91 ಜನರು ಮತಹಕ್ಕನ್ನು ಚಲಾಯಿಸಿದ್ದಾರೆ. ಮನೆಯಲ್ಲಿಯೇ ಮತದಾನ ಮಾಡಲು ಕೋರಿ ಬಂದಿದ್ದ 302 ಅರ್ಜಿಗಳ ಪೈಕಿ 2 ಅರ್ಜಿಗಳು ತಿರಸ್ಕಾರವಾಗಿದ್ದವು. 300 ಜನರಿಗೆ ಮನೆಯಲ್ಲಿಯೇ ಮತಹಕ್ಕನ್ನು ಚಲಾಯಿಸಲು ಅವಕಾಶ ನೀಡಿದ ಪೈಕಿ 294 ಜನರು ಮಾತ್ರ ಮತ ಹಕ್ಕನ್ನು ಚಲಾಯಿಸಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ‍್ಯನಿರ್ವಹಣಾಧಿಕಾರಿಗಳಾದ ಅಕ್ಷಯ್ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಂಶುಕುಮಾರ, ಅಪರ ಜಿಲ್ಲಾಧಿಕಾರಿಗಳಾದ ಡಾ.ನಾಗರಾಜ್ ಇದ್ದರು.