ಲೋಕಾಯುಕ್ತ ಕಾಯ್ದೆ ಅರಿವು ಮೂಡಿಸುವುದು ಅಗತ್ಯ: ನ್ಯಾ. ಫಣೀಂದ್ರ

KannadaprabhaNewsNetwork | Published : Nov 20, 2023 12:45 AM

ಸಾರಾಂಶ

ನಾಗರಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಬಗ್ಗೆಯೂ ಸೂಕ್ತ ಅರಿವು ಹಾಗೂ ಜಾಗೃತಿ ಮೂಡಿಸುವಂತೆ ರಾಜ್ಯ ಉಪ ಲೋಕಾಯುಕ್ತರು ಹಾಗೂ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಜಿಲ್ಲಾ ಸೇವಾ ಕಾನೂನು ಪ್ರಾಧಿಕಾರಕ್ಕೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ನಾಗರಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಬಗ್ಗೆಯೂ ಸೂಕ್ತ ಅರಿವು ಹಾಗೂ ಜಾಗೃತಿ ಮೂಡಿಸುವಂತೆ ರಾಜ್ಯ ಉಪ ಲೋಕಾಯುಕ್ತರು ಹಾಗೂ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಜಿಲ್ಲಾ ಸೇವಾ ಕಾನೂನು ಪ್ರಾಧಿಕಾರಕ್ಕೆ ತಿಳಿಸಿದ್ದಾರೆ.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಭಾನುವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ನ್ಯಾಯಾಂಗ ಇಲಾಖೆ ಏರ್ಪಡಿಸಿದ್ದ ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತ ಸಂಸ್ಥೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ ಕುರಿತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜನರಿಗೆ ಸಕಾಲಕ್ಕೆ ಸ್ಪಂದಿಸುವ ಗುರಿಯೊಂದಿಗೆ ಲೋಕಾಯುಕ್ತ ಸಂಸ್ಥೆ ಹಾಗೂ ಕಾನೂನು ಸೇವಾ ಪ್ರಾಧಿಕಾರಗಳೆರಡೂ ಕಾರ್ಯ ನಿರ್ವಹಿಸುತ್ತಿವೆ. ಕಾನೂನು ಸೇವಾ ಪ್ರಾಧಿಕಾರದಿಂದ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕಾನೂನಿನ ಅರಿವು ಜೊತೆಗೆ ಲೋಕ್ ಅದಾಲತ್ ಮೂಲಕ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸುತ್ತಿರುವುದು ಜನರಿಗೆ ನೆರವಾಗಿದೆ. ಅದೇ ರೀತಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಬಗ್ಗೆಯೂ ಜಾಗೃತಿ ಮುಡಿಸಿದಲ್ಲಿ ಇನ್ನೂ ಹೆಚ್ಚಿನ ಜನರ ಸಮಸ್ಯೆಗಳ ನಿವಾರಣೆಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.

ನ್ಯಾಯದಾನದ ಮೂಲಕ ಜನರ ಬಳಿಗೆ ಹೋಗುವ ಅವಕಾಶ ಕಾನೂನು ಸೇವಾ ಪ್ರಾಧಿಕಾರಕ್ಕೆ ದೊರೆತಿದೆ. ತ್ವರಿತ ನ್ಯಾಯದಾನದಲ್ಲಿ ಇದು ಪರಿಣಾಮಕಾರಿಯಾಗಿದೆ. ಅದರಂತೆ ಲೋಕಾಯುಕ್ತ ಸಂಸ್ಥೆಯು ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ, ಸಮಾನತೆ, ನಿಷ್ಪಕ್ಷಪಾತ ಕಾಯ್ದುಕೊಳ್ಳಲು ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸುತ್ತಿದ್ದು, ಈ ಎರಡೂ ಸಂಸ್ಥೆ ಗಳು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವ ಮೂಲಕ ಹೆಚ್ಚಿನ ಜನರಿಗೆ ನೆರವಾಗುತ್ತಿದೆ ಎಂದು ಹೇಳಿದರು.

ಸಮಾಜದ ಅತ್ಯಂತ ಬಡ ಹಾಗೂ ಹಿಂದುಳಿದವರ್ಗ ಸ್ಪಂದಿಸುವ ಸದಾವಕಾಶ ನಮಗೆ ಲಭಿಸಿದೆ. ಸಮಾಜದ ಒಳತಿಗಾಗಿ, ಉತ್ತಮ ಸಾರ್ವಜನಿಕ ಆಡಳಿತಕ್ಕಾಗಿ, ನ್ಯಾಯಾಂಗ ವ್ಯವಸ್ಥೆ, ಲೋಕಾಯುಕ್ತ ಸಂಸ್ಥೆ ಹಾಗೂ ಸರ್ಕಾರಿ ಇಲಾಖೆಗಳು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವುದರಿಂದ ಹೆಚ್ಚಿನ ಜನರಿಗೆ ನೆರವಾಗಲಿದೆ. ಅದರಂತೆ ಸರ್ಕಾರದ ಸವಲತ್ತು ಮತ್ತು ಕಾನೂನುಗಳ ಬಗ್ಗೆ ಅರಿವು ಮೂಡಿಸುವದರಿಂದ ಸಾರ್ವಜನಿಕರಲ್ಲಿ ಹೆಚ್ಚಿನ ವಿಶ್ವಾಸ ಮೂಡಲಿದೆ ಎಂದು ಹೇಳಿದರು.

ಆನ್ಲೈನ್ ಮೂಲಕ ಉಪನ್ಯಾಸ ನೀಡಿದ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ರಾಜೇಂದ್ರ ಮಾತನಾಡಿ, ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ಕಾರ್ಯ ಸಕಾರಾತ್ಮಕ ಕ್ರಮವಾಗಿದೆ. ಇದರಿಂದ ಬೆಂಗಳೂರಿಗೆ ನಾಗರಿಕರು ಅಲೆದಾಡುವ ಪರಿಸ್ಥಿತಿ ತಪ್ಪಲಿದೆ. ಯಾದಗಿರಿ 12ನೇ ಜಿಲ್ಲೆಗೆ ಭೇಟಿ ನೀಡುವ ಮೂಲಕ ಅವರು ಆಡಳಿತ ಸುಧಾರಣೆಗೆ ಮತ್ತು ದೂರುಗಳ ಸ್ಪಂದನೆಗೆ ನೆರವಾಗಿದ್ದು, ತ್ವರಿತ ನ್ಯಾಯದಾನಕ್ಕೂ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಬಿ.ಜಯಂತಕುಮಾರ್ ಸ್ವಾಗತಿಸಿದರು. ಯಾದಗಿರಿ ಸಿವಿಲ್ ನ್ಯಾಯಾಧೀಶರಾದ ಅಶ್ರಿನ್ ನಿರೂಪಿಸಿದರು. ಶಹಾಪುರದ ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ಧರಾಮ ಟಿ.ಪಿ ಉಪ ಲೋಕಾಯುಕ್ತರ ಪರಿಚಯ ನೀಡಿದರು.

Share this article