ಕಡೂರು ತಾಲೂಕಿನ 22 ಹಳ್ಳಿಗಳನ್ನು ಕಂದಾಯ ಗ್ರಾಮವಾಗಿಸಲು ಅಗತ್ಯ ಕ್ರಮ

KannadaprabhaNewsNetwork |  
Published : Nov 22, 2025, 01:30 AM IST
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ವಿಧಾನಸಭೆಯ ಅರ್ಜಿಗಳ ಸಮಿತಿಯು ಅಧಿಕಾರಿಗಳ ಜೊತೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ವಿಧಾನ ಸಭೆ ಅರ್ಜಿಗಳ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ ಮಾತನಾಡಿದರು | Kannada Prabha

ಸಾರಾಂಶ

ಚಿಕ್ಕಮಗಳೂರು, ಕಡೂರು ತಾಲೂಕಿನ ಎಮ್ಮೆದೊಡ್ಡಿ ಹಾಗೂ ಕಾಮೇನಹಳ್ಳಿ ವ್ಯಾಪ್ತಿಯ 22 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ವಿಧಾನಸಭೆ ಉಪಸಭಾಪತಿ ಹಾಗೂ ವಿಧಾನ ಸಭೆ ಅರ್ಜಿಗಳ ಸಮಿತಿ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಧಾನಸಭೆ ಅರ್ಜಿಗಳ ಸಮಿತಿ ಅಧಿಕಾರಿಗಳ ಸಭೆಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಡೂರು ತಾಲೂಕಿನ ಎಮ್ಮೆದೊಡ್ಡಿ ಹಾಗೂ ಕಾಮೇನಹಳ್ಳಿ ವ್ಯಾಪ್ತಿಯ 22 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ವಿಧಾನಸಭೆ ಉಪಸಭಾಪತಿ ಹಾಗೂ ವಿಧಾನ ಸಭೆ ಅರ್ಜಿಗಳ ಸಮಿತಿ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಧಾನಸಭೆ ಅರ್ಜಿಗಳ ಸಮಿತಿ ಅಧಿಕಾರಿಗಳ ಜೊತೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅರಣ್ಯ ಹಾಗೂ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು, ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಹತ್ತಾರು ವರ್ಷಗಳಿಂದ ವಾಸವಾಗಿರುವ ಈ ಗ್ರಾಮದ ನಿವಾಸಿಗಳಿಗೆ ಸರ್ಕಾರದಿಂದ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಆದರೆ ಇಡೀ ಜಾಗ ಅರಣ್ಯ ಇಲಾಖೆ ಹೆಸರಿನಲ್ಲಿದೆ. ಹಾಗಾಗಿ ಅವರಿಗೆ ಹಕ್ಕುಪತ್ರವಾಗಲಿ, ಇ-ಖಾತೆ ಸ್ವತ್ತು ಮಾಡಲಾಗಲಿ ಸಾಧ್ಯವಾಗಿಲ್ಲ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಸದಸ್ಯರು ಹಾಗೂ ಕಡೂರು ಶಾಸಕ ಕೆ.ಎಸ್.ಆನಂದ್ ಗಮನ ಸೆಳೆದರು. ಈ ಬಗ್ಗೆ ಚರ್ಚೆ ನಡೆದು, ಈಗಾಗಲೇ ಜಿಲ್ಲಾಧಿಕಾರಿ ಪರ್ಯಾಯ ಜಾಗವನ್ನು ಗುರುತಿಸಿದ್ದು, ಈ ಜಾಗವನ್ನು ಅರಣ್ಯ ಇಲಾಖೆಗೆ ನೀಡಲು ಸಭೆ ನಿರ್ಧರಿಸಿತು. ಅಲ್ಲಿರುವ ನಿವಾಸಿಗಳಿಗೆ ಇರುವ ಸ್ಥಳದಲ್ಲೇ ಹಕ್ಕುಪತ್ರ ಹಾಗೂ ಇ-ಸ್ವತ್ತು ಮಾಡಿಸಿಕೊಡಲು ತೀರ್ಮಾನ ಮಾಡಲಾಯಿತಲ್ಲದೆ, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಮಸ್ಯೆಗೆ ಪರಿಹಾರ ನೀಡುವಂತೆ ಸಭೆ ಸಲಹೆ ನೀಡಿತು. ಈ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಬಗ್ಗೆಯೂ ಸಭೆ ನಿರ್ಧಾರ ಕೈಗೊಂಡಿತು.ಕಡೂರು ಪಟ್ಟಣದಲ್ಲಿ ತುರ್ತಾಗಿ ಒಳಚರಂಡಿ ವ್ಯವಸ್ಥೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ ಸಂದರ್ಭ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗಿರುವ ಬಗ್ಗೆ ಸಮಿತಿ ಸದಸ್ಯ ಹಾಗೂ ಶಾಸಕ ಕೆ.ಎಸ್.ಆನಂದ್ ಸಭೆ ಗಮನ ಸೆಳೆದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಇಲಾಖೆ ಮುಖ್ಯ ಎಂಜಿನಿಯರ್ ಸುಭಾಷ್ ನಾಯಕ್ ಮಾತನಾಡಿ, ಈ ಬಗ್ಗೆ ₹156 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಈ ಪೈಕಿ ₹೩೪ ಕೋಟಿ ಬಿಡುಗಡೆಯಾಗಿದೆ ಎಂದು ಆನಂದ್ ತಿಳಿಸಿದರು.ಚಿಕ್ಕಮಗಳೂರು ನಗರದಲ್ಲಿ ಕಳಪೆಯಾಗಿರುವ ಒಳಚರಂಡಿ ಕಾಮಗಾರಿ ಸರಿಪಡಿಸುವ ಬಗ್ಗೆ ಚರ್ಚೆ ನಡೆದಾಗ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ 2012ರಲ್ಲಿ ಆರಂಭವಾದ ಈ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಈ ಕಾಮಗಾರಿಯನ್ನು ಜನವರಿ ತಿಂಗಳ ಒಳಗೆ ಪೂರ್ಣಗೊಳಿಸುವುದಾಗಿ ತಿಳಿಸಿದರು.ಕಡೂರು ಪಟ್ಟಣದ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡುವ ಕುರಿತು ಶಾಸಕ ಕೆ.ಎಸ್.ಆನಂದ್ ಸಭೆ ಗಮನಕ್ಕೆ ತಂದರು. ಈ ಬಗ್ಗೆ ಚರ್ಚಿಸಿದ ಸಭೆ ಈ ಸಂಬಂಧದ ಅಗತ್ಯ ಪ್ರಕ್ರಿಯೆಗಳು ಈಗಾಗಲೇ ಮುಗಿದಿದ್ದು ಸಂಬಂಧಿಸಿದ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿತು.ಬರಪೀಡಿತ ಪ್ರದೇಶದ ಕಡೂರು ತಾಲೂಕಿನ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಬಗ್ಗೆ ಚರ್ಚೆ ನಡೆಸಿದ ಸಭೆ ಅಗತ್ಯ ಕ್ರಮ ಕೈಗೊಂಡು ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುವ ಮೂಲಕ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ವೈದ್ಯಕೀಯ ಕಾಲೇಜಿನ ಅವಶ್ಯಕತೆಗಳ ಬಗ್ಗೆ ತಿಳಿಸಿದರು. ರೈನಿ ರಿಸರ್ಚ್ ಅಂಡ್ ಮ್ಯಾನ್ಯುಫ್ಯಾಕ್ಚರ್ ಸಂಸ್ಥೆ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್ ಮಳೆ ನೀರಿನ ಕೊಯ್ಲು ಯೋಜನೆ ಬಗ್ಗೆ ಸಭೆಗೆ ವಿಸ್ತೃತ ಮಾಹಿತಿ ನೀಡಿದರು.ಸಮಿತಿ ಸದಸ್ಯರು ಹಾಗೂ ಶಾಸಕ ಎಸ್.ಮುನಿರಾಜು, ಯು.ಬಿ.ಬಣಕಾರ್, ಡಾ.ಅವಿನಾಶ್ ಉಮೇಶ್ ಜಾದವ್ ಎಸ್.ಟಿ.ಸೋಮಶೇಖರ್, ಡಾ.ಎಚ್.ಡಿ.ರಂಗನಾಥ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ